ಬೆಡ್​ ಸಿಗದೆ ಮಗು ಸಾವು ಪ್ರಕರಣ: ಸಾವಿಗೆ ಕಾರಣ ತಿಳಿಸಿದ ನಿಮ್ಹಾನ್ಸ್ ಆಸ್ಪತ್ರೆ

| Updated By: ರಮೇಶ್ ಬಿ. ಜವಳಗೇರಾ

Updated on: Nov 30, 2023 | 2:26 PM

nimhans hospital: ಹಾಸನದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್​​ನಲ್ಲಿ ಬಂದರೂ ಸಹ ಆಸ್ಪತ್ರೆಯಲ್ಲಿ ಬೆಡ್​ ಸಿಗದೇ ಒಂದುವರೆ ವರ್ಷದ ಮಗು ಸಾವನ್ನಪಿದೆ. ಹತ್ತಾರು ಸವಾಲುಗಳನ್ನ ಭೇದಿಸಿ ಝಿರೋ ಟ್ರಾಫಿಕ್‌ ಮೂಲಕವೇ ಆ ಮಗುವನ್ನ ಕೆರತರಲಾಗಿತ್ತಾದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ನಿಮ್ಹಾನ್ಸ್ ಆಸ್ಪತ್ರೆ ಮಗು ಸಾವಿನ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ.

ಬೆಡ್​ ಸಿಗದೆ ಮಗು ಸಾವು ಪ್ರಕರಣ: ಸಾವಿಗೆ ಕಾರಣ ತಿಳಿಸಿದ ನಿಮ್ಹಾನ್ಸ್ ಆಸ್ಪತ್ರೆ
Follow us on

ಬೆಂಗಳೂರು, (ನವೆಂಬರ್ 30): ಬೆಡ್​ ಸಿಗದೇ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ (nimhans hospital) ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಮಗು ಆಸ್ಪತ್ರೆ ದಾಖಲಾಗುವ ಸಂದರ್ಭದಲ್ಲಿ ತೀರಾ ಚಿಂತಾಜನಕ ಸ್ಥಿತಿಯಲ್ಲಿತ್ತು. ನಿನ್ನೆ(ನವೆಂಬರ್ 30) ಮಧ್ಯಾಹ್ನ 12.45ಕ್ಕೆ ಹಾಸನ ಆಸ್ಪತ್ರೆಯಿಂದ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಬಳಿಕ ಮಧ್ಯಾಹ್ನ 2.30ಕ್ಕೆ ನಿಮ್ಹಾನ್ಸ್ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಆ ವೇಳೆ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು, ಮಗುವಿನ ತಲೆಗೆ ಗಂಭೀರ ಪೆಟ್ಟಾಗಿತ್ತು. ಮಗುವಿನ ಆರೋಗ್ಯದಲ್ಲೂ ಏರುಪೇರು ಕಂಡು ಬಂದಿತ್ತು. ಸಿಟಿ ಬ್ರೈನ್ ಸ್ಕ್ಯಾನ್ ವೇಳೆ ಹಲವಾರು ದೋಷಗಳು ಕಂಡು ಬಂದಿದೆ. ಅಲ್ಲದೇ ಬೆಡ್​ ಇಲ್ಲ ಎಂದು ನಮ್ಮ ಆಸ್ಪತ್ರೆ ಸಿಬ್ಬಂದಿ ಸಹ ತಿಳಿಸಿದ್ದು. ನಂತರ ಮಧ್ಯಾಹ್ನ 3 ಗಂಟೆಗೆ ಮಗುವಿಗೆ ಹೃದಯಾಘಾತವಾಗಿದೆ. ವೈದ್ಯರು ಸಾಕಷ್ಟು ಪ್ರಯತ್ನಿಸಿದ್ದಾರೆ, ಆದ್ರೆ ಸಂಜೆ 4 ಗಂಟೆ 5 ನಿಮಿಷಕ್ಕೆ ಮಗು ಮೃತಪಟ್ಟಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ನಿಮ್ಹಾನ್ಸ್ ಆಸ್ಪತ್ರೆ ಸ್ಪಷ್ಟನೆ ನೀಡಿದೆ.

ಆರೋಗ್ಯ ಸಚಿವ ಹೇಳಿದ್ದೇನು?

ಇನ್ನು ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಆರೋಗ್ಯ ಅಧಿಕಾರಿಗಳಿಂದ ಪ್ರಾಥಮಿಕ ವರದಿಯನ್ನು ಕೇಳಿದ್ದೇನೆ. ವರದಿ ನೀಡಿದ ಬಳಿಕ ಮುಂದೆ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇನೆ. ನಮ್ಮ ಕಡೆಯಿಂದ ನಿರ್ಲಕ್ಷ್ಯವಾಗಿಲ್ಲವೆಂದು ವೈದ್ಯರು ಹೇಳಿದ್ದಾರೆ. ಎರಡೂ ಕಡೆಯವರ ಜತೆ ಮಾತಾಡುತ್ತೇವೆ, ಲೋಪ ಆಗಿದ್ರೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ; ಆಸ್ಪತ್ರೆ ಮುಂದೆ ಕುಳಿತು ಪ್ರತಿಭಟನೆಗೆ ಮುಂದಾದ ಕುಟುಂಬಸ್ಥರು

ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆ ಮೇಲೆ ಬಹಳ ಒತ್ತಡ ಇದೆ. ರಾಜ್ಯಾದ್ಯಂತ ಸಾಕಷ್ಟು ರೋಗಿಗಳು ನಿಮ್ಹಾನ್ಸ್​ ಆಸ್ಪತ್ರೆಗೆ ಬರುತ್ತಾರೆ. ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಹಲವು ಸಲ ಬೆಡ್‌ಗಳು ಸಿಗಲ್ಲ. ನಾನೂ ಕೆಲವೊಮ್ಮೆ ಪ್ರಯತ್ನ ಪಟ್ಟಾಗಲೂ ಬೆಡ್ ಸಿಗಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡಬೇಕೆಂದು ಚರ್ಚಿಸುತ್ತೇವೆ ಎಂದು ತಿಳಿಸಿದರು.

ಘಟನೆ ಏನು?

ಚಿಕ್ಕಮಗಳೂರು ಜಿಲ್ಲೆ ಬಸವನಗುಡಿಯ ವೆಂಕಟೇಶ್‌ ಜ್ಯೋತಿ ದಂಪತಿಯ ಪುತ್ರ ವಿಜಯ್‌ ಆಟ ಆಡುವ ವೇಳೆ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮಗುವನ್ನ ನಿನ್ನೆ(ನವೆಂಬರ್ 29) ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಿದ್ರಿಂದ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಶಿಫ್ಟ್‌ ಮಾಡುವಂತೆ ಸೂಚಿಸಿದ್ದರು. ಅದರಂತೆ ಮಗುವನ್ನ ಕೇವಲ 1 ಗಂಟೆ 40 ನಿಮಿಷದಲ್ಲೇ ಹಾಸನದಿಂದ ಬೆಂಗಳೂರಿಗೆ ಶರವೇಗದಲ್ಲಿ ಆಂಬ್ಯುಲೆನ್ಸ್ ಮೂಲಕ ಶಿಫ್ಟ್ ಮಾಡಲಾಗಿತ್ತು. ಇಷ್ಟೆಲ್ಲಾ ಶ್ರಮ ಬೆಂಗಳೂರಿಗೆ ಬಂದರೂ ಸಹ ಬೆಡ್​ ಇಲ್ಲವೆಂದು ಚಿಕಿತ್ಸೆ ನೀಡಿಲ್ಲ ಎಂದು ಆರೋಪ.

ಆ ಮಗುವನ್ನ ಬದುಕಿಸಿಕೊಳ್ಳಲೇ ಬೇಕು ಎಂದು ಎಲ್ಲರೂ ಪಣ ತೊಟ್ಟಿದ್ದರು. ಹತ್ತಾರು ಸವಾಲುಗಳನ್ನ ಭೇದಿಸಿ ಝಿರೋ ಟ್ರಾಫಿಕ್‌ ಮೂಲಕವೇ ಆ ಮಗುವನ್ನ ಕೆರತರಲಾಗಿತ್ತು. ಹಾಸನದಿಂದ ಜಸ್ಟ್‌ ಒಂದೂವರೆ ಗಂಟೆಯಲ್ಲೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಇಷ್ಟೆಲ್ಲಾ ಆದ್ರೂ ನಿಮ್ಹಾನ್ಸ್ ಆಸ್ಪತ್ರೆ ನಿರ್ಲಕ್ಷ ಎಲ್ಲವನ್ನೂ ಹಾಳು ಮಾಡಿದೆ. ಅಮೂಲ್ಯ ಸಮಯ ಹಾಳು ಮಾಡಿದ ಸಿಬ್ಬಂದಿ ಮಗುವಿನ ಸಾವಿಗೆ ಕಾರಣವಾಗಿದ್ದಾರೆ ಎಂದು ಪೋಷಕರು ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಆರೋಪಿಸಿದ್ದು, ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ