ಬೆಂಗಳೂರು: ಮಡಿವಾಳ ಕೆರೆ ಕೋಡಿ ಹೊಡೆದ ಪರಿಣಾಮ ಸಿಲ್ಕ್ ಬೋರ್ಡ್ (Silk Board) ಜಂಕ್ಷನ್ನ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿರುವಂತಹ ಘಟನೆ ನಡೆದಿದೆ. ಜೊತೆಗೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ರಸ್ತೆ ಮೇಲೆ ನೀರು ನಿಂತಿದೆ. ಹಾಗಾಗಿ ಸಂಜೆ ಡ್ಯೂಟಿ ಮುಗಿಸಿ ಸಿಲ್ಕ್ ಬೋರ್ಡ್ ಕಡೆ ಬರುವ ಸವಾರರು ಸ್ವಲ್ಪ ಎಚ್ಚರ ವಹಿಸಬೇಕಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ದಾಟಲು ಕನಿಷ್ಠ ಒಂದು ತಾಸು ಬೇಕೇಬೇಕು. ರಸ್ತೆಯಲ್ಲಿ ಸುಮಾರು ಒಂದೂವರೆ ಅಡಿಯಷ್ಟು ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಆಗಿದೆ. ಇಂದು ಮತ್ತೆ ಮಳೆ ಬಂದರೆ ಮತ್ತಷ್ಟು ಸಂಕಷ್ಟ ಉಂಟಾಗುವುದು ಖಚಿತ ಎನ್ನಲಾಗುತ್ತಿದೆ. ಇನ್ನು ಮಳೆ ನೀರಿಂದಾಗಿ Axis ಬ್ಯಾಂಕ್ ಒಂದರ ಬೇಸ್ಮೆಂಟ್ ತುಂಬೆಲ್ಲ ನೀರು ತುಂಬಿದ್ದು, ಎಟಿಎಂ ಸಂಪೂರ್ಣ ಜಲಾವೃತವಾಗಿದೆ. ಇಂದು ಬೆಳಗ್ಗೆಯಿಂದ ಬ್ಯಾಂಕ್ ವಹಿವಾಟು ಸ್ಥಗಿತವಾಗಿದ್ದು, ಎಟಿಎಂನಲ್ಲಿದ್ದ ಅಂದಾಜು 15 ಲಕ್ಷ ನೀರು ಪಾಲಾಗಿದೆ.
ತಾಲಸ್ಸ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಜಲದಿಗ್ಭಂದನ
ಇನ್ನು ಕೊಡಿ ಅವಾಂತರದಿಂದ BTM ಲೇಔಟ್ನಲ್ಲಿ ಅಪಾರ್ಟ್ಮೆಂಟ್ಗೆ ಕೆರೆ ನೀರು ನುಗ್ಗಿದೆ. ತಾಲಸ ಸ್ವೂಟ್ಸ್ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಜಲದಿಗ್ಬಂಧನ ಉಂಟಾಗಿದೆ. ಅಪಾರ್ಟ್‌ಮೆಂಟ್ ಬೇಸ್ಮೆಂಟ್ ಸಂಪೂರ್ಣ ಜಲಾವೃತವಾಗಿದ್ದು, ಬೇಸ್ಮೆಂಟ್ನಲ್ಲಿದ್ದ 4 ಐಷಾರಾಮಿ ಕಾರು, 10 ಬೈಕ್ ಮುಳುಗಡೆಯಾಗಿವೆ.
ಮೂರನೇ ಬಾರಿ ಭರ್ತಿಗೊಂಡ ಕೆಆರ್ಎಸ್
ಮಂಡ್ಯ: ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ ಪರಿಣಾಮವಾಗಿ 124.80 ಅಡಿ ಸಾಮರ್ಥ್ಯದ ಕೆಆರ್ಎಸ್ ಅಣೆಕಟ್ಟು ಮತ್ತೊಮ್ಮೆ ಭರ್ತಿಗೊಂಡಿದೆ. ಆ ಮೂಲಕ ವರ್ಷದಲ್ಲಿ ಮೂರನೇ ಬಾರಿ ಭರ್ತಿಗೊಂಡಂತಾಗಿದೆ. ಈ ಹಿಂದೆ ಜುಲೈ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಳೆಗೆ ಜಲಾಶಯ ಭರ್ತಿಗೊಂಡಿತ್ತು. ಸದ್ಯ ಅಣೆಕಟ್ಟು ಭರ್ತಿಗೊಂಡ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಹಳ್ಳದಲ್ಲಿ ಕೊಚ್ಚಿ ಹೋದ ಬೈಕ್ ಸವಾರ
ತುಮಕೂರು: ಕಲ್ಪತರು ನಾಡಿನಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಅದರಂತೆ ಆಂಧ್ರದಲ್ಲಿ ಕೃಷಿ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಪ್ರಭು ಬೈಕ್ನಲ್ಲಿ ಹೋಗುತ್ತಿದ್ದಾಗ ಜಿಲ್ಲೆಯ ಪಾವಗಡ ತಾಲೂಕಿನ ಹನುಮಯ್ಯನಪಾಳ್ಯ ಹಳ್ಳದ ನೀರಿನ ಹರಿವಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಸಿ.ಕೆಪುರದಿಂದ ಹನುಮಯ್ಯನಪಾಳ್ಯ ಹಳ್ಳದ ಮೂಲಕ ಕನ್ನಮೇಡಿ ಕಡೆ ಹೊಗುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನು ನೋಡಿದ ಸ್ಥಳೀಯ ಯುವಕರು ಕೂಡಲೇ ಕಾರ್ಯಪ್ರವೃತರಾಗಿ ಬೈಕ್ ಸವಾರನನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಬೈಕ್,ಲ್ಯಾಪ್ಟಾಪ್ ,ಕಡತಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಅಸ್ವಸ್ತ ಗೊಂಡಿದ್ದ ಪ್ರಭುವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಕೃಷಿ ಅಧಿಕಾರಿಯ ಪ್ರಾಣ ಉಳಿಸಿದ ಯುವಕರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:33 pm, Thu, 20 October 22