ತಂದೆ ಜೀವ ಉಳಿಸಲು ಲಿವರ್ ದಾನ ಮಾಡಿದ ಪುತ್ರಿ; ಆಸ್ಪತ್ರೆ ಬಿಲ್ ಭರಿಸಲಾಗದೆ ಸಂಕಷ್ಟದಲ್ಲಿ ತಂದೆ-ಮಗಳು!
ದಾವಣಗೆರೆಯ ಅಜ್ಜಪ್ಪ ಅವರ ಜೀವ ಉಳಿಸಲು ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಅವರ ಮಗಳು ಚಂದನಾ ಲಿವರ್ ದಾನ ಮಾಡಿದ್ದಾರೆ. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದರೂ, ಚಿಕಿತ್ಸಾ ವೆಚ್ಚ 57 ಲಕ್ಷಕ್ಕೆ ಏರಿಕೆಯಾಗಿ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಸಾರ್ವಜನಿಕರ ಸಹಾಯಕ್ಕಾಗಿ ಕುಟುಂಬ ಮನವಿ ಮಾಡಿದ್ದು, ನೆರವು ನೀಡಲು ಕೋರಲಾಗಿದೆ.

ದಾವಣಗೆರೆ, ಮಾರ್ಚ್ 15: ಜಿಲ್ಲೆಯ ಆಹಾರ ಇಲಾಖೆಯ ಶಿರಸ್ತೆದಾರ ಅಜ್ಜಪ್ಪ ಅವರ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ತಂದೆಯ ಜೀವ ಉಳಿಸಲು ಪುತ್ರಿಯೊಬ್ಬಳು ಲಿವರ್ ದಾನ (Organ Donation) ಮಾಡಿದರೂ, ಚಿಕಿತ್ಸಾ ವೆಚ್ಚ ಹೆಚ್ಚಾಗಿ ಕುಟುಂಬ ಆತಂಕದಲ್ಲಿದೆ. ಅಜ್ಜಪ್ಪ ಅವರು ಅಂಗಾಂಗ ವೈಫಲ್ಯದಿಂದ ಗಂಭೀರವಾಗಿ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ, ಅವರ ಪುತ್ರಿ ಚಂದನಾ ತಮ್ಮ ಲಿವರ್‌ನ ಒಂದು ಭಾಗವನ್ನು ದಾನ ಮಾಡಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಚಂದನಾ ತಂದೆಯ ಜೀವ ಉಳಿಸಲು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಕೈಕೊಟ್ಟ ಸಂಜೀವಿನಿ ಯೋಜನೆ
ಕಳೆದ ತಿಂಗಳು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಅಜ್ಜಪ್ಪರನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಆರಂಭದಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಕುಟುಂಬ ನಿರೀಕ್ಷಿಸಿತ್ತು. ಆದರೆ ಚಿಕಿತ್ಸೆ ಹಾಗೂ ಇತರೆ ವೆಚ್ಚಗಳನ್ನು ಸೇರಿಸಿ ಆಸ್ಪತ್ರೆಯ ಬಿಲ್ ಸುಮಾರು 57 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ ದಾವಣಗೆರೆ ಬೈ ಎಲೆಕ್ಷನ್: ಬಿಜೆಪಿ ಮನೆಯೊಂದು 3 ಬಾಗಿಲು, ಕಾಂಗ್ರೆಸ್ ಮನೆಯೊಂದು ಎರಡು ಬಾಗಿಲು
ಆರೋಗ್ಯ ಸಂಜೀವಿನಿ ಯೋಜನೆ ಅನ್ವಯವಾಗುವುದಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಒಂದು ಲಕ್ಷ ರೂಪಾಯಿ ವೈಯಕ್ತಿಕ ಸಹಾಯ ನೀಡಿದ್ದಾರೆ. ಸಾರ್ವಜನಿಕರು ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.