Amit Shah: ವಿಧಾನಸೌಧ ಎದುರು ಬಸವೇಶ್ವರ, ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ಅಮಿತ್​ ಶಾ

|

Updated on: Mar 26, 2023 | 8:18 PM

ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಅನುಭವ ಮಂಟಪ ಸ್ಥಾಪಕ, ಸಮಾಜ ಪರಿವರ್ತಕ ಜಗಜ್ಯೋತಿ ಬಸವೇಶ್ವರ ಹಾಗೂ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ಇಂದು (ಮಾ.26) ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣ ಮಾಡಿದರು.

ಬೆಂಗಳೂರು: ವಿಧಾನಸೌಧದ (Vidhana Soudha) ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಅನುಭವ ಮಂಟಪ ಸ್ಥಾಪಕ, ಸಮಾಜ ಪರಿವರ್ತಕ ಜಗಜ್ಯೋತಿ ಬಸವೇಶ್ವರ (Basaveshwar) ಹಾಗೂ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ (Kempegowda) ಅವರ ಪ್ರತಿಮೆಯನ್ನು ಇಂದು (ಮಾ.26) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅನಾವರಣ ಮಾಡಿದರು. ಅಮಿತ್​ ಶಾ ರಾಜ್ಯ ಪ್ರವಾಸದಲ್ಲಿದ್ದು, ರಾಯಚೂರು (Raichur) ಮತ್ತು ಬೀದರ್​ನಲ್ಲಿ (Bidar) ಸರ್ದಾರ್​ ವಲ್ಲಭಭಾಯಿ ಪಟೇಲ್ (Sardar Vallabhbhai Patel) ​​ಮೂರ್ತಿ ಅನಾವರಣ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಾಂಯಂಕಾಲ ಬೆಂಗಳೂರಿಗೆ (Bengaluru) ಆಗಮಿಸಿದರು. ವಿಧಾನಸೌಧದ ಆವರಣದಲ್ಲಿರುವ ಮಾಜಿ ಪ್ರಧಾನಿ ಜವಾಹಾರ್ ಲಾಲ್​ ನೆಹರು (Jawaharlal Nehru) ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್​ ಅಂಬೇಡ್ಕರ್ (BR Ambedkar)​ ಪುತ್ಥಳಿ ಮಧ್ಯಭಾಗದಲ್ಲಿ ಈ ಇಬ್ಬರೂ ಮಹಾನೀಯರ ನಾಲ್ಕೂ ಮೀಟರ್​ ಎತ್ತರದ ಅಶ್ವಾರೂಢ ಪ್ರತಿಮೆಗಳನ್ನು ಸ್ಥಾಪನೆ ಮಾಡಲಾಗಿದೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಬಳಿಕ ಮಾತನಾಡಿದ ಅಮಿತ್​ ಶಾ ಅವರು ಕರ್ನಾಟಕದ ವಿಧಾನಸಭೆಗೆ ಇಂದು ವಿಶೇಷ ದಿನ. ಇಬ್ಬರು ಮಹಾನಿಯರ ಪ್ರತಿಮೆ ಅನಾವರಣವಾಗಿದೆ. ಈ ಮಹಾಪುರುಷರು ಜಗತ್ತಿಗೆ ಕರ್ನಾಟಕದ ಸಂದೇಶ ರವಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾರೇ ಶಾಸಕರು ಬಂದರೂ ಬಸವಣ್ಣರ ಸಾಮಾಜಿಕ ನ್ಯಾಯ ಹಾಗೂ ಉತ್ತಮ ಆಡಳಿಗಾರ ಕೆಂಪೇಗೌಡರ ನೆನಪು ಮಾಡಿಕೊಳ್ಳುತ್ತಾರೆ. ಬಸವೇಶ್ವರರ ಪ್ರತಿಮೆ ಭಾರತದಲ್ಲೇ ಪ್ರಜಾಪ್ರಭುತ್ವ ಹುಟ್ಟಿದ್ದು ಎಂಬ ಸಂದೇಶ ರವಾನೆ ಮಾಡುತ್ತೆ. ಜಾತಿ ಪದ್ದತಿಯನ್ನು ದೂರವಿಟ್ಟು ಎಲ್ಲರು ಒಂದು ಎಂಬ ಸಂದೇಶವನ್ನು ರವಾನಿಸಿದರು ಎಂದು ಹೇಳಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡಿದರು. ಸಂವಿಧಾನದಲ್ಲಿ ಧರ್ಮ ಆಧರಿತ ಮೀಸಲಾತಿಗೆ ಅವಕಾಶ ಇಲ್ಲ. ಧರ್ಮಾಧಾರಿತ ಶೇ 4 ರಷ್ಟು ಮೀಸಲಾತಿಯನ್ನು ಸಿಎಂ ಬೊಮ್ಮಾಯಿ ಸಮಾಪ್ತಿಗೊಳಿಸಿದ್ದಾರೆ. ಈ ಮೀಸಲಾತಿಯನ್ನು ಲಿಂಗಾಯತ, ಒಕ್ಕಲಿಗರಿಗೆ ಮರು ಹಂಚಿದ್ದಾರೆ. ಈ ಮೂಲಕ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಕರ್ನಾಟಕ ವಿಕಾಸಕ್ಕೆ ಜಗಳ ಗಂಟ ಪಕ್ಷ ಬೇಕಾಗಿಲ್ಲ. ಸಿಎಂ ಹುದ್ದೆಗೆ ಜಗಳ ಆಡೋರು ಬೆಂಗಳೂರು ಉದ್ಧಾರ ಮಾಡಲ್ಲ. ಮೋದಿ ನೇತೃತ್ವದಲ್ಲೇ ಕರ್ನಾಟಕ ವಿಕಾಸವಾಗುತ್ತದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಗೊರಟಾ ಸ್ಮಾರಕವನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿ: ಕೇಂದ್ರ ಸಚಿವ ಅಮಿತ್ ಶಾ ಘೋಷಣೆ

ಎರಡು ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡುವುದು ನನ್ನ ಬಹಳ ದಿನದ ಕನಸು

ಇಂದು ನಮ್ಮಲ್ಲೆರಿಗೂ ಸಂತಸದ ದಿನ. ಶಿವಶರಣರಿಗೆ ಸರಿಸಾಟಿಯೇ ಇಲ್ಲ. ಬಸವೇಶ್ವರರ ಮತ್ತು ಕೆಂಪೇಗೌಡರ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡುವುದು ನನ್ನ ಬಹಳ ದಿನದ ಕನಸು. ಬಸವೇಶ್ವರರು 12 ನೇ ಶತಮಾನದಲ್ಲಿ ಜಾತಿ ಪದ್ದತಿಯನ್ನು ಹೋಗಲಾಡಿಸಲು ಕೆಲಸ ಮಾಡಿದರು. ಬಸವೇಶ್ವರರ ಕ್ರಾಂತಿಕಾರಕ ನಡೆ ನಮಗೆಲ್ಲ ಆದರ್ಶ. ಮಠ-ಮಾನ್ಯಗಳು ಇಂದಿಗೂ ಜನರಿಗೆ ಬಸವಣ್ಣರ ವಚನಗಳನ್ನು ತಿಳಿಸುತ್ತಾ ಬಂದಿವೆ. ಶಿವಶರಣರು ಇದ್ದ ನಾಡಿನಲ್ಲಿ ನಾವೆಲ್ಲಾ ಹುಟ್ಟಿರುವುದೇ ಪುಣ್ಯ. ನಾಡಪ್ರಭು ಕೆಂಪೇಗೌಡರು ಬೆಂಗಳೂರು ಕಟ್ಟಿದ್ದಾರೆ. ನದಿಯ ಮೂಲಗಳೇ ಇಲ್ಲದ ಸ್ಥಳದಲ್ಲಿ ನಗರ ಕಟ್ಟಿದವರು ಕೆಂಪೇಗೌಡರು. ಕೆರೆಗಳನ್ನು ಕಟ್ಟಿ, ಸಾಕಷ್ಟು ಕೆಲಸ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಡಾ.ಕೆ.ಸುಧಾಕರ್, ಸಿ.ಸಿ.ಪಾಟೀಲ್, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಶಾಸಕರಾದ ವಿಶ್ವನಾಥ್, ಸತೀಶ್ ರೆಡ್ಡಿ , ರವಿ ಸುಬ್ರಹ್ಮಣ್ಯ ಮತ್ತು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಂಡಿದ್ದರು.

ಜೊತೆಗೆ ಸುತ್ತೂರು ಶ್ರೀ, ಮಾದರ ಚನ್ನಯ್ಯ ಶ್ರೀ, ಸಿದ್ದಗಂಗಾ ಶ್ರೀ, ಸುತ್ತೂರು ಶ್ರೀ, ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀ, ವಚನಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Sun, 26 March 23