ಪ್ರವೀಣ್ ಹತ್ಯೆ ಪ್ರಕರಣ: ಸರ್ಕಾರದ ಒತ್ತಡಕ್ಕೆ ಮಣಿದು ಇಬ್ಬರನ್ನು ಬಂಧಿಸಿದ ಪೊಲೀಸರು? ಪೊಲೀಸರ ನಡೆ ಮೇಲೆ‌ ಬೆಟ್ಟದಷ್ಟು ಅನುಮಾನ

| Updated By: Rakesh Nayak Manchi

Updated on: Jul 30, 2022 | 8:57 AM

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬೀಸುವ ದೊಣ್ಣೆ ಏಟಿನಿಂದ ತಪ್ಪಿಸಲು ಸರ್ಕಾರ ಇಬ್ಬರನ್ನು ಬಂಧಿಸಿ ಸುಮ್ಮನಾಯ್ತೇ? ಪ್ರಕರಣದ ತನಿಖೆ ನಡೆಸಿದ ಪೊಲೀಸರ ನಡೆ ಇದೀಗ ಬೆಟ್ಟದಷ್ಟು ಅನುಮಾನವನ್ನು ಹುಟ್ಟುಹಾಕಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರವೀಣ್ ಹತ್ಯೆ ಪ್ರಕರಣ: ಸರ್ಕಾರದ ಒತ್ತಡಕ್ಕೆ ಮಣಿದು ಇಬ್ಬರನ್ನು ಬಂಧಿಸಿದ ಪೊಲೀಸರು? ಪೊಲೀಸರ ನಡೆ ಮೇಲೆ‌ ಬೆಟ್ಟದಷ್ಟು ಅನುಮಾನ
ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೊಲೆಯಾದ ಪ್ರವೀಣ್ ನೆಟ್ಟಾರು
Follow us on

ದಕ್ಷಿಣ ಕನ್ನಡ: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟೂರು ಅವರ ಭೀಕರ ಹತ್ಯೆ ಪ್ರಕರಣ ಸಂಬಂಧ ಪೊಲೀಸರ ನಡೆಗಳು ಬೆಟ್ಟದಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೊಲೆ ನಡೆದಂದಿನಿಂದಲೇ ಕಾರ್ಯಕರ್ತರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರಾರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಹತ್ಯೆ ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದರು. ಸಂಜೆಯಾಗುತ್ತಲೇ ವಶದಲ್ಲಿದ್ದ ಶಂಕಿತರ ಪೈಕಿ ಇಬ್ಬರನ್ನು ಬಂಧಿಸಿದರು. ಈ ನಡೆಯೇ ಇದೀಗ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ, ಸಣ್ಣ ಪುಟ್ಟ ಪ್ರಕರಣದಲ್ಲೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಪೊಲೀಸರು, ರಾಷ್ಟ್ರಮಟ್ಟದಲ್ಲಿ ಚರ್ಚೆಯಾದ ಇಂತಹ ದೊಡ್ಡ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ಪಡೆಯದೆ ಒಂದೇ ದಿನಕ್ಕೆ ಜೈಲಿಗಟ್ಟಿದ್ದು ಹೇಗೆ ಎಂಬ ಅನುಮಾನ ಹುಟ್ಟುಕೊಂಡಿದೆ.

ಪ್ರವೀಣ್ ಹತ್ಯೆಯಾದ ನಂತರದ ಬೆಳವಣಿಗೆಗಳು ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರ ಮುಜುಗರಕ್ಕೆ ತಳ್ಳಿತ್ತು. ಸರ್ಕಾರದ ವಿರುದ್ಧ ಕಾರ್ಯಕರ್ತರು ಕೆರಳಿಕೆಂಡವಾಗಿದ್ದಲ್ಲದೆ ಪಕ್ಷದ ರಾಜ್ಯಾಧ್ಯಕ್ಷರ ಕಾರನ್ನೇ ಅಲುಗಾಡಿಸಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಸುನಿಲ್ ಕುಮಾರ್, ಅಂಗಾರ ಅವರನ್ನು ಮುತ್ತಿಗೆ ಹಾಕಿ ಘೇರಾವು ಹಾಕಿದರು. ಸರ್ಕಾರದ ವಿರುದ್ಧ ಆಕ್ರೋಶ ಬುಗಿಲೆದ್ದು ಪರಿಸ್ಥಿತಿ ಕೈಮೀರುವ ಪರಿಸ್ಥಿತಿಗೆ ಹೋಗುತ್ತಿದ್ದಂತೆ ಲಾಠಿ ಚಾರ್ಜ್​ಕೂಡ ನಡೆಯಿತು. ತನ್ನದೇ ಕಾರ್ಯಕರ್ತರ ಮೇಲೆ ಲಾಠಿ ಬೀಸಿರುವುದು ಬಿಜೆಪಿ ಪಕ್ಷಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

ಹರ್ಷ ಕೊಲೆ ಪ್ರಕರಣದ ಆರೋಪಿಗಳಿಗೂ ಸರಿಯಾದ ಶಿಕ್ಷೆ ಆಗಿಲ್ಲ, ಕಠಿಣ ಕ್ರಮ ಎಂಬ ಸರ್ಕಾರದ ಭರವಸೆ ಕಾರ್ಯಕರ್ತರಿಂದಲೇ ಟೀಕೆಗೆ ಕಾರಣವಾಯ್ತು. ಈ ಎಲ್ಲದರ ನಡುವೆ ಪ್ರವೀಣ್ ಹಂತಕರನ್ನು ಶೀಘ್ರವಾಗಿ ಬಂಧಿಸಬೇಕು, ಎನ್​ಕೌಂಟರ್ ಮಾಡಬೇಕು ಎಂಬ ಆಗ್ರಹಗಳು ಜೋರಾಗಿಯೇ ಕೇಳಿಬರುತ್ತಿವೆ. ಸಾವಿರಾರು ಕಾರ್ಯಕರ್ತರು, ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ರೀತಿಯ ಕಾರ್ಯಕರ್ತರ ಒತ್ತಡಕ್ಕೆ, ವಿಪಕ್ಷಗಳ ಟೀಕೆಗೆ ಗುರಿಯಾದ ಹಾಗೂ ಪ್ರಕರಣದಿಂದ ಮುಜುಗರಕ್ಕೀಡಾದ ರಾಜ್ಯ ಸರ್ಕಾರ ಬೀಸುವ ದೊಣ್ಣೆಯ ಏಟಿನಿಂದ ತಪ್ಪಿಸಿಕೊಳ್ಳಲು ಇಬ್ಬರನ್ನು ಬಂಧಿಸಿ ಸುಮ್ಮನಾಗಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.

ಪೊಲೀಸರ ನಡೆ ಅನುಮಾಕ್ಕೆ ಎಡೆ ಮಾಡಿಕೊಟ್ಟಿದ್ದು ಹೇಗೆ?

ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಪೊಲೀಸರ ನಡೆ ಕೂಡ ಅನುಮಾನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳ್ಳಾರೆಗೆ ಭೇಟಿ ಕೊಡುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಇಬ್ಬರ ಬಂಧನದ ವಿಚಾರವನ್ನು ಹೊರಹಾಕಿದರು. ಕೊಲೆ ಪ್ರಕರಣದಲ್ಲಿ ಅವರ ಪಾತ್ರ ಏನು ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಇವರೇ ಆರೋಪಿಗಳಾ ಎಂಬುದನ್ನು ಕೂಡ ತಿಳಿಸಿಲ್ಲ. ಮೊನ್ನೆಯಷ್ಟೇ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದರು. ಮಧ್ಯಾಹ್ನದ ವೇಳೆಗೆ ತನಿಖೆ ಪ್ರಾಥಮಿಕ ಹಂತದಲ್ಲಿ ಇದೆ ಎಂದು ಹೇಳಿದ್ದ ಖಾಕಿ, ಕಸ್ಟಡಿಗೂ ಪಡೆಯದೆ ಸಂಜೆಯಾಗುತ್ತಲೇ ಇವರೇ ಆರೋಪಿಗಳು ಎಂಬ ನಿರ್ಧಾರಕ್ಕೆ ಬಂದು ಬಿಟ್ಟರು.

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣದಲ್ಲಿ ಆರೋಪಿಗಳ‌ ಹೆಚ್ಚಿನ ವಿಚಾರಣೆ ಯಾಕೆ ಆಗಿಲ್ಲ ಎಂಬ ಪ್ರಶ್ನೆ ಏಳುವುದು ಸಹಜ. ಸಣ್ಣ ಪುಟ್ಟ ಪ್ರಕರಣದಲ್ಲೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಪೊಲೀಸರು
ಆದರೆ ಇಂತಹ ದೊಡ್ಡ ಪ್ರಕರಣದಲ್ಲಿ ಒಂದೇ ದಿನಕ್ಕೆ ಆರೋಪಿಗಳನ್ನು ಜೈಲಿಗೆ ಕಳಿಸಿದ್ದು ಯಾಕೆ? ಪ್ರಕರಣದ ಪ್ರಮುಖ ಆರೋಪಿಗಳ ಬಂಧನ ಇನ್ನೂ ಆಗಿಲ್ಲ? ಖಾಕಿಯ ಇದೇ ನಡೆ‌ ಈಗ ಅತಿಹೆಚ್ಚು ಅನುಮಾನಕ್ಕೆ ಕಾರಣವಾಗಿದೆ. ಈ ಎಲ್ಲದರ ನಡುವೆ ಸರ್ಕಾರ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸಿಬಿಟ್ಟಿತು.