
ಬೆಂಗಳೂರು, ಅಕ್ಟೋಬರ್ 02: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಭಾರಿ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಜೈಲಿನ ಆವರಣದಲ್ಲಿ ನಡೆಸಿದ ಹಠಾತ್ ತಪಾಸಣೆ ವೇಳೆ ಮೊಬೈಲ್ ಫೋನ್, ಮೂರು ಸಿಮ್ ಕಾರ್ಡ್‌ಗಳು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯಕ್ಕೆ ಬಳಸಬಹುದಾದ ನಗದು ಹಣ ಪತ್ತೆಯಾಗಿದ್ದು, ಕಾರಾಗೃಹದ ಭದ್ರತೆಯ ಕುರಿತು ಮತ್ತೆ ಹಲವು ಅನುಮಾನಗಳು ವ್ಯಕ್ತವಾಗಿವೆ.
ಜೈಲಿನ ಸೂಪರಿಂಟೆಂಡೆಂಟ್ ಬಿ.ಎಂ. ಕೊಟ್ರೇಶ್ ನೇತೃತ್ವದಲ್ಲಿ ನಡೆದ ದಿಢೀರ್ ದಾಳಿ ವೇಳೆ ಟವರ್-2, ಸಿ-ಬ್ಯಾರಕ್‌ನ ಕೊಠಡಿ ಸಂಖ್ಯೆ 4ರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಲತೇಶ ಎಂಬ ಕೈದಿಯ ಬ್ಯಾಗ್‌ನಲ್ಲಿ ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಕೊಠಡಿ ಸಂಖ್ಯೆ 5ರಲ್ಲಿದ್ದ ಮೊಹಮ್ಮದ್ ನವಾಜ್ ಎಂಬ ಕೈದಿಯ ಟೋಪಿಯ ಒಳಗೆ ರಹಸ್ಯವಾಗಿ ಬಾಂಚಿಡಲಾಗಿದ್ದ ಮೂರು ಸಿಮ್ ಕಾರ್ಡ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇಷ್ಟೇ ಅಲ್ಲದೆ, ಅಡುಗೆ ಮನೆಯ ಶೌಚಾಲಯದ ಕೊಠಡಿಯಲ್ಲಿ ಇಡಲಾಗಿದ್ದ ಬ್ಯಾಗ್ ಒಂದರಲ್ಲಿ ಒಟ್ಟು 8,500 ರೂಪಾಯಿ ನಗದು ಹಣ ಪತ್ತೆಯಾಗಿದೆ. ನಿಷೇಧಿತ ವಸ್ತುಗಳು ಹಾಗೂ ಹಣವನ್ನು ಜೈಲಿನೊಳಗೆ ತರಲು ಸಹಕರಿಸಿದ ಸಿಬ್ಬಂದಿ ಹಾಗೂ ಬಳಸಿದ ಕೈದಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗಷ್ಟೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಜೈಲಿನ ಸೆಲ್‌ನಲ್ಲೂ ಸ್ಮಾರ್ಟ್‌ಫೋನ್ ಪತ್ತೆಯಾಗಿದ್ದು ಭಾರಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಮತ್ತೆ ಸಿಮ್, ಮೊಬೈಲ್ ಹಾಗೂ ಹಣ ಪತ್ತೆಯಾಗಿರುವುದು ಕಾರಾಗೃಹ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ