
ಬೆಂಗಳೂರು, ಅ.27: ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ಬೆಚ್ಚಿಬೀಳಿಸುವ ಹಾಗೂ ಕರುಣಾಜನಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಂಗಸಂಸ್ಥೆಯಾದ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ಹಿರಿಯ ವಿಜ್ಞಾನಿಯೊಬ್ಬರು ತಂದೆಯ ಕಣ್ಣೆದುರೇ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಎಡಿಎ ಸಂಸ್ಥೆಯ ಪ್ರೋಗ್ರಾಮಿಂಗ್ ವಿಭಾಗದ ಗ್ರೇಡ್ ‘ಎಫ್’ ಹಿರಿಯ ವಿಜ್ಞಾನಿ ಶರದ್ ಕಟಿಯಾರ್ (47) ಎಂದು ಗುರುತಿಸಲಾಗಿದೆ. ಅಕ್ಟೋಬರ್ 21ರ ಸಂಜೆ 7:30ರ ಸುಮಾರಿಗೆ ಈ ಭೀಕರ ದುರಂತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಜ್ಞಾನಿ ಶರದ್ ಕಟಿಯಾರ್ ಕಳೆದ ಕೆಲ ತಿಂಗಳುಗಳಿಂದ ಸೈಕಾಲಜಿಕಲ್ ಡಿಸಾರ್ಡರ್ ಹಾಗೂ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮಾನಸಿಕ ಒತ್ತಡದ ಹಿನ್ನೆಲೆಯಲ್ಲಿ ಅವರು ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ಸೇವಿಸುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ನಿಮಾನ್ಸ್ ಆಸ್ಪತ್ರೆಯಲ್ಲೂ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡ ದಿನವೂ (ಅಕ್ಟೋಬರ್ 21) ಅವರು ನಿಮಾನ್ಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದರು.
ಘಟನೆಯ ದಿನ ಶರದ್ ಅವರ ವಿಚಿತ್ರ ಚಲನವಲನಗಳನ್ನು ಗಮನಿಸಿದ ಅವರ ವೃದ್ಧ ತಂದೆ, ಅನುಮಾನಗೊಂಡು ಮಗನ ಹಿಂದೆಯೇ ಮನೆಯಲ್ಲಿ ಸುತ್ತಾಡುತ್ತಿದ್ದರು. ಸಂಜೆ 7:30ರ ಸುಮಾರಿಗೆ ಶರದ್ ಏಕಾಏಕಿ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳನ್ನು ಹತ್ತಿ 4ನೇ ಮಹಡಿಗೆ ಧಾವಿಸಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ವೃದ್ಧ ತಂದೆ, ಮಗನನ್ನು ತಡೆಯಲು ಆತನ ಹಿಂದೆಯೇ ಓಡಿದ್ದಾರೆ. ಆದರೆ ವಯಸ್ಸಾದ ಕಾರಣ ಮೆಟ್ಟಿಲುಗಳನ್ನು ಹತ್ತಲಾಗದೆ ತಂದೆ ಆಯಾಸಗೊಂಡಿದ್ದಾರೆ. ತಂದೆ ಬಂದು ತಡೆಯುವಷ್ಟರಲ್ಲೇ ವಿಜ್ಞಾನಿ ಶರದ್ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ. ರಕ್ತದ ಮಡುವಿನಲ್ಲಿ ಗಂಭೀರ ಗಾಯಗೊಂಡು ಬಿದ್ದಿದ್ದ ಶರದ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲು ಕುಟುಂಬಸ್ಥರು ಹಾಗೂ ಸ್ಥಳೀಯರು ಮುಂದಾದರಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಆರಂಭದಲ್ಲಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಕೆ.ಆರ್. ಪುರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣದ ಸಮಗ್ರ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Tue, 27 October 26