ಬೀದರ್: ರಾಜ್ಯದಲ್ಲಿ ಹುಚ್ಚುನಾಯಿ, ಬೀದಿನಾಯಿ ದಾಳಿಗಳು ಹೆಚ್ಚಾಗುತ್ತಿವೆ. ವಾರದ ಹಿಂದೆಯಷ್ಟೇ ಚಿಕ್ಕಬಳ್ಳಾಪುರದಲ್ಲಿ ಓರ್ವ ಬಾಲಕನ ಮೇಲೆ ಬೀದಿ ನಾಯಿಗಳು ಎರಗಿ ಮುಖಕ್ಕೆ ಗಾಯಗೊಳಿಸಿದ್ದವು. ಇದೀಗ ಹುಚ್ಚುನಾಯಿ ದಾಳಿಗೆ ಎರಡು ವರ್ಷದ ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಬಸವಕಲ್ಯಾಣದ ಗಾಡವಾನ್ ಗಲ್ಲಿಯಲ್ಲಿ ನಡೆದಿದೆ. ಅಂಗಡಿಗೆ ತೆರಳುತ್ತಿದ್ದ ಅಸ್ಮಾ ಸಮೀರ್ ಶೇಕ್ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ ಗಂಭೀರವಾಗಿ ಗಾಯಗೊಳಿಸಿದೆ. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಘಟನೆಯಲ್ಲಿ ಮಗುವಿನ ಮುಖಕ್ಕೆ ಗಾಯಗಳಾಗಿದ್ದು, ವೈದ್ಯರು ಗಾಯಗಳಿಗೆ 32 ಹೊಲಿಗೆ ಹಾಕಿದ್ದಾರೆ.
ಈ ಹಿಂದೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪಟ್ಟಣದಲ್ಲಿ ಬೀದಿ ನಾಯಿ ದಾಳಿಗೆ 8 ವರ್ಷದ ಬಾಲಕ ಗಾಯಗೊಂಡಿದ್ದ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ರಸ್ತೆಗೆ ಇಳಿಯಲು ಭಯ ಆಗುತ್ತದೆ ಎಂದು ಭೀತಿ ಹೊರಹಾಕುತ್ತಲೇ ಇದ್ದಾರೆ. ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಶುಕ್ರವಾರ (ನ 11) ದಸ್ತಗೀರ್ ಎಂಬ 8ವರ್ಷದ ಬಾಲಕನು ಮನೆಯ ಮುಂದೆ ಆಟವಾಡುತ್ತಿದ್ದ ವೇಳೆಯಲ್ಲಿ ಬೀದಿ ನಾಯಿಗಳ ಹಿಂಡು ಬಾಲಕನ ಮೇಲೆ ದಾಳಿ ಮಾಡಿ ಕಚ್ಚಿಗಾಯಗೊಳಿಸಿತ್ತು. ಈ ಬಾಲಕ ತನಗೆ ಆದ ನೋವು ಬೇರೆ ಯಾರಿಗೂ ಆಗಬಾರದು ಎಂದು ಶಿಡ್ಲಘಟ್ಟ ನಗರಸಭೆಯ ಮುಂದೆ ಧರಣಿ ಆರಂಭಿಸಿದ್ದನು.
ಬೀದಿ ನಾಯಿಗಳ ಹಾವಳಿಗೆ ಬೇಸತ್ತಿದ್ದ ಸಂತೋಷನಗರ ಹಾಗೂ ತೈಬಾ ಬಡಾವಣೆಯ ಜನರು ಬಾಲಕನ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಈ ಹಿಂದೆ ಕೂಡ ಬೀದಿ ನಾಯಿ ದಾಳಿಯಿಂದ ನಗರದಲ್ಲಿ ಒಂದು ಮಗು ಮೃತಪಟ್ಟಿತ್ತು. ಮತ್ತೊಮ್ಮೆ ಅಂಥದ್ದೇ ಅನಾಹುತ ಸಂಭವಿಸಿರುವುದರಿಂದ ನಗರಸಭೆ ಶೀಘ್ರ ಗಮನ ಹರಿಸಬೇಕು ಎಂದು ಮಗುವಿನ ಸಂಬಂಧಿಕರು ಶಿಡ್ಲಘಟ್ಟ ನಗರಸಭೆ ಆಯುಕ್ತ ಶ್ರೀಕಾಂತ್ ಅವರಿಗೆ ಮನವಿ ಮಾಡಿದ್ದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Tue, 22 November 22