ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆಗೆ ವಿರೋಧಿಸಿ ಧರಣಿ: ಸದಾಶಿವನಗರ ಠಾಣೆಯಲ್ಲಿ 9 ಜನರ ವಿರುದ್ಧ ಎಫ್​ಐಆರ್ ದಾಖಲು

|

Updated on: Apr 01, 2023 | 2:30 PM

ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬಾರದು, ಇಲ್ಲಿನ ಮರಗಳನ್ನು ಉಳಿಸಬೇಕು ಎಂದು ಆಗ್ರಹಿಸಿ ಮೆರವಣಿಗೆ ಮಾಡಿದ್ಧ 9 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆಗೆ ವಿರೋಧಿಸಿ ಧರಣಿ: ಸದಾಶಿವನಗರ ಠಾಣೆಯಲ್ಲಿ 9 ಜನರ ವಿರುದ್ಧ ಎಫ್​ಐಆರ್ ದಾಖಲು
ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆಗೆ ವಿರೋಧಿಸಿ ಧರಣಿ
Follow us on

ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆಗೆ ವಿರೋಧಿಸಿ ಧರಣಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದ 9 ಜನರ ಮೇಲೆ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸ್ಯಾಂಕಿ ರಸ್ತೆ ಮೇಲ್ಸೇತುವೆ, ರಸ್ತೆ ವಿಸ್ತರಣೆ ಯೋಜನೆ ವಿರೋಧಿಸಿ ಫೆ.19ರಂದು ಸ್ಯಾಂಕಿ ಕೆರೆ ಪರಿಸರ ಉಳಿಸುವಂತೆ ಧರಣಿ ನಡೆಸಲಾಗಿತ್ತು. ಅನುಮತಿ ಪಡೆಯದೆ ಧರಣಿ, ಟ್ರಾಫಿಕ್ ಸಂಚಾರಕ್ಕೆ ಅಡಚಣೆ ಆರೋಪ ಹಿನ್ನೆಲೆ 9 ಜನರ ಮೇಲೆ ಎಫ್​ಐಆರ್​ ದಾಖಲಾಗಿದೆ.

ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬಾರದು, ಇಲ್ಲಿನ ಮರಗಳನ್ನು ಉಳಿಸಬೇಕು ಎಂದು ಆಗ್ರಹಿಸಿ ಮೆರವಣಿಗೆ ನಡೆಸಲಾಗಿತ್ತು. ಈ ಮೆರವಣಿಗೆಯಲ್ಲಿ 70 ನಾಗರಿಕರು ಭಾಗಿಯಾಗಿದ್ದರು. ಸದ್ಯ 9 ಜನರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕ್ರಮಕ್ಕೆ ನಾಗರಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಫೆಬ್ರವರಿ 19, 2023ರಂದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಫುಟ್‌ಪಾತ್‌ನಲ್ಲಿ ಮೆರವಣಿಗೆ ನಡೆಸಲಾಗಿತ್ತು.

ಇದನ್ನೂ ಓದಿ:Sankey Tank Flyover: ಸ್ಯಾಂಕಿ ಕೆರೆ ಫ್ಲೈಓವರ್ ನಿರ್ಮಾಣಕ್ಕೆ ಪರ-ವಿರೋಧ ಅಭಿಪ್ರಾಯ; ಟೆಂಡರ್​ನಲ್ಲಿ ಕೇವಲ ಇಬ್ಬರು ಬಿಡ್ಡರ್ ಭಾಗಿ 

ಪ್ರತಿಭಟನಾ ಮೆರವಣಿಗೆಯ ನಂತರ, ಪೊಲೀಸರು ಮೆರವಣಿಗೆಯಲ್ಲಿ ಭಾಗಿಯಾದ ನಾಗರಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರಲ್ಲಿ ಒಬ್ಬರನ್ನು ವಿಚಾರಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಾಗೂ ಮೆರವಣಿಗೆಯಲ್ಲಿ ಭಾಗಿಯಾದವರ ಮೇಲೆ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ. ಐಪಿಸಿ ಸೆಕ್ಷನ್‌‌ 341, 141, 149 ಮತ್ತು 283 ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದ್ದು, ಅಕ್ರಮ ಬಂಧನ, ಕಾನೂನುಬಾಹಿರ ಸಭೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ನೋಟೀಸ್ ನೀಡಲಾಗಿದೆ.

ಇನ್ನು ಮತ್ತೊಂದೆಡೆ ಪ್ರತಿಭಟನಾಕಾರರು ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗಿದೆ ಎಂದು ತೋರಿಸಲು ವೀಡಿಯೊ ಪುರಾವೆಗಳನ್ನು ಸಾಕ್ಷಿಯಾಗಿ ತೋರಿಸಿದ್ದಾರೆ. ಸಾರ್ವಜನಿಕ ಮಾರ್ಗಕ್ಕೆ ಯಾವುದೇ ಅಡ್ಡಿ ಇಲ್ಲ, ಕಾನೂನುಬಾಹಿರ ಸಭೆ ಇಲ್ಲ ಎಂದು ತಿಳಿದು ಬಂದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:30 pm, Sat, 1 April 23