5 Guarantees: ಜೂನ್ 1ರಿಂದಲೇ 5 ಗ್ಯಾರಂಟಿ ಜಾರಿ ಬಹುತೇಕ ಖಚಿತ: ರೂಲ್ಸ್​ ಏನೇನು? ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ?

|

Updated on: May 30, 2023 | 7:02 AM

ಚುಕ್ಕಾಣಿ ಹಿಡಿದಿದ್ದಾಯ್ತು. ಸಂಪೂರ್ಣ ಸಂಪುಟವೂ ಅಸ್ತಿತ್ವಕ್ಕೆ ಬಂದಿದ್ದಾಯ್ತು. ಸಚಿವರಿಗೆ ಖಾತೆಗಳನ್ನ ಹಂಚಿದ್ದೂ ಆಯ್ತು.. ಈಗ ಗ್ಯಾರಂಟಿ ಸರ್ಕಸ್ ನಡೆಯುತ್ತಿದೆ. ಗ್ಯಾರಂಟಿ ಜಾರಿ ಯಾವಾಗ ಎಂದು ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಕರೆಂಟ್ ಬಿಲ್‌ ಕಟ್ಟಲ್ಲ ಅಂತಾ ಜನ ಕ್ಯಾತೆ ತೆಗೆಯುತ್ತಿದ್ದಾರೆ. ಬಸ್‌ ಚಾರ್ಜ್‌ ಕೊಡಲ್ಲ ಎಂದು ಮಹಿಳೆಯರು ಗಲಾಟೆ ಮಾಡುತ್ತಿದ್ದಾರೆ. ಇದರ ನಡುವೆ ಗ್ಯಾರಂಟಿ ಅನುಷ್ಠಾನಕ್ಕೆ ಸರ್ಕಾರ ಸಭೆಗಳ ಮೇಲೆ ಸಭೆ ನಡೆಸುತ್ತಿದೆ.

5 Guarantees: ಜೂನ್ 1ರಿಂದಲೇ 5 ಗ್ಯಾರಂಟಿ ಜಾರಿ ಬಹುತೇಕ ಖಚಿತ: ರೂಲ್ಸ್​ ಏನೇನು? ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ?
5 ‘ಗ್ಯಾರಂಟಿ’
Follow us on

ಬೆಂಗಳೂರು: ಕಾಂಗ್ರೆಸ್ ಸರ್ಕಾರದಕ್ಕೆ 5 ಗ್ಯಾರಂಟಿ (5 guarantees)ಯೋಜನೆಗಳ ಜಾರಿಯೇ ದೊಡ್ಡ ಸವಾಲಾಗಿದೆ. ಆದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇಬೇಕಿದೆ. ಹೀಗಾಗಿ ಐದೂ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಚಾಲೆಂಜ್ ಆಗಿ ತೆಗೆದುಕೊಂಡಿದೆ. ಈಗಾಗಲೇ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಎಲ್ಲಾ ಸಾಧಕ ಬಾಧಕಗಳನ್ನ ಚರ್ಚೆ ಮಾಡಿದ್ದಾರೆ. ನಾಳೆ ಸಚಿವರ ಜೊತೆ ಸಮಾಲೋಚನೆ ನಡೆಯಲಿದ್ದು, ನಾಡಿದ್ದು ಅಂದ್ರೆ, ಜೂನ್ 1ರಿಂದಲೇ 5 ಗ್ಯಾರಂಟಿ ಜಾರಿ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಸರಳವಾಗಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಮನೆಯೊಡತಿ ಯಾರು ಎನ್ನುವುದನ್ನು ಗುರುತಿಸಲು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮನೆಯೊಡತಿ ಅತ್ತೆನೋ, ಸೊಸೆನೋ ಎಂದು ವಿಪಕ್ಷ ಬಿಜೆಪಿ ಪ್ರಶ್ನಿಸಿದೆ. ಹೀಗಾಗಿ ಮನೆಯೊಡತಿಯನ್ನೇ ಫಲಾನುಭವಿ ಎಂದು ಘೋಷಣೆ ಮಾಡುವ ಸಾಧ್ಯತೆ ಇದೆ.

ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

ರಾಜ್ಯದ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ. ವಿಪಕ್ಷಗಳ ಬಾಯಿ ಮುಚ್ಚಿಸಬೇಕಿದೆ. ಲೋಕಸಭೆ ಚುನಾವಣೆಯೂ ಹತ್ತಿರವಾಗುತ್ತಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೆ ಒದ್ದಾಡುತ್ತಿದೆ. ನಿನ್ನೆಯಷ್ಟೇ (ಮೇ 29) ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಶಕ್ತಿಭವನದಲ್ಲಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ರು. ಸಾರಿಗೆ, ಆಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೌಶಲ್ಯಾಭಿವೃದ್ಧಿ, ಇಂಧನ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ರು. ಯಾವ ಗ್ಯಾರಂಟಿ ಯೋಜನೆ ಜಾರಿಗೆ ಎಷ್ಟು ಹಣ ಖರ್ಚಾಗುತ್ತೆ..? ಫಲಾನುಭವಿಗಳ ಸಂಖ್ಯೆ ಎಷ್ಟು..? ಸರ್ಕಾರಕ್ಕೆ ಎಷ್ಟು ಹೊರೆಯಾಗುತ್ತೆ ಅನ್ನೋ ಮಾಹಿತಿಯನ್ನ ಸಂಗ್ರಹಿಸಿದ್ರು.

5 ಗ್ಯಾರಂಟಿ ಜಾರಿಗೆ 50 ಸಾವಿರ ಕೋಟಿ ರೂ.!

ಕಾಂಗ್ರೆಸ್ ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆಗಳ ಜಾರಿ ದೊಡ್ಡ ಸವಾಲಾಗಿದೆ. 5 ಗ್ಯಾರಂಟಿಗಳನ್ನ ಜಾರಿ ಮಾಡ್ಬೇಕು ಅಂದ್ರೆ ಸರ್ಕಾರದ ಬೊಕ್ಕಸದಿಂದ ವಾರ್ಷಿಕವಾಗಿ 50 ಸಾವಿರ ಕೋಟಿ ರೂ. ಖರ್ಚು ಮಾಡಬೇಕಾಗುತ್ತೆ. ಈ ಸಂಬಂಧ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ರಿಂದ ಸಿಎಂ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಗ್ಯಾರಂಟಿಗಳನ್ನ ಹೇಗೆ ಜಾರಿ ಮಾಡಬಹುದು ಎಂಬ ಬಗ್ಗೆಯೂ ಚರ್ಚಿಸಿದ್ದಾರೆ.

ಜೂನ್ 1ರಿಂದ 5 ‘ಗ್ಯಾರಂಟಿ’ ಫಿಕ್ಸಾ?

ರಾಜ್ಯಾದ್ಯಂತ ಜೂನ್ 1ರಿಂದಲೇ 5 ಗ್ಯಾರಂಟಿ ಜಾರಿ ಪಕ್ಕಾ ಅಂತ ಹೇಳಲಾಗ್ತಿದೆ. ಈಗಾಗಲೇ ಅಧಿಕಾರಿಗಳು ಯಾವ್ಯಾವ ಯೋಜನೆಗೆ ಎಷ್ಟು ಹಣ ಖರ್ಚಾಗುತ್ತೆ ಅಂತ ಎಳೆಎಳೆಯಾಗಿ ಮಾಹಿತಿ ಕೊಟ್ಟಿದ್ದಾರೆ. ಜೂನ್‌ 1 ರಂದು ಸಿದ್ದರಾಮಯ್ಯ ಸರ್ಕಾರದ ಸಂಪುಟ ಸಭೆ ನಡೆಯಲಿದೆ. ಅಧಿಕಾರಿಗಳು ಕೊಟ್ಟಿರುವ ಎಲ್ಲಾ ಮಾಹಿತಿ, ಅಂಕಿ-ಅಂಶಗಳನ್ನ ಸಿಎಂ ಸಿದ್ದರಾಮಯ್ಯ ಸಂಪುಟದ ಮುಂದಿಡಲಿದ್ದಾರೆ. ಅದೇ ಸಭೆಯಲ್ಲಿ ಗ್ಯಾರಂಟಿಗಳಿಗೆ ಅಂತಿಮ ಮುದ್ರೆ ಹಾಕುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

BPL ಕುಟುಂಬಕ್ಕೆ ಗೃಹಲಕ್ಷ್ಮೀ ಗ್ಯಾರಂಟಿ?

ಇನ್ನು ಮನೆಯೊಡತಿಯರ ಬಗ್ಗೆ ಮಾಹಿತಿ ಸಮರ್ಪಕವಾಗಿಲ್ಲ. ಮನೆಯೊಡತಿಯರ ಬಗ್ಗೆ ಮಾಹಿತಿ ಸಂಗ್ರಹಿಸೋದೇ ಕಾಂಗ್ರೆಸ್‌ಗೆ ಸವಾಲಾಗಿದೆ. ಹೀಗಾಗಿ ಷರತ್ತುಗಳೊಂದಿಗೆ BPL ಕುಟುಂಬದವರಿಗೆ ಗೃಹಲಕ್ಷ್ಮೀ ಗ್ಯಾರಂಟಿ ನೀಡುವ ಸಾಧ್ಯತೆ ಇದೆ. ಆದ್ರೆ, ರಾಜ್ಯದ ಪ್ರತೀ ಮನೆಯೊಡತಿಗೆ 2000 ನೀಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್, ಸದ್ಯ ಮಾತು ಉಳಿಸಿಕೊಳ್ಳಬೇಕಾದ ಒತ್ತಡದಲ್ಲಂತೂ ಇದೆ.

ಯುವನಿಧಿ ಜಾರಿಗೆ ಸರ್ಕಸ್

ಯುವನಿಧಿ ಜಾರಿಗೆ ಇಲಾಖೆ ಮತ್ತೆ ಮಾಹಿತಿ ಸಮಸ್ಯೆ ಇದ್ದು, ಪದವೀಧರರ ನಿರೋದ್ಯೋಗ ನಿವಾರಣೆ ಮಾಡಲು ಕಾಂಗ್ರೆಸ್‌ ನಾಯಕರಿಗೆ ಕಠಿಣ ಹಾದಿ ಎದುರಾಗಿದೆ. ಕಾರ್ಮಿಕ ಇಲಾಖೆ ಮೂಲಕ ಮಾಹಿತಿಗಳನ್ನ ಸಂಗ್ರಹಿಸಬೇಕೋ, ಉನ್ನತ ಶಿಕ್ಷಣ ಇಲಾಖೆ ಮೂಲಕ ಮಾಹಿತಿ ಪಡೀಬೇಕೋ ಎನ್ನುವ ಗೊಂದಲವಿದ್ದು, ಹಾಲಿ ಪದವೀಧರ ನಿರುದ್ಯೋಗಿಗಳನ್ನ ಗುರುತಿಸುವುದು ಕಷ್ಟವಾಗಿದೆ. ಹೀಗಾಗಿ ಕೆಲ ಮಾನದಂಡ ನಿಗದಿಪಡಿಸಿ ಸರ್ಕಾರದಿಂದ ಅರ್ಜಿ ಆಹ್ವಾನ ಸಾಧ್ಯತೆ ಇದ್ದು, ನಿಗದಿತ ಇಲಾಖೆ ಮೂಲಕ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವುದು ದೊಡ್ಡ ಸವಾಲಾಗಿದೆ.

10 ಕೆಜಿ ಉಚಿತ ಅಕ್ಕಿ.. ಅಷ್ಟು ಸುಲಭವಲ್ಲ

ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ 10 ಕೆಜಿ ಉಚಿತ ಅಕ್ಕಿಯಂತೂ ಕೊಟ್ಟೇ ಕೊಡುತ್ತೇವೆ ಅಂತಿದ್ದಾರೆ. ಆದ್ರೆ, ಅನ್ನಭಾಗ್ಯ ಯೋಜನೆ ಜಾರಿಗೂ ನೂರೆಂಟು ಸವಾಲುಗಳಿವೆ. ಸದ್ಯ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನ ಉಚಿತವಾಗಿ ಕೊಡುತ್ತಿದೆ. ಈಗ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನ ಖರೀದಿ ಮಾಡಬೇಕಿರುವುದು ಸವಾಲಾಗಿದೆ.

ಫ್ರೀ ಅಕ್ಕಿ.. 1400 ಕೋಟಿ ರೂ. ಹೊರೆ

ಪ್ರತಿಯೊಬ್ಬರಿಗೂ ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದ್ರೆ ಅಕ್ಕಿ ಖರೀದಿಗೆ ಅಂದಾಜು 1 ಸಾವಿರದ 400 ಕೋಟಿ ರೂಪಾಯಿ ವ್ಯಯ ಮಾಡಬೇಕಾಗುತ್ತೆ. ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿಗೆ ಏನಾದ್ರೂ ಕಂಡಿಷನ್ ಹಾಕಿದ್ರೆ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಮಸ್ಯೆ ಮತ್ತಷ್ಟು ಜಟಿಲವಾಗಬಹುದು. ಅಲ್ಲದೇ, ಕೇಂದ್ರ ಸರ್ಕಾರದ 5 ಕೆಜಿ ಹೊರತಾಗಿ 10 ಕೆಜಿ ನೀಡುವಂತೆ ವಿಪಕ್ಷ ಪಟ್ಟು ಹಿಡಿದಿದ್ದು, ಬಿಪಿಎಲ್ ಕುಟುಂಬಗಳ ಮಾಹಿತಿ ಅಧರಿಸಿ ಅಕ್ಕಿ ನೀಡಲು ಕಾಂಗ್ರೆಸ್ ಲೆಕ್ಕಾಚಾರ ಮಾಡುತ್ತಿದೆ.

ಮಹಿಳೆಯರಿಗೆ ಉಚಿತ ಬಸ್ ಪಾಸ್ ಕಸರತ್ತು

ಉಚಿತ ಬಸ್ ಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣದ ಮಿತಿಯನ್ನು ಮಾನದಂಡ ಹಾಕಲು ಸರ್ಕಾರ ಚಿಂತನೆ ನಡೆಸ್ತಿದೆ. ಈ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಅಧಿಕಾರಿಗಳಿಂದ ಸಿಎಂ ಮಾಹಿತಿ ಸಂಗ್ರಹಿಸಿದ್ದಾರೆ. ಉಚಿತ ಬಸ್ ಪಾಸ್ ಫಲಾನುಭವಿಗಳ ಪಟ್ಟಿ ಕೊಡುವಂತೆ ಸೂಚಿಸಿದ್ದಾರೆ. ಇದೀಗ ಸಾಧಕ ಬಾಧಕಗಳ ಚರ್ಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿಗಮಗಳ ಸಭೆ ಕರೆದಿದ್ದಾರೆ.

ಇವತ್ತು ಸಾರಿಗೆ ನಿಗಮಗಳ ಸಭೆ

ಇವತ್ತು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಶಾಂತಿನಗರದಲ್ಲಿರುವ KSRTC ಕಚೇರಿಯಲ್ಲಿ ಸಭೆ ನಡೆಯಲಿದೆ. ಕರ್ನಾಟಕ ಸಾರಿಗೆ, ವಾಯುವ್ಯ, ಈಶಾನ್ಯ, ನೈಋತ್ಯ ಸಾರಿಗೆ ಹಾಗೂ BMTC ಸೇರಿ ರಾಜ್ಯದ ನಾಲ್ಕೂ ನಿಗಮಗಳ ಎಂಡಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ನಿಗಮದಿಂದ ಯೋಜನೆ ಇಲ್ಲ.. ಸರ್ಕಾರದ್ದೇ ಹಣ!

ಫ್ರೀ ಬಸ್ ಪಾಸ್ ಯೋಜನೆ ಸರ್ಕಾರದ್ದೇ ಆಗಿರುವ ಕಾರಣ ಸರ್ಕಾರವೇ ನಾಲ್ಕೂ ನಿಗಮಗಳಿಗೆ ಉಚಿತ ಬಸ್ ಪಾಸ್​ನ ಸಬ್ಸಿಡಿ ಕೊಡಬೇಕಿದೆ. ನಿಗಮಗಳ ಆದಾಯದಲ್ಲಿ ಬಸ್ ಪಾಸ್ ಕೊಡಲು ಸಾಧ್ಯವಿಲ್ಲ ಅಂತ ಈಗಾಗಲೇ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. 4 ನಿಗಮಗಳ ಲಾಭ, ನಷ್ಟ ಗಮನಿಸಿ ಯೋಜನೆಗೆ ಅಷ್ಟೂ ಹಣವನ್ನ ಸರ್ಕಾರವೇ ಕೊಡಬೇಕಾ? ಫ್ರೀ ಪಾಸ್ ಯಾವ ಮಾದರಿಯಲ್ಲಿ ಇರಬೇಕು? ತಿಂಗಳ ಪಾಸಾ? ವಾರ್ಷಿಕ ಪಾಸಾ? ಎಂಬ ಚರ್ಚೆಯೂ ನಡೆಯಲಿದೆ.

ಒಟ್ಟಿನಲ್ಲಿ ಜೂನ್ 1ರಿಂದಲೇ 5 ಗ್ಯಾರಂಟಿ ಜಾರಿ ಬಹುತೇಕ ಖಚಿತ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಏನೆಲ್ಲ ಷರತ್ತುಗಳನ್ನು ವಿಧಿಸಲಾಗುತ್ತದೆ ಎಂದು ಕಾದುನೋಡಬೇಕಿದೆ.