ಬಡಜನರ ನೆಲದ ಮೇಲೆ ಬಿದ್ದ ಲ್ಯಾಂಡ್​ ಮಾಫಿಯಾದ ಕಣ್ಣು; ಜಾಗ ಖಾಲಿ ಮಾಡುವಂತೆ ಗೂಂಡಾಗಳನ್ನ ಬಿಟ್ಟು ಧಮ್ಕಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 17, 2024 | 6:19 PM

ಆ ಜಾಗದಲ್ಲಿ ಅವರೆಲ್ಲ ಐದಾರು ದಶಕದಿಂದ ವಾಸವಾಗಿದ್ದು, ಸಾಲ ಸೋಲಾ ಮಾಡಿ ಮನೆಕಟ್ಟಿಸಿಕೊಂಡು ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಇಲ್ಲಿ ವಾಸಿಸುವ ಜನರೆಲ್ಲರೂ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುವವರೇ ಹೆಚ್ಚು ಜನರು. ಹೀಗಾಗಿಯೋ ಏನು?, ಈ ಜಾಗದ ಮೇಲೆ ಲ್ಯಾಂಡ್ ಮಾಫಿಯಾದವರ ಕಣ್ಣು ಬಿದ್ದಿದ್ದು, ಲ್ಯಾಂಡ್ ಮಾಫಿಯಾದವರಿಂದ ಗ್ರಾಮಸ್ಥರಿಗೆ ಕಿರುಕುಳ ಜಾಸ್ತಿಯಾಗಿದೆ.

ಬಡಜನರ ನೆಲದ ಮೇಲೆ ಬಿದ್ದ ಲ್ಯಾಂಡ್​ ಮಾಫಿಯಾದ ಕಣ್ಣು; ಜಾಗ ಖಾಲಿ ಮಾಡುವಂತೆ ಗೂಂಡಾಗಳನ್ನ ಬಿಟ್ಟು ಧಮ್ಕಿ
ಬೀದರ್​ನಲ್ಲಿ ಬಡಜನರ ನೆಲದ ಮೇಲೆ ಬಿದ್ದ ಲ್ಯಾಂಡ್​ ಮಾಫಿಯಾದ ಕಣ್ಣು, ಜಾಗ ಖಾಲಿ ಮಾಡುವಂತೆ ಬೆದರಿಕೆ
Follow us on

ಬೀದರ್, ಜು.17: ಲ್ಯಾಂಡ್ ಮಾಫಿಯಾ ಅಟ್ಟಹಾಸಕ್ಕೆ ಬೀದರ್(Bidar) ತಾಲೂಕಿನ ಸಿಪ್ಪಲಗೇರಾ ಮತ್ತು ಕಬೀರವಾಡಿ ಗ್ರಾಮಸ್ಥರು ಶಾಕ್​ಗೆ ಒಳಗಾಗಿದ್ದಾರೆ. ಕಳೆದ ಅರವತ್ತು, ಎಪ್ಪತ್ತು ವರ್ಷದ ಹಿಂದೆ ಹಣ ಕೊಟ್ಟು ಜಾಗ ಖರೀದಿಸಿ, ಅಲ್ಲಿಯೇ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಜೊತೆಗೆ ಕೆಲವರಿಗೆ ಸರಕಾರದಿಂದಲೇ ಮನೆಗಳನ್ನ ನಿರ್ಮಾಣ ಮಾಡಿ ಕೊಡಲಾಗಿದ್ದು, ತಮ್ಮ ಮನೆಯ ತೆರಿಗೆ ಕೂಡ ಕಾಲಕಾಲಕ್ಕೆ ಕಟ್ಟುತ್ತಾ ಬಂದಿದ್ದಾರೆ. ಆದರೆ, ಈಗ ಆ ಗ್ರಾಮವನ್ನೇ ಬೇರೆಯವರೂ ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಜಾಗ ಖಾಲಿ ಮಾಡಿ, ಇಲ್ಲ ಹಣ ಕೊಡಿ ಎಂದು ರೌಡಿಗಳನ್ನ ಬಿಟ್ಟು ಹೆದರಿಸುತ್ತಿದ್ದಾರೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ನೂರಾರು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಹಾಗೂ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಬೀದರ್ ತಾಲೂಕಿನ ಸಿಪ್ಪಲಗೇರಾ ಮತ್ತು ಕಬೀರವಾಡಿ ಗ್ರಾಮದ ಸರ್ವೇ ನಂಬರ್ 7 ರಲ್ಲಿ 1954-55 ಖಾಸ್ತ ಪಹಣಿಯಂತೆ 99 ಎಕರೆ 4 ಗುಂಟೆ ಜಮೀನಿನಲ್ಲಿ 9 ಎಕರೆ 1 ಗುಂಟೆ ಜಮೀನು ತನ್ನ ಪಿತ್ರಾರ್ಜಿತ ಆಸ್ತಿಯನ್ನಾಗಿ ಬೀದರ್​ನ ನಿವಾಸಿಯೊಬ್ಬರು 2020 ರಲ್ಲಿ ಜಮೀನನ್ನ ತನ್ನ ಹೆಸರಿಗೆ ಮಾಡಿಕೊಂಡಿದ್ದು, ಈಗ ಮನೆ ಖಾಲಿ ಮಾಡಿ ಇಲ್ಲ, ಹಣ ಕೊಡಿ ಎಂದು ಹೆದರಿಸುತ್ತಿದ್ದಾರೆ. ಕಳೆದ ಅರವತ್ತು ಎಪ್ಪತ್ತು ವರ್ಷದಿಂದ ಈ ಎರಡು ಗ್ರಾಮದಲ್ಲಿ ಇನ್ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇಷ್ಟು ವರ್ಷಗಳ ಕಾಲ ಇಲ್ಲಿನ ವಾಸಿಗರಿಗೆ ಯಾವುದೇ ಸಮಸ್ಯೆಯಿರಿಲ್ಲಿಲ್ಲ. ಆದರೆ, ಈಗ ಕಳೆದ ಎರಡು ವರ್ಷದಿಂದ ಇಲ್ಲಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಬಂದು, ಇದು ನಮ್ಮ ಜಾಗ ಎಂದು ಹೇಳುತ್ತಿದ್ದು, ಈ ಬಡಾವಣೆಯ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಇದನ್ನೂ ಓದಿ:ಜಿಂಕೆಗಳ ಕಾಟಕ್ಕೆ ಬೀದರ್ ರೈತರು ಹೈರಾಣ; ಬಿತ್ತದ ಬೆಳೆ ಉಳಿಸಿಕೊಳ್ಳಲು ಪರದಾಟ

ಜೊತೆಗೆ ಇಲ್ಲಿ ಈಗ ಯಾವುದೇ ಹೊಸದಾಗಿ ಮನೆಕಟ್ಟುವುದಕ್ಕೂ ಕೂಡ ಅವಕಾಶವನ್ನ ಕಲ್ಪಿಸುತ್ತಿಲ್ಲ. ಈ ಬಗ್ಗೆ ಹತ್ತಾರು ಬಾರಿ ಪೊಲೀಸ್ ಅವರಿಗೆ ದೂರು ಕೊಟ್ಟರೂ ಏನು ಪ್ರಯೋಜನವಾಗುತ್ತಿಲ್ಲ. ಇದರಿಂದಾಗಿ ಇಲ್ಲಿನ ಜನರು ರೋಸಿಹೋಗಿದ್ದಾರೆ. ಇನ್ನು ಕೂಲಿ- ನಾಲಿ ಮಾಡಿಕೊಂಡು ಜೀವನ ಸಾಗಿಸುವ ಇವರಿಗೆ, ಯಾರು ಕೂಡ ಸಾಥ್ ಕೊಡುತ್ತಿಲ್ಲ. ಇದು ಬೀದರ್ ನಗರಕ್ಕೆ ಹೊಂದಿಕೊಂಡು ಜಿಲ್ಲಾಧಿಕಾರಿಗಳು ವಾಸಿಸುವ ಮನೆಯಿಂದ ಒಂದು ಕಿಲೋಮೀಟರ್ ಅಷ್ಟೇ ದೂರದಲ್ಲಿ ಈ ಎರಡು ಊರುಗಳು ಬರುತ್ತವೆ. ಇಲ್ಲಿ ಒಂದು ಗುಂಟೆ ಜಾಗಕ್ಕೆ 30 ರಿಂದ 40 ಕ್ಕೆ ಏರಿಕೆಯಾಗಿದೆ. ಹೀಗಾಗಿ ಲ್ಯಾಂಡ್ ಮಾಫಿಯಾದವರ ಕಣ್ಣು ಈ ಜಾಗದ ಮೇಲೆ ಬಿದ್ದು, ಇಲ್ಲಿ ವಾಸಿಸುವ ಬಡ ಜನರನ್ನ ಹೆದರಿಸಿ, ಓಡಿಸುವ ಪ್ಲಾನ್ ನಡೆದಿದೆ.

ಈ ಜಾಗದಲ್ಲಿ ವಾಸಿಸುವ ಜನರು ಸರಕಾರಕ್ಕೆ ಕಾಲ ಕಾಲಕ್ಕೆ ಕಟ್ಟಬೇಕಾದ ತೆರಿಗೆ ಕೂಡ ಕಟ್ಟುತ್ತಿದ್ದಾರೆ. ಆದರೂ ಕೂಡ ಇವರು ವಾಸಿಸುವ ಜಾಗವನ್ನ ಏಕಾಏಕಿ ಬೇರೆಯವರ ಹೆಸರಿಗೆ ವರ್ಗಾವಣೆಯಾಗಿದ್ದು ಹೇಗೆ ಎನ್ನುವುದು? ಇಲ್ಲಿನ ಜನರಿಗೆ ತಿಳಿಯುತ್ತಿಲ್ಲ ಎಂದು ಇಲ್ಲಿನ ವಾಸಿಗರು ಹೇಳುತ್ತಿದ್ದಾರೆ. ಹತ್ತಾರು ವರ್ಷದಿಂದ ವಾಸವಾಗಿದ್ದ ಜನರಿಗೆ ಈಗ ಭಯ ಶುರುವಾಗಿದೆ. ಅತೀ ಹೆಚ್ಚು ಜನರು ಇಲ್ಲಿ ದಲಿತ ಜನಾಂಗದವರೆ ವಾಸಿಸುತ್ತಿದ್ದು, ಇವರೆಲ್ಲರೂ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುವವರೆ ಆಗಿದ್ದಾರೆ. ಆದರೆ, ಈಗ ಏಕಾಏಕಿ ಬಂದು ನಮ್ಮ ಜಾಗ ಇದೆ, ಬಿಟ್ಟು ಬಿಡಿ ಎಂದು ಹೇಳುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಇಲ್ಲಿನ ಜನರು ಪೊಲೀಸರಿಗೆ ಮನವಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ