ಬೀದರ್: ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪು ಪಾರಂಪರಿಕ ಮದರಸಾಗೆ ನುಗ್ಗಿ, ಅದೇ ಕಟ್ಟಡದಲ್ಲಿ ಘೋಷಣೆಗಳನ್ನು ಕೂಗಿ, ಪೂಜೆ ನೆರವೇರಿಸಿದೆ ಎಂದು ದೂರಲಾಗಿದೆ. ಈ ಸಂಬಂಧ 9 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಮ್ ಸಂಘಟನೆಗಳು ಎಚ್ಚರಿಸಿವೆ. ಕ್ರಿಶ 1460ರಲ್ಲಿ ನಿರ್ಮಿಸಿರುವ ಮೊಹಮದ್ ಗವಾನ್ ಮದರಸಾ (Mahmud Gawan Madrasa) ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ (Archeological Survey of India) ಸಂರಕ್ಷಣೆಯಲ್ಲಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಕಟ್ಟಡಗಳ ಪಟ್ಟಿಯಲ್ಲಿಯೂ ಈ ಮದರಸಾದ ಹೆಸರು ಸ್ಥಾನ ಪಡೆದಿದೆ.
ಬುಧವಾರ ಸಂಜೆ ಗುಂಪು ಮದರಸಾದ ಗೇಟ್ಗಳ ಬೀಗ ಮುರಿದು ಒಳಗೆ ಪ್ರವೇಶಿಸಿತು. ಮದರಸಾ ಆವರಣದಲ್ಲಿ ‘ಜೈ ಶ್ರೀ ರಾಮ್’ ಮತ್ತು ‘ಹಿಂದೂ ಧರ್ಮ ಜೈ’ ಘೋಷಣೆಗಳನ್ನು ಮೊಳಗಿಸಿತು. ನಂತರ ಕಟ್ಟಡದ ಒಂದು ಮೂಲೆಗೆ ತೆರಳಿ ಪೂಜೆ ನೆರವೇರಿಸಿತು. ಘಟನಾ ಸ್ಥಳದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಕಟ್ಟಡದ ಒಳಗೆ ಪ್ರವೇಶಿಸಲೆಂದು ಮೆಟ್ಟಿಲ ಮೇಲೆ ದೊಡ್ಡ ಗುಂಪು ನಿಂತಿರುವುದು ಕಾಣಿಸುತ್ತದೆ.
ಘಟನೆಗೆ ಸಂಬಂಧಿಸಿದಂತೆ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಆದರೆ ಯಾರನ್ನೂ ಬಂಧಿಸಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ಪೊಲೀಸ್ ಅಧಿಕಾರಿಯ ಹೇಳಿಕೆಯನ್ನು ಎನ್ಡಿಟಿವಿ ವರದಿ ಮಾಡಿದೆ. ಬೀದರ್ನ ಹಲವು ಮುಸ್ಲಿಂ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿವೆ. ಮದರಸಾಗೆ ನುಗ್ಗಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿವೆ. ಆರೋಪಿಗಳನ್ನು ಬಂಧಿಸದಿದ್ದರೆ ಶುಕ್ರವಾರದ (ಅ 7) ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಸಿವೆ.
‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್’ (All India Majlis-e-Ittehadul Muslimeen – AIMIM) ನಾಯಕ ಅಸಾದುದ್ದೀನ್ ಓವೈಸಿ ಸಹ ಘಟನೆಯನ್ನು ಖಂಡಿಸಿದ್ದು, ಕರ್ನಾಟಕದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ಇಂಥ ಘಟನೆಗಳು ಮುಸ್ಲಿಮರ ಘನತೆಗೆ ಧಕ್ಕೆ ತರುತ್ತವೆ ಎಂದು ದೂರಿದ್ದಾರೆ.
Visuals from historic Mahmud Gawan masjid & madrasa, Bidar, #Karnataka (5th October). Extremists broke the gate lock & attempted to desecrate. @bidar_police @BSBommai how can you allow this to happen? BJP is promoting such activity only to demean Muslims pic.twitter.com/WDw1Gd1b93
— Asaduddin Owaisi (@asadowaisi) October 6, 2022
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಒಂದಾದ ನಂತರ ಒಂದರಂತೆ ಕೋಮು ಭಾವನೆಗಳನ್ನು ಕೆರಳಿಸುವ ಬೆಳವಣಿಗೆಗಳು ವರದಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಹಿಜಾಬ್ ವಿವಾದ, ಈದ್ಗಾ ಮೈದಾನದಲ್ಲಿ ಗಣಪತಿ ಹಬ್ಬ, ದೇಗುಲ ಪ್ರಾಂಗಣಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ, ಜಟ್ಕಾ ಕಟ್ ಮತ್ತು ಹಲಾಲ್ ಕಟ್ ವಿವಾದ ಸೇರಿದಂತೆ ಹಲವು ಬೆಳವಣಿಗೆಗಳು ಸರಣಿಯೋಪಾದಿಯಲ್ಲಿ ನಡೆದಿವೆ. ಬೀದರ್ನಲ್ಲಿ ನಡೆದಿರುವ ಘಟನೆಯಲ್ಲಿ ಆರೋಪಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸದಿದ್ದರೆ ಕರ್ನಾಟಕದ ಇತರೆಡೆಯೂ ಮುಂದಿನ ದಿನಗಳಲ್ಲಿ ಇಂಥದ್ದೇ ಪ್ರಕರಣಗಳು ಮರುಕಳಿಸಬಹುದು ಎಂಬ ಭೀತಿ ವ್ಯಕ್ತವಾಗಿದೆ.
Published On - 7:45 am, Fri, 7 October 22