Ananth Kumar: ನನ್ನ ತಂದೆಯನ್ನು ಮರೆತ ಬಿಜೆಪಿಗೆ ಆತ್ಮಾವಲೋಕನದ ಅಗತ್ಯವಿದೆ; ಅನಂತ ಕುಮಾರ್ ಪುತ್ರಿ ವಿಜೇತಾ

ಬಿಜೆಪಿಯನ್ನು ಕಟ್ಟಿ ಬೆಳೆಸಿದ ನನ್ನ ತಂದೆಯನ್ನು ಮರೆಯುತ್ತಿರುವ ಆ ಪಕ್ಷವೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ ದಿ. ಅನಂತ ಕುಮಾರ್ ಪುತ್ರಿ ವಿಜೇತಾ ಅನಂತ ಕುಮಾರ್ ಹೇಳಿದ್ದಾರೆ.

Ananth Kumar: ನನ್ನ ತಂದೆಯನ್ನು ಮರೆತ ಬಿಜೆಪಿಗೆ ಆತ್ಮಾವಲೋಕನದ ಅಗತ್ಯವಿದೆ; ಅನಂತ ಕುಮಾರ್ ಪುತ್ರಿ ವಿಜೇತಾ
ಕೇಂದ್ರದ ಮಾಜಿ ಸಚಿವ ದಿ. ಅನಂತ ಕುಮಾರ್
Image Credit source: PTI

Updated on: Mar 28, 2023 | 2:54 PM

ಮುಖ್ಯಾಂಶಗಳು

  • ನನ್ನ ತಂದೆಯನ್ನು ಮರೆಯುತ್ತಿರುವ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದ ಅನಂತ ಕುಮಾರ್ ಪುತ್ರಿ.
  • ನನ್ನ ತಂದೆ 1987ರಲ್ಲಿ ಬಿಜೆಪಿ ಸೇರಿದ್ದರು ಮತ್ತು ಕೊನೆ ಉಸಿರಿನ ತನಕವೂ ದುಡಿದಿದ್ದರು; ವಿಜೇತಾ ಅನಂತ ಕುಮಾರ್
  • ಅವರ ಕೊಡುಗೆಗಳನ್ನು ಗುರುತಿಸದಿರುವುದು ವಿಚಿತ್ರ ಎಂದ ವಿಜೇತಾ ಅನಂತ ಕುಮಾರ್

ಬೆಂಗಳೂರು: ಬಿಜೆಪಿಯನ್ನು (BJP) ಕಟ್ಟಿ ಬೆಳೆಸಿದ ನನ್ನ ತಂದೆಯನ್ನು ಮರೆಯುತ್ತಿರುವ ಆ ಪಕ್ಷವೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ ದಿ. ಅನಂತ ಕುಮಾರ್ (Ananth Kumar) ಪುತ್ರಿ ವಿಜೇತಾ ಅನಂತ ಕುಮಾರ್ (Vijeta AnanthKumar) ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಶ್ರೇಯೋಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ, ಕೇಂದ್ರದಲ್ಲಿ ಸಚಿವರಾಗಿಯೂ ರಾಜ್ಯಕ್ಕೆ ಅನೇಕ ಅಭಿವೃದ್ಧಿಕೊಡುಗೆಗಳನ್ನು ನೀಡಿದ್ದ ಅನಂತ ಕುಮಾರ್ ಅವರನ್ನು ಬಿಜೆಪಿ ನಾಯಕರು ಮರೆತಿರುವ ಬಗ್ಗೆ ವಿಜೇತಾ ಅನಂತ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ನಾಯಕರ ಕುರಿತಾದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

‘ನನ್ನ ತಂದೆ 1987ರಲ್ಲಿ ಬಿಜೆಪಿ ಸೇರಿದ್ದರು ಮತ್ತು ಕೊನೆ ಉಸಿರಿನ ತನಕವೂ ದುಡಿದಿದ್ದರು. ಉದ್ಘಾಟನಾ ಕಾರ್ಯಕ್ರಮಗಳು, ರಸ್ತೆಗಳು, ರೈಲು ಮಾರ್ಗಗಳಲ್ಲಿ ಅವರ ಹೆಸರಿಡುವ ಮೂಲಕ ಅವರ ಕೊಡುಗೆಗಳನ್ನು ಗುರುತಿಸದಿರುವುದು ವಿಚಿತ್ರ. ಅವರು ಇಂದಿಗೂ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷವೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದು ವಿಜೇತಾ ಅನಂತ ಕುಮಾರ್ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಪಕ್ಷದ ಮೇಲಿನ ಅಸಮಾಧಾನಕ್ಕೆ ಕಾರಣವೇನು?

ರೇಸ್​ಕೋರ್ಸ್​ ರಸ್ತೆಗೆ ಸೋಮವಾರ ಮಾಜಿ ಸಚಿವ ದಿ. ಅಂಬರೀಷ್ ಅವರ ಹೆಸರಿಡಲಾಗಿತ್ತು. ಕೆಲವು ದಿನಗಳ ಹಿಂದೆ ಹೊರ ವರ್ತುಲ ರಸ್ತೆಯ 12 ಕಿಲೋಮೀಟರ್ ವ್ಯಾಪ್ತಿಗೆ ದಿ. ನಟ ಪುನೀತ್ ರಾಜ್​ಕುಮಾರ್ ಹೆಸರಿಡಲಾಗಿತ್ತು. ಈ ವಿಚಾರಗಳನ್ನೆಲ್ಲ ಉಲ್ಲೇಖಿಸಿದ್ದ ದಿನ ಪತ್ರಿಕೆಯೊಂದು ಅನಂತ ಕುಮಾರ್ ಸಾಧನೆಯನ್ನು ಸರ್ಕಾರ ಅಥವಾ ಬಿಜೆಪಿ ಮರೆಯಿತೇ ಎಂದು ಪ್ರಶ್ನಿಸಿ ವರದಿಯೊಂದನ್ನು ಪ್ರಕಟಿಸಿತ್ತು. ಆ ವರದಿಯ ಪ್ರತಿಯನ್ನು ಲಗತ್ತಿಸಿ ವಿಜೇತಾ ಅನಂತ ಕುಮಾರ್ ಟ್ವೀಟ್ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮತ್ತು ಪ್ರತಿಪಕ್ಷವಾಗಿದ್ದ ಸಂದರ್ಭದಲ್ಲಿಯೂ ಅನೇಕ ಯೋಜನೆಗಳನ್ನು ರಾಜ್ಯಕ್ಕೆ ದೊರಕಿಸಿಕೊಡುವಲ್ಲಿ ಹಾಗೂ ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ: 1954ರಿಂದಲೂ ಕಾಂಗ್ರೆಸ್ ಒಬಿಸಿ ಸಮುದಾಯದ ವಿರೋಧಿ​: ಡಿಕೆ ಶಿವಕುಮಾರ್​, ಸಿದ್ದರಾಮಯ್ಯ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ

ಸಂಸದೀಯ ಸಚಿವರಾಗಿದ್ದಾಗ ಅನಂತ ಕುಮಾರ್ ಅವರ ಕಾರ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಮಧ್ಯೆ, ಬಸವನಗುಡಿಯಲ್ಲಿ ರವಿಸುಬ್ರಹ್ಮಣ್ಯ ಬದಲಿಗೆ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್​ಗೆ ಬಿಜೆಪಿ ವಿಧಾನಸಭೆ ಚುನಾವಣೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ಹೇಳಿವೆ. ಜಯನಗರದಿಂದ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದಾಗಿಯೂ ಇತ್ತೀಚೆಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us