ಬೀದರ್: ಪುರಾತತ್ವ ಇಲಾಖೆ ಸಂರಕ್ಷಣೆಯಲ್ಲಿರುವ ನಗರದ ಪಾರಂಪರಿಕ ಕಟ್ಟಡ ಮೊಹಮದ್ ಗವಾನ್ ಯೂನಿವರ್ಸಿಟಿ (ಮದರಸಾ) ಹಿಂದೂಗಳು ಪೂಜೆ ನಡೆಸಿ, ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯ ಪೊಲೀಸರು 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಮುನ್ನಾ, ನರೇಶ್, ಯಲ್ಲಾಲಿಂಗ, ಪ್ರಕಾಶ್ ಬಂಧಿತರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮಹಮ್ಮದ್ ಗವಾನ್ ಯುನಿವರ್ಸಿಟಿ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: ಬೀದರ್ನಲ್ಲಿ ಪಾರಂಪರಿಕ ಮದರಸಾಗೆ ನುಗ್ಗಿ ದುರ್ಗಾ ಪೂಜೆ ನೆರವೇರಿಸಿದ ಗುಂಪು
ದಸರಾ ಹಬ್ಬದ ಹಿನ್ನೆಲೆಯಲ್ಲಿ ಭವಾನಿ ಮಾತೆಯ ಪಲ್ಲಕಿ ಮೆರವಣಿಗೆ ನಡೆಸುತ್ತಿದ್ದ ಗುಂಪು ಏಕಾಏಕಿ ಮೊಹಮದ್ ಗವಾನ್ ಯುನಿವರ್ಸಿಟಿಗೆ ತೆರಳಿ ಪೂಜೆ ನಡೆಸಿತು. ಪೂಜೆ ವೇಳೆ ಭಾರತ ಮಾತಾಕಿ ಜೈ, ಹಿಂದೂ ಧರ್ಮಕ್ಕಿ ಜೈ ಎಂದು ಕೂಗಿದ ಹಿಂದೂ ಯುವಕರು ಘೋಷಣೆ ಕೂಗಿದ್ದರು. ಅನುಮತಿ ಇಲ್ಲದೆ ಮದರಸಾಕ್ಕೆ ನುಗ್ಗಿದ್ದನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಯಾರನ್ನೂ ಬಂಧಿಸದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗೆ ಮುಂದಾಗಿದ್ದರು. ನಾಲ್ವರು ಆರೋಪಿಗಳನ್ನು ಬಂಧಿಸಿದ ನಂತರ ಪ್ರತಿಭಟನೆ ನಿರ್ಧಾರ ಹಿಂಪಡೆದರು.
ದಸರಾ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 9 ಗಂಟೆ ವೇಳೆಯಲ್ಲಿ ಐತಿಹಾಸಿಕ ಬೀದರ್ ಕೋಟೆಯ ಒಳಗಿರುವ ಒಳಕೋಟೆ ಗ್ರಾಮಸ್ಥರು ಭವಾನಿ ದೇವಿಯ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ರಾತ್ರಿ 9 ಗಂಟೆ ಸುಮಾರಿಗೆ ಮದರಸಾ ಪ್ರವೇಶಿಸಿ ಪೂಜೆ ಮಾಡಿದ್ದರು. ಈ ವಿಷಯ ಮುಸ್ಲಿಂ ಮುಖಂಡರ ಗಮನಕ್ಕೆ ಬಂದ ನಂತರ ನಗರದ ಎಲ್ಲ ಮುಸ್ಲಿಮ್ ಪ್ರಮುಖರು ಮದರಸಾದಲ್ಲಿ ಸಭೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ನೀಡಲು ತೀರ್ಮಾನಿಸಿದರು. ಅದರಂತೆ ಮೊಹಮದ್ ಷಫಿಯುದ್ದೀನ್ ಎನ್ನುವವರು 9 ಜನರ ವಿರುದ್ಧ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು.
ಘಟನೆ ಕುರಿತು ಹೈದರಾಬಾದ್ನ ರಾಜಕೀಯ ನಾಯಕ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ ನಂತರ ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ದೂರು ಆಧರಿಸಿ, ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರು ನಾಲ್ವರನ್ನು ಬಂಧಿಸಿದರು. ದಸರಾ ಹಬ್ಬದ ಪ್ರಯುಕ್ತ ಕಾಳಿಕಾಮಾತೆ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದ ಸ್ಥಳೀಯರು ಮಸೀದಿಯಲ್ಲಿ ಕಾಯಿ ಒಡೆದು, ಕುಂಕುಮ ಹಚ್ಚಿದ್ದರು. ಪೊಲೀಸರು ಸಕಾಲದಲ್ಲಿ ಮಧ್ಯಪ್ರವೇಶಿಸಿ ಕ್ರಮ ಜರುಗಿಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.
Published On - 12:51 pm, Fri, 7 October 22