
ಬೆಂಗಳೂರು, (ಮೇ 14): ಮೆಟ್ರೋ ಹಳದಿ ಮಾರ್ಗದಲ್ಲಿ (Yellow Metro Line) ಸಂಚಾರ ದಟ್ಟಣೆ (Traffic) ನಿಯಂತ್ರಿಸುವ ಉದ್ದೇಶದೊಂದಿಗೆ ನಿರ್ಮಿಸಲಾದ ಡಬಲ್ ಡೆಕ್ಕರ್ ಫ್ಲೈ ಓವರ್ (double decker flyover) ನಿಜಕ್ಕೂ ವಾಹನ ಸವಾರರಿಗೆ ರಿಲೀಫ್ ತಂದಿದೆ. 449 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಲೂಪ್ ಮತ್ತು ಇಳಿಜಾರು ಸೇರಿ 5.12 ಕಿಲೋ ಮೀಟರ್ ಉದ್ದವಿರುವ ಮೇಲ್ಸೇತುವೆ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೆ ಸಂಪರ್ಕ ಕಲ್ಪಿಸುತ್ತೆ. ಆದರೆ ಮೇಲ್ಸೇತುವೆ ನಿರ್ಗಮನದ ಬಳಿ ಸಂಚಾರ ದಟ್ಟಣೆ ಗಮನಾರ್ಹ ರೀತಿಯಲ್ಲಿ ಹೆಚ್ಚಾಗುತ್ತಿದೆ. ಹೌದು… ರಾಗಿಗುಡ್ಡ ಮೆಟ್ರೋ ನಿಲ್ದಾಣ ಬಳಿ ಫ್ಲೈ ಓವರ್ ಇಳಿಯುವ ಮುಂಚೆಯೇ ಕಿಲೋ ಮೀಟರ್ ನಷ್ಟು ಟ್ರಾಫಿಕ್ ಜಾಮ್ ಎದುರಾಗುತ್ತಿದೆ.
ಇನ್ನು ಪೀಕ್ ಅವರ್ ನಲ್ಲಂತೂ ವಾಹನ ಸವಾರರ ಪಾಡು ಹೇಳತೀರದಾಗಿದೆ. ಸಿಲ್ಕ್ ಬೋರ್ಡ್ ಕಡೆಯಿಂದ ರಾಗಿಗುಡ್ಡ ಕಡೆಗೆ ಬರುವ ವಾಹನಗಳು ಇಳಿಯುವ ವೇಳೆ ಬಾಟಲ್ ನೆಕ್ ವಿನ್ಯಾಸ ಮಾಡಲಾಗಿದೆ. ಇಳಿದ ಕೂಡಲೇ 200 ಮೀಟರ್ ಅಂತರದಲ್ಲಿ ಟ್ರಾಫಿಕ್ ಸಿಗ್ನಲ್ ಕೂಡ ಇದೆ. ಹೀಗಾಗಿ ಮೇಲ್ಸೇತುವೆ ವಿನ್ಯಾಸದ ವೇಳೆ ಇದನ್ನೆಲ್ಲ ಪರಿಗಣಿಸಬೇಕಿತ್ತು ಅಂತ ವಾಹನ ಸವಾರರು ಹೇಳಿದ್ದಾರೆ. ಅಲ್ಲದೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಟ್ರಾಫಿಕ್ ಕಿರಿಕಿರಿ ಮತ್ತಷ್ಟು ಕಗ್ಗಂಟಾಗಿ ಕಾಡಲಿದೆ ಅಂತಲೂ ಬೇಸರ ಹೊರಹಾಕಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೂಡ ಈ ವಿಚಾರವನ್ನು ಸಾಮಾಜಿಕ ಜಾಲತಾಣ X ನಲ್ಲಿ ಪ್ರಸ್ತಾಪಿಸಿ ಡಿಸಿಎಂ ಡಿಕೆ ಶಿವಕುಮಾರ್ ಕಾಲೆಳೆದಿದ್ದಾರೆ.
ಒಟ್ಟಾರೆ ಡಬಲ್ ಡೆಕ್ಕರ್ ಫ್ಲೈ ಓವರ್ ಬೆಂಗಳೂರಿನ ಮತ್ತಷ್ಟು ಹೊಸ ಮಾರ್ಗಗಳಲ್ಲಿ ಬರಬೇಕು ಎಂಬ ಕೂಗು ಹೆಚ್ಚಾಗಿದೆ. ಆದರೆ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣದ ಬಳಿಕ ಆಗುವ ಸಾಧಕ ಬಾಧಕ ಬಗ್ಗೆಯೂ ಅಧಿಕಾರಿಗಳು ನಿಗಾ ವಹಿಸಬೇಕು. ಇಲ್ಲವಾದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಗಳು ಟ್ರಾಫಿಕ್ ದಟ್ಟಣೆಯನ್ನು ಶಿಫ್ಟ್ ಮಾಡುತ್ತದೆ ಹೊರತು ನಿವಾರಣೆ ಮಾಡಲ್ಲ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
Published On - 10:27 pm, Thu, 14 May 26