
ಬೆಂಗಳೂರು, ನವೆಂಬರ್ 11: ಸಾಮಾಜಿಕ ಜಾಲತಾಣದಲ್ಲಿ ಎಐ ಮೂಲಕ ಎಡಿಟ್ ಮಾಡಲಾದ ಫೋಟೋ ಹಂಚಿಕೊಂಡ ಆರೋಪದ ಮೇಲೆ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದ್ದಾರೆ. ಬಿಹಾರ ಮತ್ತು ಹರಿಯಾಣದಲ್ಲಿ ನಡೆದ ಭಾರೀ ಪ್ರಮಾಣದ ಮದ್ದುಗುಂಡು ವಶ ಪ್ರಕರಣದಲ್ಲಿ ಆರ್‌ಎಸ್‌ಎಸ್ ನಂಟಿನ ಬಗ್ಗೆ ಪ್ರಶ್ನಿಸಿ ಅವರು ಹಂಚಿಕೊಂಡಿದ್ದ ಫೋಟೋ ಈಗ ವಿವಾದಕ್ಕೆ ಕಾರಣವಾಗಿದೆ. ಮೂಲ ಚಿತ್ರದಲ್ಲಿ ಒಬ್ಬ ವ್ಯಕ್ತಿ ಮಾತ್ರ ಆರ್‌ಎಸ್‌ಎಸ್ ಸಮವಸ್ತ್ರದಲ್ಲಿದ್ದರೆ, ಎಡಿಟ್ ಮಾಡಿದ ಚಿತ್ರದಲ್ಲಿ ಇತರರನ್ನೂ ಅದೇ ಸಮವಸ್ತ್ರದಲ್ಲಿ ತೋರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ಪ್ರಿಯಾಂಕ್ ಖರ್ಗೆ ನವೆಂಬರ್ 10ರಂದು ತಮ್ಮ ಎಕ್ಸ್ ಖಾತೆಯಲ್ಲಿ ಕಾರ್ಟ್ರಿಡ್ಜ್ ವಶ ಪ್ರಕರಣದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಅಂತರರಾಜ್ಯ ಮದ್ದುಗುಂಡು ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಆರೋಪಿಗಳ ಪೈಕಿ ಕೆಲವರು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಬಗ್ಗೆ ವರದಿಗಳು ಮತ್ತು ಫೋಟೋಗಳಿವೆ ಎಂದು ಉಲ್ಲೇಖಿಸಿದ್ದರು. ಆದರೆ ವೈರಲ್ ಆಗಿರುವ ಫೋಟೋವನ್ನು ಪರಿಶೀಲಿಸಿದ ವರದಿಗಳ ಪ್ರಕಾರ, ಮೂಲ ಚಿತ್ರದಲ್ಲಿ ಒಬ್ಬ ವ್ಯಕ್ತಿ ಮಾತ್ರ ಆರ್‌ಎಸ್‌ಎಸ್ ಸಮವಸ್ತ್ರದಲ್ಲಿದ್ದರೆ, ನಂತರದ ಚಿತ್ರದಲ್ಲಿ ಇತರರನ್ನೂ ಅದೇ ರೀತಿಯಲ್ಲಿ ತೋರಿಸಲಾಗಿದೆ. ಈ ಬದಲಾವಣೆಗೆ AI ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಖರ್ಗೆ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಗಮನಹರಿಸುವ ಬದಲು ಅನಗತ್ಯವಾಗಿ ಆರ್‌ಎಸ್‌ಎಸ್ ವಿಚಾರವನ್ನು ಪ್ರಸ್ತಾಪಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಯೋತ್ಪಾದಕನೊಂದಿಗೆ ಕೈಕುಲುಕಿದ ಉದಾಹರಣೆಯನ್ನು ಮುಂದಿಟ್ಟುಕೊಂಡು, ಇದೇ ತರ್ಕವನ್ನು ಅನ್ವಯಿಸಿದರೆ ಅದಕ್ಕೆ ಖರ್ಗೆ ಏನು ಉತ್ತರ ನೀಡುತ್ತಾರೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಖರ್ಗೆ ಅವರೇ ಈಗ ತಪ್ಪು ಮಾಹಿತಿ ಹರಡುತ್ತಿದ್ದಾರೆಯೇ ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
ಇನ್ನೊಬ್ಬರು, ಜವಾಬ್ದಾರಿಯುತ ಗೃಹಮಂತ್ರಿಯ ಸ್ಥಾನದಲ್ಲಿರುವವರು ಎಐ ಮೂಲಕ ಸೃಷ್ಟಿಸಲಾದ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪ ಮಾಡುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಬೇಕಿತ್ತು. ಗೃಹಮಂತ್ರಿಯ ಆದ್ಯತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿರಬೇಕು; ಆಧಾರರಹಿತ ಆರೋಪಗಳ ಮೂಲಕ ರಾಜಕೀಯ ಪ್ರಚಾರ ಮಾಡುವುದಲ್ಲ ಎಂದು ಕಾಮೆಂಟ್‌ಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಈ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ. ಕರ್ನಾಟಕದ ಗೃಹ ಸಚಿವರೇ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮತ್ತು ದಾರಿತಪ್ಪಿಸುವ ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಿ ನವೆಂಬರ್ 10ರಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ