ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದ ಬಾರೆ ಹಣ್ಣು: ಸ್ವಾಭಿಮಾನದ ಬದುಕಿಗೆ ಆಸರೆಯಾಯ್ತು ಕೃಷಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 21, 2020 | 2:41 PM

ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದು, ಕೆಲಸ ಯಾವುದಾದರೇನು ಶ್ರದ್ಧೆಯಿಂದ ಮಾಡಿದರೆ ಸ್ವಾಭಿಮಾನದ ಜೀವನಕ್ಕೆ ಧಕ್ಕೆಯಿಲ್ಲ ಎನ್ನುವುದನ್ನು ಸಾಧಿಸಿ ತೋರಿಸಿಕೊಟ್ಟಿದ್ದಾರೆ.

ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದ ಬಾರೆ ಹಣ್ಣು: ಸ್ವಾಭಿಮಾನದ ಬದುಕಿಗೆ ಆಸರೆಯಾಯ್ತು ಕೃಷಿ
ರೈತ ಸೈಯದ್ ಮುತುರ್ಜಿ ಅನ್ಸಾರಿ
Follow us on

ಬೀದರ್: ಗಡಿ ಜಿಲ್ಲೆಯಾದ ಬೀದರ್​ನಲ್ಲಿನ ರೈತರು ಸದಾ ಸಂಕಷ್ಟದಲ್ಲಿಯೇ ಜೀವನ ನಡೆಸುತ್ತಾರೆ. ಇಲ್ಲಿ ಬದುಕು ಸಾಗಿಸುವ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೊಡುವ ಇಲ್ಲಿನ ರೈತರ ಸಮಸ್ಯೆ ಮಾತ್ರ ಜನಪ್ರತಿಧಿನಿಧಿಗಳಿಗೆ ಕೇಳಿಸುವುದೇ ಇಲ್ಲ. ಆದರೆ ಇಲ್ಲೊಬ್ಬ ರೈತರು ಇಂಥ ಹತ್ತಾರು ಸಮಸ್ಯೆಗಳ ಮಧ್ಯೆಯೂ ಬರಡು ಭೂಮಿಯಲ್ಲಿ ಗ್ರೀನ್ ಆ್ಯಪಲ್ ಗಾತ್ರದ ಬಾರೇ ಹಣ್ಣು ಬೆಳೆಯುವುದರ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಔರಾದ್ ತಾಲೂಕು ಜಿಲ್ಲೆಯಲ್ಲಿಯೇ ಅತೀ ಹಿಂದೂಳಿದ ತಾಲೂಕು ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಭಾಗದಲ್ಲಿ ಪ್ರತಿ ವರ್ಷವು ಮಳೆ ಕಡಿಮೆ, ಜೊತೆಗೆ ಅಗಾಧ ಬಿಸಿಲು ಇರುವುದರಿಂದ ನೀರಿನ ಸಮಸ್ಯೆಯೂ ಹೆಚ್ಚಾಗಿ ಕಂಡು ಬರುತ್ತದೆ. ಇಲ್ಲಿನ ಬಹುತೇಕ ರೈತರು ಮಳೆಯಾಶ್ರಿತ ಕೃಷಿಯಿಂದಲೇ ಬೆಳೆ ಬೆಳೆದು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಈ ಭಾಗದಲ್ಲಿ ಎಲ್ಲಿಯೇ ಬಾವಿ, ಬೋರ್​ವೆಲ್ ಕೊರೆಸಿದರೂ ನೀರು ಬರುವುದು ವಿರಳ. ಒಂದು ವೇಳೆ ನೀರು ಬಂದರು ಅದು ಸ್ವಲ್ಪ ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅದರಲ್ಲಿಯೇ ಕೆಲವು ರೈತರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಉಪಜೀವನ ಸಾಗಿಸುತ್ತಿದ್ದಾರೆ.

ಬಾರೆ ಹಣ್ಣು

ಆದರೆ ಈಗ ಇವೆಲ್ಲವನ್ನು ಮೆಟ್ಟಿ ನಿಂತ ರೈತರೊಬ್ಬರು ಮಾದರಿ ಕೆಲಸ ಮಾಡಿದ್ದಾರೆ. ಸೈಯದ್ ಮುತುರ್ಜಾ ಅನ್ಸಾರಿ ತಮ್ಮ 2 ಎಕರೆ ಜಮೀನಿನಲ್ಲಿ ಹತ್ತಾರು ಬಗೆಯ ಬೆಳೆಗಳನ್ನು ಬೆಳೆಯುವುದರ ಮೂಲಕ ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿದ್ದಾರೆ. ವಿಶಿಷ್ಟವಾದ ಬಾರೆ ಗಿಡಗಳನ್ನು ನೆಟ್ಟು ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಂಡಿದ್ದಾರೆ. 7 ವರ್ಷಗಳ ಹಿಂದೆ ಕೊಲ್ಕತ್ತಾದಿಂದ ತಂದ ಸುಮಾರು 1 ಸಾವಿರ ಸಸಿಗಳನ್ನು ತಮ್ಮ 2 ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದಾರೆ.

ಗ್ರೀನ್ ಆ್ಯಪಲ್​ನಂತೆ ಕಾಣುವ ಬಾರೆ ಹಣ್ಣು

ಮೊದಲು ಕಬ್ಬು ಬೆಳೆದು ಕೈ ಸುಟ್ಟುಕೊಂಡಿದ್ದೆ, ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಕಟಾವು ಮಾಡುವ ಹೊತ್ತಿಗೆ ನಮ್ಮ ಆದಾಯದ ಅರ್ಧಪಾಲು ಕರಗುತ್ತಿತ್ತು. ಹೀಗಾಗಿ ಕಳೆದ 7 ವರ್ಷಗಳಿಂದ ಕಬ್ಬು ಬೆಳೆಸುವುದು ನಿಲ್ಲಿಸಿ ಟೊಮೆಟೊ ಹಾಗೂ ಬಾರೇ ಹಣ್ಣು ಬೆಳೆಯುತ್ತಿದ್ದೇನೆ. ಈ ಹಣ್ಣು ನನ್ನ ಪಾಲಿಗೆ ಅಕ್ಷಯ ಪಾತ್ರೆಯಾಗಿದ್ದು ನಮ್ಮ ಬದುಕು ಸುಂದರವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಇವರ ತೋಟದಲ್ಲಿರುವ ಬಾರೆ ಹಣ್ಣುಗಳು ಗ್ರೀನ್​ ಆ್ಯಪಲ್​ನಂತೆ ಕಂಗೊಳಿಸುತ್ತಿವೆ. ತಿನ್ನಲು ಸಹ ಅಷ್ಟೇ ರುಚಿಯಾಗಿದ್ದು, ಬೇಡಿಕೆಯೂ ಕುದುರಿದೆ. ಅವರ ಹೊಲಕ್ಕೆ ಭೇಟಿ ನೀಡಿದರೆ ಒಂದು ಕ್ಷಣ ಅಚ್ಚರಿಯಾಗುತ್ತದೆ. ನೆತ್ತಿ ಸುಡುವ ಬಿಸಿಲಿನಲ್ಲೂ ಘಮಘಮ ಎಂದು ವಾಸನೆ ಬರುವ ಹಣ್ಣಿನ ಗಿಡದಲ್ಲಿನ ಕಾಯಿ ಜಾಸ್ತಿಯಾಗಿ ಬಾಗಿ ನಿಂತಿರುವ ಗಿಡಗಳನ್ನ ನೋಡಿದರೆ ಸೈಯದ್ ಶ್ರಮ ಎದ್ದು ಕಾಣುತ್ತದೆ.

ರೈತನಿಗೆ ಲಾಭ ತಂದುಕೊಟ್ಟ ಬಾರೇ ಹಣ್ಣು ಬೆಳೆ

2011ರಲ್ಲಿ ಬಾರೇ ಗಿಡ ನೆಡಬೇಕು ಎಂದು ನಿರ್ಧರಿಸಿ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಸಲಹೆ ಪಡೆದ ಮೇಲೆ ಬಾರೆ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ಆದರೆ, ಬಾರೆ ಹಣ್ಣಿನ ಕೃಷಿಗೆ ನಾನು ಹೊಸಬ. ಹೀಗಾಗಿ ಮೊದಲ ವರ್ಷ ನಷ್ಟ ಅನುಭವಿಸಬೇಕಾಯಿತು. ಹಣ್ಣಿನ ತಳಿ ಮತ್ತು ಗುಣಮಟ್ಟ ಚೆನ್ನಾಗರುವ ಕಾರಣ, ವ್ಯಾಪಾರಿಗಳು ಇವರಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ.

ಹೊಲದಲ್ಲಿನ ಬಾರೆ ಹಣ್ಣಿನ ಒಂದು ನೋಟ

ತೋಟಕ್ಕೆ ಬರುವ ವ್ಯಾಪಾರಿಗಳು ಖರೀದಿಸಿ, ಉಳಿದ ಹಣ್ಣುಗಳನ್ನು ಸ್ವತಃ ಹೈದರಾಬಾದ್​ಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದಾರೆ. ತಿಂಗಳಿಗೆ ಸರಾಸರಿ ₹ 2 ಲಕ್ಷದಷ್ಟು ಹಣವನ್ನು ಹಣ್ಣಿನ ಮಾರಾಟದಿಂದ ಗಳಿಸುತ್ತಿದ್ದಾರೆ. ಸ್ವಂತದ ದುಡಿಮೆ ಅವಧಿಯ ಕೂಲಿ, ಇತರ ಕೆಲಸಗಾರರ ಖರ್ಚು ಕಳೆದರೂ ಜೀವನಕ್ಕೆ ಕಷ್ಟವಿಲ್ಲದಷ್ಟು ಆದಾಯ ಸಿಗುತ್ತಿದೆ. ಕಷ್ಟಪಟ್ಟು ದುಡಿದರೆ ಕೃಷಿಯಲ್ಲಿ ಏನನ್ನಾದರೂ ಸಾಧಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ಈ ಬಾರೇ ಹಣ್ಣನ್ನ ಒಮ್ಮೆ ಬಿತ್ತನೆ ಮಾಡಿದ ನಂತರ ಯಾವುದೇ ಖರ್ಚು ಇರುವುದಿಲ್ಲ. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ.

ರುಚಿಕರವಾದ ಬಾರೆ ಹಣ್ಣು ಗಿಡದಲ್ಲಿ ಕಂಡುಬಂದಿದ್ದು ಹೀಗೆ

ಕಡಿಮೆ ನೀರು ಬಳಸಿಕೊಂಡು ಹತ್ತಾರು ಎಕರೆ ನೀರಾವರಿ ಮಾಡುವುದು ಹೇಗೆ ಎನ್ನುವುದನ್ನು ಈ ಕುಟುಂಬ ತೋರಿಸಿಕೊಟ್ಟಿದ್ದು, ಕಳೆದ ಆರೇಳು ವರ್ಷದಿಂದ ಪೈರಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿಲ್ಲ. ಕೇವಲ ಜೀವಾಮೃತ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೀವಾಮೃತದಿಂದ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಉಳಿಸಿಕೊಂಡು, ಮಣ್ಣಿನ ಫಲವತ್ತತೆ ಹೆಚ್ಚಿಸಿದ್ದಾರೆ.

ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಇವರು ಸ್ಥಳೀಯವಾಗಿಯೇ ಲಭ್ಯವಾಗುವ ವಸ್ತುಗಳನ್ನೇ ಬಳಸಿ, ಬೆಳೆಯನ್ನು ಕ್ರಿಮಿ ಮತ್ತು ಕೀಟಗಳ ಬಾಧೆಯಿಂದ ರಕ್ಷಿಸಿಕೊಂಡಿದ್ದಾರೆ. ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದು, ಕೆಲಸ ಯಾವುದಾದರೇನು ಶ್ರದ್ಧೆಯಿಂದ ಮಾಡಿದರೆ ಸ್ವಾಭಿಮಾನದ ಜೀವನಕ್ಕೆ ಧಕ್ಕೆಯಿಲ್ಲ ಎನ್ನುವುದನ್ನು ಸಾಧಿಸಿ ತೋರಿಸಿಕೊಟ್ಟಿದ್ದಾರೆ.

ಮುತುರ್ಜಾ ಅವರ ಸಂಪರ್ಕ ಸಂಖ್ಯೆ: 94835 94628.

ಶಿರಸಿಯಲ್ಲಿ ಎಗ್​ ಫ್ರೂಟ್​ ಕೃಷಿ: ಆದಾಯವೂ ಇದೆ, ಆರೋಗ್ಯವೂ ಇದೆ! ಏನೀ ಹಣ್ಣಿನ ಮಾಯೆ?

 

Published On - 2:38 pm, Mon, 21 December 20