ಇತಿಹಾಸ ಪ್ರಸಿದ್ಧ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುರ ಹನುಮಾನ್ ದೇವಸ್ಥಾನದಲ್ಲೀಗ ಎಲ್ಲಿ ನೋಡಿದರಲ್ಲಿ ಜನವೋ ಜನ. ವಿವಿಧ ರಾಜ್ಯಗಳಿಂದ ಸಾಗೋರಾಪಾದಿಯಲ್ಲಿ ಜನರು ಹರಿದು ಬರುತ್ತಿದ್ದು ಕ್ಯೂ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದಿಂದ ಕೂಗಳತೆ ದೂರದಲ್ಲಿರುವ ಸಂಜೀವಿನಿ ಬೆಟ್ಟಕ್ಕೆ ಹೋಗಿ ಚಾಳಿಕಾ ದೇವಿಯ ದರ್ಶನ ಪಡೆದು ಕಲ್ಲುಗಳ ಕಂಬ ನಿರ್ಮಿಸಿ ಎಲ್ಲಾ ಒಳ್ಳೆಯದು ಮಾಡು ದೇವಾ ಅಂತಾ ಹನುಮನಲ್ಲಿ ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದಾರೆ.
ಶ್ರೀ ಗುರು ಸಿದ್ಧಾರೂಢ ಸ್ವಾಮಿ ಜನ್ಮಸ್ಥಳ (Siddharudha Swami birth place) ಚಳಕಾಪುರದಲ್ಲಿ (Chalkapur) ನಡೆಯುತ್ತಿದೆ ಹನುಮ ದೇವರ ಅದ್ದೂರಿ ಜಾತ್ರೆ (Hanuman Jatre)… ರಾಜ್ಯ ಹಾಗೂ ಹೊರರಾಜ್ಯದಿಂದ ಹರಿದುಬರುತ್ತಿದೆ ಜನ ಸಾಗರ. ಎಲ್ಲಿ ನೋಡಿದರಲ್ಲಿ ಜನವೋ ಜನ… ಚಳಕಾಪುರ ಹಣುಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಭಕ್ತರು… ಸಜೀವಿನಿ ಪರ್ವತದಲ್ಲಿಯೂ ನಡೆಯುತ್ತದೆ ಚಾಳಕಾ ದೇವಿಯ ಜಾತ್ರೆ… ಹೌದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುರ ಹನುಮಾನ್ ದೇವರ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು ಅಕ್ಟೋಬರ್ 24 ರಂದು ಆರಂಭವಾದ ಜಾತ್ರೆ ಅಕ್ಟೋಬರ್ 27 ಅಂದರೆ ನಾಡಿದ್ದು, ಜಾತ್ರೆಗೆ ತೆರೆ ಬೀಳಲಿದೆ.
ತಾಲೂಕು ಕೇಂದ್ರದಿಂದ 25 ಕಿ.ಮೀ ದೂರದ ಈ ಗ್ರಾಮದಲ್ಲಿ ಹನುಮ ದೇವರ ಜಾತ್ರೆ ವರ್ಷದಲ್ಲಿ ಎರಡು ಸಾರಿ ಅದ್ಧೂರಿಯಾಗಿ ನಡೆಯುತ್ತದೆ. ಜಾತ್ರೆ ಬಂತೆಂದರೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಇತರ ಊರುಗಳಲ್ಲಿ ವಾಸಿಸುವ ಗ್ರಾಮದ ಎಲ್ಲ ಹೆಣ್ಣು ಮಕ್ಕಳು ಕುಟುಂಬ ಸಮೇತರಾಗಿ ಬಂದು, ಐದು ದಿನ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಇತಿಹಾಸ ಪ್ರಸಿದ್ಧ ಹನುಮ ದೇವರ ದರುಶನ ಪಡೆಯಲು ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ನೆರೆ ಹೊರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದ ಅಸಂಖ್ಯ ಜನರು ಬಂದು ಹರಕೆ ಹೊತ್ತು ದೇವಸ್ಥಾನದಲ್ಲಿ ತೆಂಗಿನ ಕಾಯಿ ಕಟ್ಟುತ್ತಾರೆ.
ಹರಕೆ ಈಡೇರಿದ ನಂತರ ತೆಂಗಿನ ಕಾಯಿ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿ ಪ್ರತಿದಿನ ತ್ರಿಕಾಲ ಪೂಜೆ ನಡೆಯುತ್ತದೆ. ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ, ಮಧ್ಯಾಹ್ನ 12 ಗಂಟೆಗೆ ಹಾಗೂ ಸಾಯಂಕಾಲ 7 ಗಂಟೆ ಮೂರು ಬಾರಿ ಹನುಮನಿಗೆ ಪೂಜೆ ನಡೆಯುತ್ತಿದೆ. ವರ್ಷದಲ್ಲಿ ಎರಡು ಬಾರಿ ಜಾತ್ರೆ ಅಂದರೆ ದವನದ ಹುಣ್ಣಿಮೆ ಹಾಗೂ ದೀಪಾವಳಿ ಪಾಡ್ಯೆಯಂದು ವರ್ಷದಲ್ಲಿ ಎರಡು ಬಾರಿ ಅದ್ಧೂರಿಯಾಗಿ ಹನುಮ ಜಾತ್ರೆ ಮಾಡಲಾಗುತ್ತಿದೆ ಎಂದು ಪ್ರಧಾನ ಅರ್ಚಕರಾದ ಬಲಭೀಮ್ ಸುಧಾಕರ್ ಹೇಳುತ್ತಾರೆ. (ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)
ಧ್ವಜ ಆಕಾಶದಲ್ಲಿ ಹಾರಾಡುತ್ತಿದ್ದರೆ ಊರಲ್ಲಿ ಯಾವುದೆ ಸಮಸ್ಯೆ ಬರುವುದಿಲ್ಲ:
ನಾಲ್ಕು ದಿನಗಳ ಕಾಲ ನಡೆಯುವ ಈ ಜಾತ್ರೆ ಬಹಳಷ್ಟು ವಿಭನ್ನವಾಗಿ ಕೂಡಿರುತ್ತದೆ. ಜಾತ್ರೆಯ ಎರಡೆನೇ ದಿನ ದೇವಸ್ಥಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತದೆ. ಈ ಧ್ವಜದ ವಿಶೇಷವೆಂದರೇ ಈ ಧ್ವಜ ಆಕಾಶದಲ್ಲಿ ಹಾರಾಡುತ್ತಿದ್ದರೆ ಊರಲ್ಲಿ ಯಾವುದೆ ಸಮಸ್ಯೆಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ಈ ಧ್ವಜಾರೋಹಣ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿರುತ್ತಾರೆ. ಈ ದೇವಸ್ಥಾನದ ಕೂಗಳತೆ ದೂರದಲ್ಲಿರುವ ಸಂಜಿವಿನಿ ಪರ್ವತಕ್ಕೂ ಕೂಡಾ ಜನರು ಬಂದು ತಮ್ಮ ಇಷ್ಟಾರ್ಥಗಳನ್ನ ನೇರವೇರಿಸಿ ಅಂತಾ ಕಲ್ಲುಗಳ ಗೋಡೆ ಕಂಬಗಳನ್ನ ನಿರ್ಮಿಸುತ್ತಾರೆ.
ಪರ್ವತದ ಸುತ್ತಮುತ್ತ ಕಪ್ಪು ಮಣ್ಣು; ಆದ್ರೆ ಈ ಪರ್ವತದ ಮಣ್ಣು ಮಾತ್ರ ಕೆಂಪಾಗಿದೆ!
ಇಲ್ಲಿನ ಸಂಜಿವಿನಿ ಪರ್ವತಕ್ಕೆ ಬಂದು ಇಲ್ಲಿನ ಚಿಕ್ಕ ಚಿಕ್ಕ ಕಲ್ಲುಗಳಿಂದ ಕಂಬ ನಿರ್ಮಾಣ ಮಾಡಿದರೆ ತಮ್ಮ ಮನೆಗಳಲ್ಲಿ ಯಾವುದೇ ರೀತಿ ಕಷ್ಟಗಳು ಬರುವುದಿಲ್ಲ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಸಜೀವಿನಿ ಪರ್ವತ ಇರುವ ಈ ಸ್ಥಳ ರೋಗಗಳನ್ನ ವಾಸಿ ಮಾಡುವ, ಬೇಡಿದ್ದನ್ನ ಕರುಣಿಸುವ ಸ್ಥಳ ಅಂತಲೇ ಪ್ರಸಿದ್ಧಿ ಪಡೆದುಕೊಂಡಿದೆ. ಈ ಪರ್ವತದ ಸುತ್ತಮುತ್ತಲ ಜಾಗ ಕಪ್ಪು ಮಣ್ಣಿನಿಂದ ಆವೃತವಾಗಿದೆ. ಆದರೆ ಈ ಪರ್ವತದ ಮಣ್ಣು ಮಾತ್ರ ಕೆಂಪಾಗಿದೆ! ಅನ್ನುವುದು ವಿಶೇಷವಾಗಿದೆ.
ಹೀಗಾಗಿ ದೇವಸ್ಥಾನವು ಭಕ್ತರನ್ನ ಆಕರ್ಷಿಸುವ ಸ್ಥಳವಾಗಿದೆ. ಪ್ರತಿವರ್ಷ ದೀಪಾವಳಿಯ ಸಮಯದಲ್ಲಿ ನಡೆಯುವ ಜಾತ್ರೆಗೆ ದೇಶದ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ನೂರಾರು ವರ್ಷಗಳಿಂದಲೂ ಅಸಂಖ್ಯಾತ ಭಕ್ತರು ಹನುಮನನ್ನ ಪೂಜಿಸುತ್ತಿದ್ದಾರೆ. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗದಿಂದ ಭಕ್ತರು ಆಗಮಿಸುವ ಪುಣ್ಯ ಸ್ಥಳವಾಗಿದೆ ಎನ್ನುತ್ತಾರೆ ಇಲ್ಲಿ ಭಕ್ತರು.
ಏನೇ ಆದರೂ… ನೂರಾರು ವರ್ಷಗಳ ಇತಿಹಾಸ ಹೊಂದಿರುವ ಚಳಕಾಪುರ ಹನುಮಾನ್ ಸ್ವಾಮಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಇತಿಹಾಸ ಪ್ರಸಿದ್ದ, ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಇಂತಹ ಅಪರೂಪದ ದೇವಸ್ಥಾನದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ಯಾವುದೇ ರೀತಿಯ ಸೌಲಭ್ಯವನ್ನ ಮಾತ್ರ ಕಲ್ಪಿಸಿಲ್ಲ ಅನ್ನೋ ಕೊರಗು ಭಕ್ತರನ್ನ ಕಾಡುತ್ತಿರುತ್ತದೆ. ಯುಗಯುಗಾಂತರದಿಂದ ಹಲವಾರು ಪವಾಡಗಳು ನಡೆಯುತ್ತಿರುವ ಈ ಸ್ಥಳವನ್ನ ಅಭಿವೃದ್ದಿಪಡಿಸಲು ಜಿಲ್ಲಾಡಳಿತ ಮನಸ್ಸು ಮಾಡಲಿ ಅನ್ನೋದು ಇಲ್ಲಿನ ಜನರ ಒತ್ತಾಯವಾಗಿದೆ ಎನ್ನುತ್ತಾರೆ ಭಕ್ತರಾದ ವಿಶ್ವನಾಂಥ್ ಕಟ್ಟಿತುಗಾಂವ್.