ಬೆಂಗಳೂರು: ಸಂತ ಕನಕದಾಸರ ಜನಪ್ರಿಯ ಕೀರ್ತನೆ ‘ಕುಲಕುಲವೆಂದು ಹೊಡೆದಾಡದಿರಿ’ ಹಾಗೂ ಭಾಮಿನಿ ಷಟ್ಪದಿಯ ಸರ್ವಮಾನ್ಯ ಸಾಹಿತ್ಯ ಕೃತಿ ‘ರಾಮಧಾನ್ಯ ಚರಿತೆ’ಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ವಿಧಾನಸೌಧದಲ್ಲಿ ಕನಕದಾಸರು ಹಾಗೂ ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ರೈಲು ನಿಲ್ದಾಣದಲ್ಲಿ ಎರಡು ಹೊಸ ರೈಲುಗಳಿಗೆ ಚಾಲನೆ ನೀಡಿದರು. ನಂತರ ದೇವನಹಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟಿಸಿದರು. ವಿಮಾನ ನಿಲ್ದಾಣದ ಸಮೀಪವೇ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಿದರು ನಂತರ ನಂತರ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ದೇಶದ ಅಭಿವೃದ್ಧಿಗೆ ಬೆಂಗಳೂರಿನ ಕೊಡುಗೆಯನ್ನು ಶ್ಲಾಘಿಸಿದರು.
‘ಭಗವಂತನಲ್ಲಿ ಭಕ್ತಿ ಮತ್ತು ಸಾಮಾಜಿಕ ಕಾಳಜಿಯಿಂದ ಸಮಾಜವನ್ನು ಹೇಗೆ ಜೋಡಿಸಬಹುದು ಎನ್ನುವುದಕ್ಕೆ ನಮಗೆ ಸಂತ ಕನಕದಾಸರಿಂದ ಪ್ರೇರಣೆಯು ಸಿಗುತ್ತದೆ. ಕೃಷ್ಣಭಕ್ತಿಯ ಹಾದಿಯಲ್ಲಿ ಅತ್ಯಂತ ಎತ್ತರಿದ ಸಂತರು ಅವರು. ಅದೇ ಕನಕದಾಸರು ಮತ್ತೊಂದೆಡೆ ‘ಕುಲಕುಲವೆಂದು ಹೊಡೆದಾಡದಿರಿ’ ಎಂಬ ಸಾಮಾಜಿಕ ಸಂದೇಶವನ್ನೂ ಕೊಟ್ಟರು ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು. ‘ಜಾತಿ ಆಧಾರದ ಮೇಲೆ ಯಾರೂ ತಾರತಮ್ಯ, ಭೇದಭಾವ ಮಾಡಬಾರದು ಎಂಬ ಮಹತ್ವದ ಸಂದೇಶ ಕೊಟ್ಟು ಸಾಮಾಜಿಕ ಜೀವನದಲ್ಲಿ ಅಧ್ಯಾತ್ಮದ ಮಹತ್ವವನ್ನು ಸಾರಿ ಹೇಳಿದರು’ ಎಂದು ಮೋದಿ ನೆನಪಿಸಿಕೊಂಡರು.
‘ಇಂದು ಇಡೀ ವಿಶ್ವದಲ್ಲಿ ಕಿರುಧಾನ್ಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂತ ಕನಕದಾಸರಿಗೆ ಅಂದೇ ಕಿರುಧಾನ್ಯಗಳ ಮಹತ್ವದ ಅರಿವಿತ್ತು. ಹೀಗಾಗಿಯೇ ಅವರು ಕೃತಿಗೆ ‘ರಾಮಧಾನ್ಯ ಚರಿತೆ’ ಎಂದು ಹೆಸರಿಡುವ ಮೂಲಕ ಅದರ ಮಹತ್ವವನ್ನು ಸಾರಿ ಹೇಳಿದರು. ಕರ್ನಾಟಕದ ಜನರು ಅತಿಹೆಚ್ಚು ಇಷ್ಟಪಡುವ ರಾಗಿಯ ಬಗ್ಗೆ ಕೃತಿ ರಚಿಸಿ ಅದರ ಮಹತ್ವ ಸಾರಿ ಹೇಳಿದರು’ ಎಂದು ಮೋದಿ ನೆನಪಿಸಿಕೊಂಡರು.
‘ಕಳೆದ ಆಗಸ್ಟ್ 15ಂದು ಕೆಂಪುಕೋಟೆಯಲ್ಲಿ ನಾನು ಮಾಡಿದ್ದ ಭಾಷಣದಲ್ಲಿ ನಮ್ಮ ದೇಶದ ಪರಂಪರೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದೆ. ನಮ್ಮ ಪರಂಪರೆಯು ಸಾಂಸ್ಕೃತಿಕವಾಗಿಯೂ ಇದೆ, ಅಧ್ಯಾತ್ಮಿಕವಾಗಿ ಸಮೃದ್ಧವಾಗಿದೆ. ‘ಭಾರತ್ ಗೌರವ್’ ರೈಲು ದೇಶದ ಅಧ್ಯಾತ್ಮ ಹಾಗೂ ಶ್ರದ್ಧಾ ಕೇಂದ್ರಗಳನ್ನು ಜೋಡಿಸುತ್ತದೆ. ಅದರೊಂದಿಗೆ ಏಕ ಭಾರತ್ ಶ್ರೇಷ್ಠ ಭಾರತ್ ಭಾವನೆಯನ್ನು ಸದೃಢಗೊಳಿಸುತ್ತಿದೆ. ಈ ರೈಲು ಹಲವು ಮಾರ್ಗಳಲ್ಲಿ ಈಗಾಗಲೇ ಸಂಚರಿಸುತ್ತಿದ್ದು, ಹಲವು ಯಾತ್ರೆಗಳನ್ನು ಪೂರ್ಣಗೊಳಿಸಿದೆ. ಶಿರಡಿ ಇರಬಹುದು, ರಾಮಾಯಣ ಇರಬಹುದು, ದಿವ್ಯ ಕಾಶಿ ಯಾತ್ರೆ ಇರಬಹುದು ಹೀಗೆ ಹಲವು ಮಾರ್ಗಗಳಲ್ಲಿ ಈ ರೈಲುಗಳು ಸಂಚರಿಸುತ್ತಿವೆ’ ಎಂದು ವಿವರಿಸಿದರು.
‘ಬೆಂಗಳೂರಿನಿಂದ ಇಂದು ಹೊರಟ ಭಾರತ್ ಗೌರವ್ ಕಾಶಿ ದರ್ಶನ ರೈಲು ಕರ್ನಾಟಕದಿಂದ ಕಾಶಿ, ಅಯೋಧ್ಯೆ, ಪ್ರಯಾಗ್ರಾಜ್ಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರೈಲು ಕರ್ನಾಟಕದ ಜನರಿಗೆ ಕಾಶಿ-ಅಯೋಧ್ಯೆಯ ದರ್ಶನಕ್ಕೆ ಅನುಕೂಲ ಕಲ್ಪಿಸುತ್ತದೆ’ ಎಂದು ಹೇಳಿದರು.
ಭಾರತದ ಕೃಷಿ ಮತ್ತು ಇತರ ಸಣ್ಣಪುಟ್ಟ ಸ್ವ-ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ಯೋಜನೆಗಳಿಗೆ ಸರ್ಕಾರ ಒತ್ತು ಕೊಡುತ್ತಿದೆ ಎಂದು ಹೇಳಿದ ಅವರು, ‘ನಮ್ಮ ದೇಶದಲ್ಲಿ ಸಣ್ಣ ರೈತರು, ಸಣ್ಣ ವ್ಯಾಪಾರಿಗಳು, ಮೀನುಗಾರರು ಅಥವಾ ಇತರ ಸಣ್ಣಪುಟ್ಟ ವೃತ್ತಿ ಮಾಡುತ್ತಿರುವವರು ಇಂದು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಪಿಎಂ ಕಿಸಾನ್ ನಿಧಿಯ ಮೂಲಕ ದೇಶದ 10 ಕೋಟಿಗೂ ಅಧಿಕ ರೈತರಿಗೆ ಹಣ ವರ್ಗಾವಣೆ ಮಾಡಲಾಗಿದೆ. ಕರ್ನಾಟಕದಲ್ಲಿಯೂ ಲಕ್ಷಾಂತರ ರೈತರಿಗೆ ಲಾಭ ಸಿಕ್ಕಿದೆ. ಪಿಎಂ ಸ್ವನಿಧಿಯ ಮೂಲಕ ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲವಾಗಿದೆ. ಕರ್ನಾಟಕದ 2 ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿಗೆ ಸವಲತ್ತು ನೀಡಲಾಗಿದೆ’ ಎಂದು ಮೋದಿ ವಿವರಿಸಿದರು.
Published On - 2:55 pm, Fri, 11 November 22