ಬೆಂಗಳೂರು, ಡಿ.26: ನಾವು ನುಡಿದಂತೆ ನಡೆಯುತ್ತೇವೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ರಾಜ್ಯಾಡಳಿತ ನಡೆಸುತ್ತಿರುವ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಅದನ್ನ ಮತ್ತೊಮ್ಮೆ ಸಾಭೀತು ಮಾಡಿದೆ. ಕೊಟ್ಟ ಮಾತಿನಂತೆ ತನ್ನ ಕೊನೆಯ ಗ್ಯಾರಂಟಿ ಯೋಜನೆ ಯುವ ನಿಧಿಯನ್ನ (Yuva Nidhi Scheme) ತಿಂಗಳಾಂತ್ಯಕ್ಕೆ ಜಾರಿ ಮಾಡಲು ಮುಂದಾಗಿದೆ. ಲೋಕಸಭಾ ಚುನಾವಣೆ (Lok Sabha) ಹೊಸ್ತಿನಲ್ಲಿ ಕಾಂಗ್ರೆಸ್ ಐದನೇ ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಿದೆ. ಇಂದಿನಿಂದ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಡಿಸೆಂಬರ್ ತಿಂಗಳ 26ರಂದು ಯುವ ನಿಧಿ ಯೋಜನೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಲುವಾಗಿನ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಯುವನಿಧಿ ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇನ್ನು ರಾಷ್ಟ್ರ ಕವಿ, ಯುವ ಸಮುದಾಯದ ಸ್ಪೂರ್ತಿ ಕುವೆಂಪುರವರ ಪುಣ್ಯಭೂಮಿ ಶಿವಮೊಗ್ಗದಲ್ಲಿ 2024ರ ಜನವರಿ 12ರಂದು ಈ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಅಂದೇ ಯೂತ್ ಐಕಾನ್ ವಿವೇಕಾನಂದರ ಜನ್ಮ ಜಯಂತಿ ಅನ್ನೋದು ಮತ್ತೊಂದು ಗಮನಾರ್ಹ ವಿಚಾರ.
ಪ್ರಸಕ್ತ ಸಾಲಿನಲ್ಲಿ ಯೋಜನಾ ಗಾತ್ರ 250 ಕೋಟಿಯಾಗಿದ್ದು ಮುಂದಿನ ವರ್ಷ ಇದರ ಪ್ರಮಾಣ 1,250 ಕೋಟಿಗಳಾಗಲಿದೆ. ರಾಜ್ಯದ ವಿಧ್ಯಾರ್ಥಿಗಳಿಗೆ ಮಾತ್ರ ಯೋಜನೆ ಲಾಭ ದೊರೆಯಲಿದೆ. ಇನ್ನು ಯೋಜನೆ ದುರ್ಬಳಕೆ ತಡೆಗೂ ಸರ್ಕಾರ ಕ್ರಮ ಕೈಗೊಂಡಿದೆ. ಯುವಕರಿಗೆ ಕೆಲಸ ಸಿಗುವವರೆಗೆ ಯೋಜನೆ ಹಣ ಲಭ್ಯವಾಗತ್ತೆ ಇದಕ್ಕಾಗಿ ಅವರು ಪ್ರತಿ ತಿಂಗಳ 25ನೇ ತಾರೀಖಿನೊಳಗೆ ತಮ್ಮ ಅರ್ಜಿಯಲ್ಲಿ ನಿಖರ ಮಾಹಿತಿ ನಮೂದು ಮಾಡಬೇಕು. ಜೊತೆಗೆ ಯೋಜನೆ ಹಣ ಪಡೆಯುವವರ ಬಗ್ಗೆ ಸಮಗ್ರ ಮಾಹಿತಿಯನ್ನು ಸರ್ಕಾರ ಕಲೆ ಹಾಕಲಿದೆ. ಒಂದು ವೇಳೆ ಕೆಲಸ ಸಿಕ್ಕ ಬಳಿಕವೂ ಹಣ ಪಡೆಯುವುದು ಕಂಡುಬಂದರೆ ಅವರಿಂದ ಹಣ ವಾಪಾಸ್ ಪಡೆದುಕೊಳ್ಳಲು ಸರ್ಕಾರ ಪ್ಲಾನ್ ಮಾಡಿದೆ. ಯುವನಿಧಿ ಅರ್ಜಿ ಸಲ್ಲಿಕೆಯನ್ನ ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಸೇವಾಸಿಂಧು ಪೋರ್ಟ್ ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಡಿಸೆಂಬರ್ 26ರಂದು ‘ಯುವನಿಧಿ’ ನೋಂದಣಿಗೆ ಚಾಲನೆ: ಸಚಿವ ಶರಣಪ್ರಕಾಶ್ ಪಾಟೀಲ್ ಘೋಷಣೆ
Published On - 7:29 am, Tue, 26 December 23