ಬೆಂಗಳೂರು: ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ(Narendra Modi) ರಾಜ್ಯಕ್ಕೆ ಬರುತ್ತಿದ್ದಾರೆ. ಕೇಂದ್ರ ಸರ್ಕಾರಿ ಕಾರ್ಯಕ್ರಮಗಳಾದರೂ ಮೋದಿ ಭೇಟಿಯ ಚುನಾವಣಾ ಲಾಭ ಪಡೆಯಲು ಆಡಳಿತ ಪಕ್ಷ ಬಿಜೆಪಿ ಸನ್ನದ್ಧವಾಗಿದೆ. ಕೇಂದ್ರ ಸರ್ಕಾರದ ಎರಡು ಮಹತ್ವದ ಇಲಾಖೆಗಳ ಕಾರ್ಯಕ್ರಮಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರು ಮತ್ತು ತುಮಕೂರಿಗೆ ಭೇಟಿ ಕೊಡುತ್ತಿದ್ದಾರೆ. ಇಂದು ಭೇಟಿ ಕೊಡುತ್ತಿರುವ ಎರಡೂ ಕಾರ್ಯಕ್ರಮಗಳು ಸರ್ಕಾರಿ ಕಾರ್ಯಕ್ರಮಗಳಾಗಿರುವ ಕಾರಣ ನೇರ ರಾಜಕೀಯ ಲಾಭ ಪಡೆಯಲು ಬಿಜೆಪಿಗೆ ಅವಕಾಶವಿಲ್ಲ. ಹೀಗಾಗಿ ವೇದಿಕೆ ಕಾರ್ಯಕ್ರಮದ ಮೂಲಕ ಪರೋಕ್ಷ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಮೋದಿ ವರ್ಚಸ್ಸಿನ ಮೂಲಕ ಮತದಾರರನ್ನು ಸೆಳೆಯಲು ಇಂದಿನ ಕಾರ್ಯಕ್ರಮದ ಹಿಂದೆ ಬಿಜೆಪಿ ಪ್ರಯತ್ನ ಇದೆ.
ಈ ಬಾರಿಯ ಚುನಾವಣೆಗೆ ಬಿಜೆಪಿ ನೆಚ್ಚಿಕೊಂಡಿರುವುದು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಮತ್ತು ಡಬಲ್ ಎಂಜಿನ್ ಸರ್ಕಾರಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು. ಹೀಗಾಗಿ ಅವಕಾಶ ಸಿಕ್ಕಿದಷ್ಟೂ ಹೆಚ್ಚು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಸಂಘಟಿಸುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಕರೆಸುವ ಮೂಲಕ ಮೋದಿ ವರ್ಚಸ್ಸು ಮತಗಳಿಕೆಯ ಪ್ರಮಾಣ ಹೆಚ್ಚಳಕ್ಕೆ ಬೂಸ್ಟ್ ಆಗಲಿದೆ ಎಂಬ ನಂಬಿಕೆ ಬಿಜೆಪಿಯದ್ದು. ಇದಲ್ಲದೇ ವಿಧಾನಸಭಾ ಚುನಾವಣೆಗೆ ಬಿಜೆಪಿ ರಾಜ್ಯ ನಾಯಕರಿಗಿಂತ ಹೆಚ್ಚಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನೇ ನೆಚ್ಚಿಕೊಂಡಿದೆ. ಹಾಗಾಗಿ ಪದೇ ಪದೇ ಪ್ರಧಾನಿ ಮೋದಿ ಬೆಂಗಳೂರಿಗೆ ವಿಶೇಷ ವಿಮಾನ ಹತ್ತುತ್ತಿದ್ದಾರೆ.
ಇದನ್ನೂ ಓದಿ: ಮೋದಿ ಸ್ವಾಗತಕ್ಕೆ ತುಮಕೂರಿನಲ್ಲಿ ಅದ್ದೂರಿ ಸಿದ್ಧತೆ: ಬೀದಿ ಬೀದಿಯಲ್ಲೂ ಬಿಜೆಪಿ ಬಾವುಟ, ಚುನಾವಣೆಗೆ ಭರ್ಜರಿ ಶಕ್ತಿಪ್ರದರ್ಶನ
ಈ ಮಧ್ಯೆ ಅಭಿವೃದ್ಧಿ ಕಾರ್ಯಗಳ ಜೊತೆಗೆ ಪಕ್ಷದ ಕಾರ್ಯಕರ್ತರನ್ನು ಕೂಡಾ ರೋಡ್ ಶೋ ಮುಖಾಂತರ ತಲುಪುವ ಪ್ರಯತ್ನ ಬಿಜೆಪಿ ಮಾಡಿದೆ. ಅದಕ್ಕಾಗಿ ಮೋದಿ ಸಾಗುವ ಮಾರ್ಗದಲ್ಲಿ ಅಲ್ಲಲ್ಲಿ ಜನರನ್ನು ಸೇರಿಸಿ ರೋಡ್ ಶೋ ಸ್ವರೂಪದಲ್ಲಿ ಜನರನ್ನು ಸಂಘಟಿಸುವ ಕೆಲಸ ಕೂಡಾ ಆಗುತ್ತಿದೆ. ಪದೇ ಪದೇ ಮೋದಿ ಬರುವ ಮೂಲಕ ಕಾರ್ಯಕರ್ತರಲ್ಲಿ ಮೋದಿ ಹೆಸರಿನ ಮೇಲೆ ಸೃಷ್ಟಿಯಾಗುವ ಜೋಶ್ ದ್ವಿಗುಣವಾಗುತ್ತಾ ಸಾಗುತ್ತದೆ. ಇದರ ಜೊತೆಗೆ ಫೆನ್ಸ್ ಸಿಟ್ಟರ್ ಎಂಬಂತಿರುವ ಜನರ ಮೇಲೆ ಪರಿಣಾಮವನ್ನೂ ಬೀರುತ್ತದೆ.
ಇನ್ನು ಒಂದೊಂದು ಬಾರಿ ಭೇಟಿ ನೀಡಿದಾಗಲೆಲ್ಲಾ ಪ್ರತ್ಯೇಕ ಪ್ರದೇಶಗಳಿಗೆ ಭೇಟಿ ನೀಡುವ ಕಾರಣ ಪ್ರಾದೇಶಿಕವಾರು ಸಂಘಟನೆಯ ಸಮತೋಲನವನ್ನೂ ಕಾಯ್ದುಕೊಳ್ಳುವುದು ಬಿಜೆಪಿಗೆ ಸಾಧ್ಯವಾಗುತ್ತಿದೆ. ಇಂದಿನ ಬೆಂಗಳೂರು ಮತ್ತು ತುಮಕೂರು ಭೇಟಿಯಿಂದ ಮಧ್ಯ ಕರ್ನಾಟಕ ಭಾಗದ ಮೇಲೆ ರಾಜಕೀಯವಾಗಿ ಪರಿಣಾಮವಾಗಬಹುದು ಎಂದು ಬಿಜೆಪಿ ನಂಬಿಕೊಂಡಿದೆ. ಇಂದು ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಕೋಲಾರ ಭಾಗದ ಜನರನ್ನು ಸೇರಿಸುವ ಮೂಲಕ ಮೋದಿ ಹೆಸರಿನ ಮೇಲಿನ ಪಕ್ಷ ಸಂಘಟನೆಗೆ ಬಿಜೆಪಿ ಹೊರಟಿದೆ.
ವರದಿ: ಕಿರಣ್ ಹನಿಯಡ್ಕ, ಟಿವಿ9, ಬೆಂಗಳೂರು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:44 am, Mon, 6 February 23