ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ವಯನಾಡು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಈಗ ಕರ್ನಾಟಕದಲ್ಲಿ ನಕಲಿ ಬಿಲ್ ಪ್ರಕರಣದಲ್ಲಿ ದೋಷಿಯಾಗಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರೂ ಸಿ. ಓಲೇಕಾರ್( bjp mla nehru olekar) ಏಕೆ ಶಾಸಕ ಸ್ಥಾನದಿಂದ ಅನರ್ಹಗೊಂಡಿಲ್ಲ ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಕಾರ್ಯಕರ್ತರೇ ಶಾಸಕ ನೆಹರು ಓಲೆಕಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್ಗೆ ಜೈಲುಶಿಕ್ಷೆ
ಹೌದು.. ಶಾಸಕ ಸ್ಥಾನದಿಂದ ನೆಹರು ಓಲೆಕಾರ್ ಅವರನ್ನು ಅನರ್ಹಗೊಳಿಸುವಂತೆ ಬಿಜೆಪಿ ಮುಖಂಡ ಸಂತೋಷ್ ರೆಡ್ಡಿ ನೇತೃತ್ವದಲ್ಲಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ನೆಹರೂ ಓಲೆಕಾರ್ ವಿರುದ್ದ ಶಿಕ್ಷೆ ಪ್ರಕಟವಾಗಿದೆ. ಭ್ರಷ್ಟಾಚಾರ ಕೇಸ್ನಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ನೆಹರು ಓಲೆಕಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಮಾಡಿದ್ದಾರೆ.
2013ರಲ್ಲಿ ಹಾವೇರಿಯ ಶಶಿಧರ್ ಹಳ್ಳಿಕೇರಿ ಅವರು ದೂರು ದಾಖಲಿಸಿ, 2008 ಮತ್ತು 2013ರ ಅವಧಿಯಲ್ಲಿ ಶಾಸಕರಾಗಿದ್ದ ಓಲೇಕಾರ್ ಅವರು ಸರ್ಕಾರದ ಸಿವಿಲ್ ಕೆಲಸಗಳನ್ನು ಬೇರೆಯವರಿಗೆ ದಕ್ಕದಂತೆ ತಮ್ಮ ಇಬ್ಬರು ಪುತ್ರರಿಗೆ ಕೊಡಿಸಿದ್ದರು ಎಂದು ಆರೋಪಿಸಿದ್ದರು. ಈ ಖಾಸಗಿ ದೂರನ್ನು ಆಧರಿಸಿ ಹಾವೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು. ಇದರ ಅನ್ವಯ ಐಪಿಸಿ ಸೆಕ್ಷನ್ಗಳಾದ 197, 198, 409 ಮತ್ತು 420 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 13(1)(ಡಿ) ಜೊತೆಗೆ 13(2) ಅಡಿ ಪ್ರಕರಣ ದಾಖಲಿಸಿ, ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆಯ ಜೊತೆಗೆ ಶಾಸಕ ಓಲೇಕಾರ್ಗೆ ₹2,000 ದಂಡ ವಿಧಿಸಿದ್ದು, ಅವರ ಇಬ್ಬರು ಪುತ್ರರಿಗೆ ತಲಾ 6,000 ಹಾಗೂ 4,5,7,8 ಮತ್ತು 9ನೇ ಆರೋಪಿಗಳಿಗೆ ತಲಾ 8,000 ರೂ. ದಂಡ ವಿಧಿಸಿತ್ತು. ದೋಷಿಗಳ ಪೈಕಿ ಓಲೇಕಾರ್ ಮಾತ್ರ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್ ವಂಚನೆ ಪ್ರಕರಣದಲ್ಲಿ ಬಿಜೆಪಿಯ ಹಾವೇರಿ ಶಾಸಕ ನೆಹರೂ ಓಲೇಕಾರ್ ಅವರಿಗೆ ವಿಚಾರಣಾಧೀನ ನ್ಯಾಯಾಲಯವು ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಅಲ್ಲದೇ ನೆಹರು ಓಲೇಕಾರ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
50 ಲಕ್ಷ ರೂ. ಮೊತ್ತದ ಕಾಮಗಾರಿ ಪುತ್ರರಿಗೇ ನೀಡಿದ ಆರೋಪದಡಿ ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್ ಮತ್ತು ಪುತ್ರರಾದ ಮಂಜುನಾಥ್, ದೇವರಾಜ್ ಓಲೆಕಾರ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ 2 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಕಾಂಕ್ರೀಟ್ ರಸ್ತೆ ಸೇರಿದಂತೆ ಕೆಲ ಕಾಮಗಾರಿಯಲ್ಲಿ ಶಾಸಕ ಓಲೆಕಾರ್ ವಿರುದ್ಧ ಸ್ವಜನ ಪಕ್ಷಪಾತ ಆರೋಪಿಸಿತ್ತು. ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದ ಹಿನ್ನೆಲೆ ಜನಪ್ರತಿನಿಧಿಗಳ ನ್ಯಾಯಾಲಯದಿಂದಲೇ ಜಾಮೀನು ಮಂಜೂರು ಮಾಡಲಾಗಿತ್ತು.