ಟಿ.ನರಸೀಪುರ: ಅಪಘಾತದಲ್ಲಿ ಮೃತಪಟ್ಟ 10 ಜನರ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯದಿಂದ ತಲಾ 2 ಲಕ್ಷ ರೂ. ಪರಿಹಾರ
ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 10 ಜನರ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯ ಪರಿಹಾರ ಘೋಷಣೆ ಮಾಡಿದೆ.
ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ಮೃತಪಟ್ಟ 10 ಜನರ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯ (PM Office) ಪರಿಹಾರ ಘೋಷಣೆ ಮಾಡಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ (PMNRF) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಟ್ವೀಟ್ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದ ಪ್ರಧಾನಿ ನರೇಂದ್ರ ಮೋದಿ (Narendra Modi) “ದುರ್ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿರುವುದು ಅತ್ಯಂತ ದುರದೃಷ್ಟಕರ. ಅಗಲಿದ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
The Prime Minister has announced an ex-gratia of Rs. 2 lakh from PMNRF for the next of kin of those who have lost their lives in the tragedies in Mysuru and Dhanbad. The injured would be given Rs. 50,000.
— PMO India (@PMOIndia) May 29, 2023
ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ
ಅಪಘಾತದಲ್ಲಿ ಮೃತಪಟ್ಟ 10 ಜನರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಿಸಿದ್ದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಜನರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದರು. ಟ್ವೀಟ್ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ, ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದರು.
ಟಿ ನರಸೀಪುರ ಬಳಿ ಅಪಘಾತ 10 ಮಂದಿ ದುರ್ಮರಣ
ನಿನ್ನೆ (ಮೇ.29) ರಂದು ಕುರುಬೂರು ಗ್ರಾಮದ ಪಿಂಜರ ಪೋಲ್ ಎಂಬಲ್ಲಿ ಕೊಳ್ಳೇಗಾಲ-ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದರು. ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಮಗು ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: T Narasipura Accident: ಟಿ ನರಸೀಪುರ ಅಪಘಾತದ ಭೀಕರ ವಿಡಿಯೋ
ಅಪಘಾತದಲ್ಲಿ ಮೃತಪಟ್ಟವರು ಪೈಕಿ ಕೆಲವರು ಬಳ್ಳಾರಿ ಸಂಗನಕಲ್ ನಿವಾಸಿಗಳಾಗಿದ್ದರು. ಇವರು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಸಂಗನಕಲ್ ನಿಂದ ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಮೃತರಲ್ಲಿ ನಾಲ್ವರು ಪುರುಷರು, ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳಾಗಿದ್ದರು. 16 ಮಂದಿ ಗಾಯಾಳುಗಳಿಗೆ ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಮೃತಪಟ್ಟವರು ಯಾರೆಲ್ಲ?
ಬಿಳ್ಯಾಳ ಮಂಜುನಾಥ್ (35), ಇವರ ಪತ್ನಿ ಪೂರ್ಣಿಮಾ (30), ಮಗ ಪವನ (10), ಕಾರ್ತಿಕ (08), ಸಂದೀಪ (24), ತಾಯಿ ಸುಜಾತ ( 40), ತಂದೆ ಕೊಟ್ರೇಶ್ (45), ಪತ್ನಿ ಗಾಯತ್ರಿ (35), ಮಗಳು ಶ್ರಾವ್ಯ ( 03) ಹಾಗೂ ಇನೋವಾ ಚಾಲಕ ಮೈಸೂರಿನ ಆದಿತ್ಯ (26) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದೆ. ಮೂವರು ಗಾಯಾಳುಗಳನ್ನು ಬಳ್ಳಾರಿ ಮೂಲದ ಜನಾರ್ದನ್ (45), ಪುನೀತ್ (4), ಶಶಿಕುಮಾರ್(24) ಎಂದು ಗುರುತಿಸಲಾಗಿದ್ದು, ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರಗೆ ರವಾನಿಸಲು ಸಿದ್ಧತೆ ಮಾಡಲಾಗುತ್ತಿದೆ. ಸದ್ಯ ಚಾಮರಾಜನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದರು. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 am, Tue, 30 May 23