15,600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಬೆಂಗಳೂರಲ್ಲಿ ಪ್ರಧಾನಿ ಮೋದಿಯಿಂದ ಚಾಲನೆ, ಶಂಕುಸ್ಥಾಪನೆ

Narendra Modi: ಬೆಂಗಳೂರಿನಲ್ಲಿ 15,600 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ನವೀಕರಿಸಬಹುದಾದ ಇಂಧನ ಪ್ರಸರಣ, ಮಂಗಳೂರಿನ ಭೂಗತ ಎಲ್‌ಪಿಜಿ ಟನಲ್ ಮತ್ತು ಗೇಲ್ ಜೈವಿಕ ಅನಿಲ ಘಟಕ ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳೂ ಇದರಲ್ಲಿ ಸೇರಿವೆ.

15,600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಬೆಂಗಳೂರಲ್ಲಿ ಪ್ರಧಾನಿ ಮೋದಿಯಿಂದ ಚಾಲನೆ, ಶಂಕುಸ್ಥಾಪನೆ
ಅಭಿವೃದ್ಧಿ ಯೋಜನೆಗಳಿಗೆ ಬೆಂಗಳೂರಲ್ಲಿ ಪ್ರಧಾನಿ ಮೋದಿಯಿಂದ ಚಾಲನೆ

Updated on: Nov 13, 2026 | 2:31 PM

ಬೆಂಗಳೂರು, ನವೆಂಬರ್​​ 13: 15,600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಬೆಂಗಳೂರಿನ ಐಐಎಂಬಿ ಆಡಿಟೋರಿಯಂನಲ್ಲಿ ವರ್ಚುವಲ್​​ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ. ನಗರ ಸಾರಿಗೆ, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಇಂಧನ, ಪೆಟ್ರೋಲಿಯಂ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ ಮತ್ತು ರೈಲ್ವೆ ಸೇರಿದಂತೆ ಪ್ರಮುಖ ಕ್ಷೇತ್ರಗಳ ಯೋಜನೆಗಳು ಇದರಲ್ಲಿ ಸೇರಿವೆ.

ವಿವಿಧ ಯೋಜನೆಗಳ ಲೋಕಾರ್ಪಣೆ

ಸುಮಾರು 4,450 ಕೋಟಿ ರೂಪಾಯಿ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಿರುವ ಕೊಪ್ಪಳ-II ಮತ್ತು ಗದಗ-II ನವೀಕರಿಸಬಹುದಾದ ಇಂಧನ ವಲಯಗಳ ಏಕೀಕರಣಕ್ಕಾಗಿ ರೂಪಿಸಿರುವ ವಿದ್ಯುತ್ ಪ್ರಸರಣ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಿದ್ದಾರೆ. ಈ ಪ್ರಸರಣ ವ್ಯವಸ್ಥೆಯು ಕರ್ನಾಟಕದ ಕೊಪ್ಪಳ ಮತ್ತು ಗದಗ ಪ್ರದೇಶಗಳಲ್ಲಿನ ಸುಮಾರು 2 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿದ್ಯುತ್ ಅನ್ನು ಗ್ರಿಡ್ ಮೂಲಕ ವಿವಿಧ ಫಲಾನುಭವಿಗಳಿಗೆ ರವಾನಿಸಲು ನೆರವಾಗಲಿದೆ. ಹಾಗೆಯೇ ಸುಮಾರು 1,370 ಕೋಟಿ ರೂಪಾಯಿ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಿರುವ ಬೀದರ್ ಸೌರ ವಿದ್ಯುತ್ ವಲಯದ ಪ್ರಸರಣ ಯೋಜನೆಯನ್ನೂ ಪ್ರಧಾನಿ ಲೋಕಾರ್ಪಣೆಗೊಳಿಸಿದ್ದಾರೆ. ಈ ಯೋಜನೆಯಡಿ ಬೀದರ್ ಪೂಲಿಂಗ್ ಸ್ಟೇಷನ್ ಸ್ಥಾಪಿಸಲಾಗಿದ್ದು, ಈ ಪ್ರದೇಶದಿಂದ 2.5 ಗಿಗಾವ್ಯಾಟ್ ಸೌರ ವಿದ್ಯುತ್ ಅನ್ನು ಗ್ರಿಡ್‌ಗೆ ರವಾನಿಸಲು ಅನುಕೂಲವಾಗಲಿದೆ.

Loading...

ಇದನ್ನೂ ಓದಿ: ಬೆಂಗಳೂರು-ಮಡಗಾಂವ್ ವಂದೇ ಭಾರತ್​​ಗೆ ಚಾಲನೆ​​ ಸೇರಿ ವಿವಿಧ ರೈಲ್ವೇ ಕಾಮಗಾರಿಗಳ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

850 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಮಂಗಳೂರಿನಲ್ಲಿ ನಿರ್ಮಿಸಲಾಗಿರುವ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಣಾ ಟನಲ್​​ ಅನ್ನು ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದ್ದು, ಈ ಘಟಕವು 80,000 ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಇದರಿಂದ ದೇಶದ ಎಲ್‌ಪಿಜಿ ಸಂಗ್ರಹಣಾ ಮೂಲಸೌಕರ್ಯ ಮತ್ತಷ್ಟು ಬಲಗೊಳ್ಳಲಿದೆ. ಯೋಜನೆಯ ಭಾಗವಾಗಿ ನವ ಮಂಗಳೂರು ಬಂದರಿನಿಂದ ಮುಖ್ಯ ಟರ್ಮಿನಲ್‌ವರೆಗೆ 9.4 ಕಿಲೋಮೀಟರ್ ಉದ್ದದ ಎಲ್‌ಪಿಜಿ ಪೈಪ್‌ಲೈನ್ ನಿರ್ಮಿಸಲಾಗಿದ್ದು, ಅಡುಗೆ ಅನಿಲದ ಸಮರ್ಥ ಸಾಗಣೆ ಮತ್ತು ಸಂಗ್ರಹಣೆಗೆ ನೆರವಾಗಲಿದೆ. ಇದರ ಜೊತೆಗೆ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ವತಿಯಿಂದ ಬೆಂಗಳೂರಿನಲ್ಲಿ ನಿರ್ಮಿಸಿರುವ ದೇವನಗೊಂಡಿ ಮಾರ್ಕೆಟಿಂಗ್ ಟರ್ಮಿನಲ್ ಅನ್ನು ಸಹ ಪ್ರಧಾನಿ ಉದ್ಘಾಟಿಸಿದ್ದಾರೆ. 330 ಕೋಟಿ ರೂಪಾಯಿ ಹೂಡಿಕೆಯಲ್ಲಿ ನಿರ್ಮಿಸಿರುವ ಈ ಅತ್ಯಾಧುನಿಕ ಘಟಕವು ಕರ್ನಾಟಕದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಯನ್ನು ಬಲಪಡಿಸಲಿದೆ.

ಹಲವು ಯೋಜನೆಗಳಿಗೆ ಶಂಕುಸ್ಥಾಪನೆ

ಇದರ ಜೊತೆಗೆ ದಾವಣಗೆರೆ/ಚಿತ್ರದುರ್ಗ ಮತ್ತು ಬಳ್ಳಾರಿ ನವೀಕರಿಸಬಹುದಾದ ಇಂಧನ ವಲಯಗಳ ಏಕೀಕರಣಕ್ಕಾಗಿ 3,450 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ವಿದ್ಯುತ್ ಪ್ರಸರಣ ಯೋಜನೆ, ದಾವಣಗೆರೆ ಮತ್ತು ಬಳ್ಳಾರಿ ಪ್ರದೇಶಗಳಲ್ಲಿನ ಹೆಚ್ಚುವರಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಏಕೀಕರಣಕ್ಕಾಗಿ 1,100 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ವಿದ್ಯುತ್ ಪ್ರಸರಣ ವ್ಯವಸ್ಥೆ ಬಲವರ್ಧನೆ ಯೋಜನೆ ಮತ್ತು ಬೆಂಗಳೂರಿನ ಹರಳಕುಂಟೆಯಲ್ಲಿ ಗೇಲ್ (GAIL) ಸಂಸ್ಥೆಯ ಸಂಕುಚಿತ ಜೈವಿಕ ಅನಿಲ (CBG) ಘಟಕಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us