ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನ ಟೌನ್ಹಾಲ್ನಲ್ಲಿ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ ಆಗಲಿರುವ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ. ಕಾರ್ಯಕ್ರಮ ವಿರೋಧಿಸಿ ಕನ್ನಡ ಪರ ಸಂಘಟನೆ ಧರಣಿ ಹಿನ್ನೆಲೆ ಟೌನ್ಹಾಲ್ ಬಳಿ 100ಕ್ಕೂ ಅಧಿಕ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ಸ್ಥಳದಲ್ಲಿ ಕಾರ್ಯಕ್ರಮ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ನಡೆಯುತ್ತಿದೆ. ಕನ್ನಡ ಪರ ಸಂಘಟನೆಗಳು ಟೌನ್ಹಾಲ್ಗೆ ನುಗ್ಗಲು ಯತ್ನಿಸಿವೆ. ಮತ್ತೊಂದೆಡೆ ಹಿಂದೂಪರ ಸಂಘಟನೆ ಕಾರ್ಯಕರ್ತರ ಆಕ್ರೋಶ ವ್ಯಕ್ತವಾಗಿದೆ. ಒಂದೆಡೆ ಹಿಂದೂಪರ ಸಂಘಟನೆಗಳು ಸಾವರ್ಕರ್ಗೆ ಜೈಕಾರ ಕೂಗಿದರೆ ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳು ಸಾವರ್ಕರ್ಗೆ ಧಿಕ್ಕಾರ ಕೂಗಿವೆ. ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋರಾಟಗಾರರು ಟೌನ್ಹಾಲ್ ಪ್ರವೇಶಿಸಿರುವ ಸಾಧ್ಯತೆ ಇರುವುದರಿಂದ ಟೌನ್ಹಾಲ್ನ ಸಭಾಂಗಣದ ಒಳಗೆ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ. ಟೌನ್ಹಾಲ್ ಒಳಗಿದ್ದ ಮತ್ತಿಬ್ಬರು ಹೋರಾಟಗಾರರು ವಶಕ್ಕೆ ಪಡೆಯಲಾಗಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡುವೆ ಪ್ರತಿಭಟನೆ ಬಿಸಿ
ಬೆಂಗಳೂರಿನ ಟೌನ್ಹಾಲ್ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ನಿಲುಮೆ ಸಂಸ್ಥೆ ವತಿಯಿಂದ ಸಾವರ್ಕರ್ ಪುಸ್ತಕ ‘The Man who could Have prevented Partition’ ಪುಸ್ತಕ ಬಿಡುಗಡೆ ಆಗಲಿದೆ. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಭಾಗಿಯಾಗಲಿದ್ದಾರೆ. ಸಾವರ್ಕರ್ ಮಾತಿಗೆ ಮನ್ನಣೆ ನೀಡಿದ್ದರೆ ವಿಭಜನೆ ತಡೆಯಬಹುದಿತ್ತು. ಭಾರತ, ಪಾಕ್ ವಿಭಜನೆ ತಡೀಬಹುದಿತ್ತು ಎಂದ ಅಂಶವಿರುವ ಪುಸ್ತಕ ಬಿಡುಗಡೆ ಆಗಲಿದೆ.
ಇದೇ ವೇಳೆ, ಟೌನ್ಹಾಲ್ ಬಳಿ ನೀಲೇಶ್ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಟೌನ್ಹಾಲ್ ಸಭಾಂಗಣಕ್ಕೆ ನುಗ್ಗಲು ಕನ್ನಡಪರ ಹೋರಾಟಗಾರರು ಯತ್ನಿಸಿದ್ದಾರೆ. ಪೊಲೀಸರು ಅವಕಾಶ ನೀಡದಿದ್ದಾಗ ರಸ್ತೆ ಮೇಲೆ ಕುಳಿತು ಧರಣಿ ನಡೆಸಿದ್ದಾರೆ. ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿದ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು ಕನ್ನಡ ಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟೌನ್ಹಾಲ್ ಬಳಿಗೆ ಕೇಂದ್ರ ವಿಭಾಗದ ಡಿಸಿ ಅನುಚೇತ್ ಭೇಟಿ ನೀಡಿದ್ದಾರೆ.
ಕರ್ನಾಟಕ ಪೊಲೀಸರ ವಾಹನಕ್ಕೆ ಮಹಾರಾಷ್ಟ್ರ ಪೊಲೀಸರ ಭದ್ರತೆ
ಕರ್ನಾಟಕ ಪೊಲೀಸರ ವಾಹನಕ್ಕೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕರ್ನಾಟಕ ಪೊಲೀಸರಿಗೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡುವಂತಾಗಿದೆ. ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕರ್ನಾಟಕ ಪೊಲೀಸ್ ಸಿಬ್ಬಂದಿ ಕೊಲ್ಹಾಪುರ ಲಕ್ಷ್ಮೀದೇವಿ ದರ್ಶನಕ್ಕೆ ತೆರಳಿದ್ದರು. ಈ ವೇಳೆ, ಲಕ್ಷ್ಮೀದೇವಿ ದರ್ಶನ ಪಡೆದು ಬೆಳಗಾವಿಗೆ ಬರುತ್ತಿರುವ ಪೊಲೀಸರಿಗೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡುವಂತಾಗಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗ ಬೆಳಗಾವಿಯಲ್ಲಿ ಪರಿಸ್ಥಿತಿ ಬಿಗು ಆಗಿರುವ ಹಿನ್ನೆಲೆಯಲ್ಲಿ ಹೀಗೆ ಕ್ರಮ ತೆಗೆದುಕೊಳ್ಳಲಾಗಿದೆ. ಶುಕ್ರವಾರ ಕರ್ನಾಟಕದ ಹಲವು ಸರ್ಕಾರಿ ವಾಹನಗಳ ಮೇಲೆ ಮರಾಠ ಹೋರಾಟಗಾರರು ಕಲ್ಲು ತೂರಾಟ ನಡೆಸಿದ್ದರು. ಇಂದು ಕೂಡ ಕರ್ನಾಟಕದ ವಾಹನಗಳ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಕೆಎಸ್ಆರ್ಪಿ ವಾಹನಕ್ಕೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡಿದ್ದಾರೆ.
ಬಾಗಲಕೋಟೆ: ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಘಟನೆ ಖಂಡಿಸಿ ಬೈಕ್ ಮೆರವಣಿಗೆ
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಪ್ರಕರಣ ಖಂಡಿಸಿ ಕರವೇ ಕಾರ್ಯಕರ್ತರು ಬೈಕ್ ರಾಲಿ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಬೈಕ್ ಮೆರವಣಿಗೆ ಮಾಡಿದ್ದಾರೆ. ಶಿವಾಜಿ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ರಾಲಿ ಮಾಡಿದ್ದು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡಿಗರು ಮರಾಠಿಗರ ಗುದ್ದಾಟ, ಗಡಿ ವಿವಾದ; ಡಿಸೆಂಬರ್ 13 ರಿಂದ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ