ನೇರಳೆ ಮಾರ್ಗದ ರೈಲುಗಳಲ್ಲಿ ತಾಂತ್ರಿಕ ದೋಷ; ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ 30 ನಿಮಿಷ ರೈಲಿನಲ್ಲೇ ಸಿಲುಕಿದ ಪ್ರಯಾಣಿಕರು

ಬೆಂಗಳೂರಿನ ಲೈಫ್‌ಲೈನ್ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಮಂಗಳವಾರ ಸಂಜೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ವಿದ್ಯುತ್ ಸಂಪರ್ಕ ಸಮಸ್ಯೆ ಕಾಣಿಸಿಕೊಂಡು, ರೈಲು ಸುಮಾರು 30 ನಿಮಿಷಗಳ ಕಾಲ ನಿಂತುಹೋಗಿದೆ. ಕಚೇರಿ ಮುಗಿಸಿ ಮನೆಗೆ ಹೊರಟಿದ್ದ ನೂರಾರು ಪ್ರಯಾಣಿಕರು ಒಳಗಡೆ ಸಿಲುಕಿಕೊಂಡು ಪರದಾಡಿದ್ದಾರೆ. ಲೋಕೋಪೈಲಟ್ ಹಸ್ತಚಾಲಿತವಾಗಿ ಬಾಗಿಲು ತೆರೆದ ನಂತರ ಪ್ರಯಾಣಿಕರು ಇಳಿದಿದ್ದು, BMRCL ಕ್ಷಮೆಯಾಚಿಸಿದೆ.

ನೇರಳೆ ಮಾರ್ಗದ ರೈಲುಗಳಲ್ಲಿ ತಾಂತ್ರಿಕ ದೋಷ; ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ 30 ನಿಮಿಷ ರೈಲಿನಲ್ಲೇ ಸಿಲುಕಿದ ಪ್ರಯಾಣಿಕರು
ಕಬ್ಬನ್ ಪಾರ್ಕ್ ಮೆಟ್ರೋ ಸಮಸ್ಯೆ
Edited By:

Updated on: Jun 23, 2026 | 7:50 PM

ಬೆಂಗಳೂರು, ಜೂ.23: ರಾಜಧಾನಿಯ ಲೈಫ್‌ಲೈನ್ ಎಂದೇ ಕರೆಯಲ್ಪಡುವ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ಮಂಗಳವಾರ ಸಂಜೆ ಭಾರಿ ವ್ಯತ್ಯಯ ಉಂಟಾಗಿದೆ. ನೇರಳೆ ಮಾರ್ಗದ (Purple Line) ಪ್ರಮುಖ ನಿಲ್ದಾಣವಾದ ಕಬ್ಬನ್ ಪಾರ್ಕ್‌ನಲ್ಲಿ (Cubbon Park Metro Station) ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.

ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಮೆಟ್ರೋ ರೈಲಿನಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದರಿಂದಾಗಿ ಸುಮಾರು 30 ನಿಮಿಷಗಳ ಕಾಲ ಪ್ರಯಾಣಿಕರು ರೈಲಿನ ಒಳಗಡೆಯೇ ಸಿಲುಕಿಕೊಳ್ಳಬೇಕಾಯಿತು. ಆ ತಕ್ಷಣಕ್ಕೆ ಬಾಗಿಲುಗಳು ಓಪನ್ ಆಗದ ಕಾರಣ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತ್ತು. ತದನಂತರ ಲೋಕೋಪೈಲಟ್ ಅವರು ಮ್ಯಾನುಯಲ್ ಆಗಿ ಮೆಟ್ರೋ ರೈಲಿನ ಬಾಗಿಲುಗಳನ್ನು ತೆರೆದಿದ್ದು, ಬಳಿಕ ಪ್ರಯಾಣಿಕರು ನಿಟ್ಟುಸಿರು ಬಿಟ್ಟು ರೈಲಿನಿಂದ ಕೆಳಗೆ ಇಳಿದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಪ್ರವಾಸಿಗರಿಗೆ ಸಿಗಲಿದೆ ಸ್ಥಳೀಯ ಗೈಡ್​​​ಗಳು: ಗೈಡ್‌ಗಳನ್ನು ಆಯ್ಕೆ ಮಾಡುವುದು ಹೇಗೆ?

ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. “ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ಈ ಮಾರ್ಗದ ಕೆಲವು ರೈಲುಗಳ ಸಂಚಾರದಲ್ಲಿ ಅಲ್ಪ ಪ್ರಮಾಣದ ವಿಳಂಬ ಉಂಟಾಗುವ ಸಾಧ್ಯತೆಯಿದೆ. ತಾಂತ್ರಿಕ ದೋಷವನ್ನು ಶೀಘ್ರವಾಗಿ ಸರಿಪಡಿಸಲು ನಮ್ಮ ಕಾರ್ಯಾಚರಣೆ ಹಾಗೂ ನಿರ್ವಹಣಾ ತಂಡಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರಿಗೆ ಉಂಟಾಗಿರುವ ಅನಾನುಕೂಲತೆಗೆ ವಿಷಾದಿಸುತ್ತೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸದ್ಯ ಮೆಟ್ರೋ ಸಿಬ್ಬಂದಿ ಯುದ್ಧೋಪಾದಿಯಲ್ಲಿ ದೋಷ ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ನೇರಳೆ ಮಾರ್ಗದಲ್ಲಿ ಪೀಕ್ ಅವರ್‌ನಲ್ಲೇ ಈ ಸಮಸ್ಯೆ ಎದುರಾಗಿರುವುದರಿಂದ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ.

ರೈಲು ಸಂಚಾರ ಭಾಗಶಃ ಕಡಿತ

ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಸಂಪರ್ಕಿಸುವ ಪೂರ್ಣ ಪ್ರಮಾಣದ ಮಾರ್ಗದಲ್ಲಿ ಸದ್ಯ ಸಂಚಾರ ಕಡಿತಗೊಂಡಿದೆ. ಬಿಎಂಆರ್‌ಸಿಎಲ್ (BMRCL) ಸಿಬ್ಬಂದಿಗಳು ತಾಂತ್ರಿಕ ದೋಷ ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ಲೂಪ್‌ ಲೈನ್‌ಗಳಲ್ಲಿ ರೈಲುಗಳನ್ನು ಚಲಾಯಿಸಲಾಗುತ್ತಿದೆ. ಮಾಗಡಿ ರಸ್ತೆ ಟು ಚಲ್ಲಘಟ್ಟ ನಡುವೆ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಎಂ.ಜಿ. ರಸ್ತೆ ಟು ವೈಟ್‌ಫೀಲ್ಡ್ ನಡುವೆ ಮಾತ್ರ ಸದ್ಯ ರೈಲುಗಳ ಓಡಾಟ ಲಭ್ಯವಿದೆ. ಆದರೆ, ಕಬ್ಬನ್ ಪಾರ್ಕ್ ಮತ್ತು ಸುತ್ತಮುತ್ತಲಿನ ನಿಲ್ದಾಣಗಳ ವ್ಯಾಪ್ತಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಬಿಎಂಆರ್‌ಸಿಎಲ್ ಪ್ರಕಟಣೆ ಮತ್ತು ವಿಷಾದ

“ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿದೆ. ತಾಂತ್ರಿಕ ದೋಷವನ್ನು ಶೀಘ್ರವಾಗಿ ಸರಿಪಡಿಸಲು ಕಾರ್ಯಾಚರಣೆ ಹಾಗೂ ನಿರ್ವಹಣಾ ತಂಡಗಳು ಶ್ರಮಿಸುತ್ತಿವೆ. ಸಾರ್ವಜನಿಕರಿಗೆ ಉಂಟಾಗಿರುವ ಅನಾನುಕೂಲತೆಗೆ ವಿಷಾದಿಸುತ್ತೇವೆ” ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಜಂಟಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:31 pm, Tue, 23 June 26

Follow Us