Bangalore Rain: ಬೆಂಗಳೂರಿನಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು, ವಾಹನಗಳಿಗೆ ಹಾನಿ, ತಪ್ಪಿದ ದುರಂತ

|

Updated on: May 20, 2023 | 9:28 PM

ಬೆಂಗಳೂರು ನಗರದ ಹಲವೆಡೆ ಶನಿವಾರ ಸಂಜೆ ಮಳೆಯಾಗಿದ್ದು, ಕೆಲವಡೆ ಬಿರುಗಾಳಿ, ಗುಡುಗು ಹಾಗೂ ಮಿಂಚು ಸಹಿತ ಮಳೆ ಸುರಿದ ಪರಿಣಾಮ ಮರಗಳು ಧರೆಗುರುಳಿ ಅವಾಂತರವೇ ಸೃಷ್ಟಿಯಾಗಿದೆ.

Bangalore Rain: ಬೆಂಗಳೂರಿನಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು, ವಾಹನಗಳಿಗೆ ಹಾನಿ, ತಪ್ಪಿದ ದುರಂತ
ಬೆಂಗಳೂರಿನಲ್ಲಿ ಸುರಿದ ಮಳೆಗೆ ವಾಹನಗಳ ಮೇಲೆ ಬಿದ್ದ ಮರಗಳು
Follow us on

ಬೆಂಗಳೂರು: ನಗರದ ಹಲವೆಡೆ ಶನಿವಾರ ಸಂಜೆ ಮಳೆಯಾಗಿದ್ದು (Bangalore Rain), ಕೆಲವಡೆ ಬಿರುಗಾಳಿ, ಗುಡುಗು ಹಾಗೂ ಮಿಂಚು ಸಹಿತ ಮಳೆ ಸುರಿದ ಪರಿಣಾಮ ಮರಗಳು ಧರೆಗುರುಳಿ ಅವಾಂತರವೇ ಸೃಷ್ಟಿಯಾಗಿದೆ. ಜಯನಗರ, ಜೆಪಿ ನಗರ, ಬನಶಂಕರಿ, ಶಾಂತಿನಗರ, ಚಾಮರಾಜಪೇಟೆ, ರಾಜಾಜಿನಗರ, ಚಂದ್ರಲೇಔಟ್, ಮೆಜೆಸ್ಟಿಕ್, ಸಿಟಿ ಮಾರ್ಕೇಟ್, ರಿಚ್​​ಮಂಡ್ ರಸ್ತೆ, ನಂಜಪ್ಪ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ. ಹಾಗಿದ್ದರೆ ಇಂದು ಸುರಿದ ಮಳೆಗೆ ಎಲ್ಲೆಲ್ಲಿ ಏನೇನು ಅನಾಹುತ ಸಂಭವಿಸಿದೆ? ಇಲ್ಲಿದೆ ಮಾಹಿತಿ.

ನಗರದ ಹಲವೆಡೆ ಬಿರುಗಾಳಿ ಸಹಿತ ಮಳೆಗೆ ಒಣಗಿದ ರೆಂಬೆ-ಕೊಂಬೆಗಳು ರಸ್ತೆಗೆ ಬಿದ್ದಿವೆ. ಕಂಠೀರವ ಕ್ರೀಡಾಂಗಣ ಮುಂಭಾಗದ ಕಬ್ಬನ್ ಪಾರ್ಕ್ ಒಳಭಾಗದ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಬ್ಬನ್ ಪಾರ್ಕ್ ಒಳಭಾಗದಲ್ಲಿ ಹತ್ತಾರು ಮರಗಳು ಧರೆಗುರುಳಿವೆ. ಅಲ್ಲದೆ, ಇಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಕಿದ್ದ ಕಟೌಟ್​ಗಳು ಕೂಡ ಮುರಿದುಬಿದ್ದಿವೆ. ಮಳೆಯಿಂದಾಗಿ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣಕ್ಕೆ ಹಾಕಿದ್ದ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿವೆ.

ಇದನ್ನೂ ಓದಿ: Karnataka Rains: ಬೆಂಗಳೂರಿನಲ್ಲಿಂದು ಗುಡುಗು ಸಹಿತ ಮಳೆ ಸಾಧ್ಯತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ದಿನ ಮಳೆ

ಅದೇ ರೀತಿ, ಕಸ್ತೂರಿ ಬಾ ರಸ್ತೆಯಲ್ಲಿ ತೆರಳುತ್ತಿದ್ದ ಕಾರಿನ ಮೇಲೂ ಮರ ಬಿದ್ದಿದೆ. ರಸ್ತೆಯೂದ್ದಕ್ಕೂ ಬಿದ್ದಿರುವ ಮರದ ಕೊಂಬೆಗಳನ್ನು ಅಗ್ನಿಶಾಮಕ ಸಿಬ್ಬಂದಿಯಿಂದ ತೆರವುಗೊಳಿಸಿದ್ದಾರೆ. ಇನ್ನೊಂದೆಡೆ, ಸುರಿದ ಭಾರೀ ಮಳೆಗೆ ಡಿ.ದೇವರಾಜು ಅರಸು ರಸ್ತೆ ಕೆರೆಯಂತಾಯಿತು. ಪರಿಣಾಮ, ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹ‌ನ ಸವಾರರು ವಾಹನ ಚಲಾಯಿಸಲು ಪರದಾಟ ನಡೆಸುವಂತಾಯಿತು.

ಹೆಸರುಘಟ್ಟದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಧುಗಿರಿಪುರದಲ್ಲಿ ರಸ್ತೆಗೆ ವಿದ್ಯುತ್ ಕಂಬಗಳು ಉರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಕಳಪೆ ಗುಣಮಟ್ಟದ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದರಿಂದ ಕಂಬಗಳು ಗಾಳಿಗೆ ಧರೆಗುರುಳಿವೆ. ಗಿರಿನಗರದ ನೆಹರು ರಸ್ತೆಯಲ್ಲಿಯೂ ವಾಹನಗಳ ಮೇಲೆ ಬೃಹತ್ ಮರ ಹಾಗೂ ಕೊಂಬೆಗಳು ಬಿದ್ದಿವೆ. ಘಟನೆಯಲ್ಲಿ ಒಂದು ಕಾರು ಸಂಪೂರ್ಣ ಜಖಂಗೊಂಡಿದೆ.

ಟಾಟಾ ಏಸ್ ಮೇಲೆ ಬಿದ್ದ ಮರದ ಕೊಂಬೆ ಬಿದ್ದ ಘಟನೆ ಬಸವನಗುಡಿಯಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಶಾಸಕ ರವಿಸುಬ್ರಮಣ್ಯ ಅವರು ನೆಲಕ್ಕೆ ಬಿದ್ದಿದ್ದ ಮರ ಮತ್ತು ಕೊಂಬೆಗಳನ್ನು ತೆರವು ಮಾಡಿಸಿದರು. ಬಸವನಗುಡಿಯಲ್ಲಿ ಸಂಜೆ ಸುರಿದ‌ ಮಳೆಗೆ‌ ಸುಮಾರು ‌ಹತ್ತಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ