ಬಿಎಂಟಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.. ನಾಳಿನ ಬಜೆಟ್​ನಲ್ಲಿ ಬಿಎಂಟಿಸಿ ಪ್ರಯಾಣ ದರ ಏರಿಕೆ ಸಾಧ್ಯತೆ

| Updated By: shruti hegde

Updated on: Mar 07, 2021 | 3:48 PM

ಇಂಧನ ದರ ಏರಿಕೆಯಾಗಿದ್ದು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಸಾರ್ವಕಾಲಿಕ ನಷ್ಟದಲ್ಲಿದೆ. ಹೀಗಾಗಿ ದರ ಏರಿಕೆ ಪ್ರಸ್ತಾವನೆಯನ್ನು BMTC ಸರ್ಕಾರದ ಮುಂದಿಟ್ಟಿದೆ.

ಬಿಎಂಟಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.. ನಾಳಿನ ಬಜೆಟ್​ನಲ್ಲಿ ಬಿಎಂಟಿಸಿ ಪ್ರಯಾಣ ದರ ಏರಿಕೆ ಸಾಧ್ಯತೆ
ಬಿಎಂಟಿಸಿ ಬಸ್
Follow us on

ಬೆಂಗಳೂರು: ಮಾರ್ಚ್ 08ಕ್ಕೆ ಕರ್ನಾಟಕ ಬಜೆಟ್ ಮಂಡನೆಯಾಗಲಿದೆ. ಹೀಗಾಗಿ ಬಹಳಷ್ಟು ನಿರೀಕ್ಷೆಗಳು ಸಾಮಾನ್ಯ. ಆದ್ರೆ ಈ ಬಾರಿ ಬಜೆಟ್​ನಲ್ಲಿ ಸಿಹಿಗಿಂತ ಕಹಿಯೇ ಜಾಸ್ತಿ ಇದೆ. ಬಿಎಂಟಿಸಿ ಪ್ರಯಾಣಿಕರು ಬಜೆಟ್ ಶಾಕ್​ಗೆ ಸಿದ್ಧರಾಗಿರಬೇಕು. ಏಕೆಂದರೆ ಬಜೆಟ್​ನಲ್ಲಿ BMTC ದರ ಏರಿಕೆ ಘೋಷಣೆ ಬಹುತೇಕ ಪಕ್ಕ ಆಗಿದೆ. ಇಂಧನ ದರ ಏರಿಕೆಯಾಗಿದ್ದು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಸಾರ್ವಕಾಲಿಕ ನಷ್ಟದಲ್ಲಿದೆ. ಹೀಗಾಗಿ ದರ ಏರಿಕೆ ಪ್ರಸ್ತಾವನೆಯನ್ನು BMTC ಸರ್ಕಾರದ ಮುಂದಿಟ್ಟಿದೆ. ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

ರಾಜ್ಯ ಬಜೆಟ್‌ನಲ್ಲಿ ನಿರ್ಧಾರ ಹೊರಬರುವ ನಿರೀಕ್ಷೆ ಇದೆ. ಕಳೆದ ಬಾರಿ ಬೇರೆ ನಿಗಮಗಳು ದರ ಏರಿಕೆ ಮಾಡಿದ್ದವು. ಆಗ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಆಗಿನ ಡೀಸೆಲ್ ದರಕ್ಕೂ ಈಗಿನ ದರಕ್ಕೂ ₹30 ಹೆಚ್ಚಾಗಿದೆ. ಕೊರೊನಾ ಹಿನ್ನೆಲೆ ಪ್ರಯಾಣಿಕರ ಕೊರತೆ ಕೂಡ ಇದೆ. ಸುಮಾರು 10 ಲಕ್ಷ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಹೀಗಾಗಿ BMTC ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ. ಶೇ.18ರಿಂದ 20ರವರೆಗೆ ದರ ಏರಿಕೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

ಇನ್ನು ಕೋಟ್ಯಾಂತರ ಜನರನ್ನು ಹೊತ್ತು ಸಾಗುವ BMTC ನಷ್ಟದಲ್ಲಿದೆ. ಸಾಲದಲ್ಲಿ ಮುಳುಗಿದೆ. ಆದರೆ ಸಚಿವ ಲಕ್ಷ್ಮಣ ಸವದಿ ಮಾತ್ರ ಈ ಬಗ್ಗೆ ತಲೆನೇ ಕೆಡಿಸಿಕೊಳ್ಳುತ್ತಿಲ್ಲ. ಸಂಸ್ಥೆಯ ನೆರವಿಗೆ ನಿಲ್ಲುತ್ತಿಲ್ಲ. ಈ ಬಗ್ಗೆ ಸಿಬ್ಬಂದಿ ಅಸಮಾಧಾನ ಹೊರ ಹಾಕಿದ್ದು ಅಧಿಕಾರಿಗಳು ಸಾಲಕ್ಕಾಗಿ ಬ್ಯಾಂಕ್​ಗಳ ಮೊರೆ ಹೋಗಿದ್ದಾರೆ.

ಸಾಲಕ್ಕಾಗಿ ಬ್ಯಾಂಕ್​ಗಳ ಹುಡುಕಾಟ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ನಷ್ಟದಿಂದ ಅಕ್ಷರಶಃ ಮುಳುಗಿದ ಹಡಗಿನಂತಾಗಿದೆ. ಸಚಿವ ಲಕ್ಷ್ಮಣ ಸವದಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದರೆ ಬಿಎಂಟಿಸಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಸಚಿವರ ನಿರ್ಲಕ್ಷ್ಯ ಹಾಗೂ ಅಧಿಕಾರಗಳ ಅನಗತ್ಯ ನಿರ್ಧಾರದಿಂದ ಬಿಎಂಟಿಸಿ ಬರ್ಬಾದ್ ಆಗ್ತಿದೆ. ನೌಕರರಿಗೆ ಸಂಬಳ, ಬ್ಯಾಟರಿ, ಡೀಸೆಲ್ ಖರೀದಿ ಮಾಡಲು ಬಿಎಂಟಿಸಿ ಬಳಿ ಹಣವಿಲ್ಲವಂತೆ. ಸಾಲಕ್ಕಾಗಿ ಬಿಎಂಟಿಸಿ ಬಸ್, ಡಿಪೋ, ಟಿಟಿಎಂಸಿಗಳನ್ನ ಅಡಮಾನ ಇಡಲು ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ 230 ಕೋಟಿ ಸಾಲ ಪಡೆಯಲು ಬ್ಯಾಂಕ್​ಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಕಡಿಮೆ ಬಡ್ಡಿದರಲ್ಲಿ ಸಾಲ ನೀಡುವ ಬ್ಯಾಂಕ್​ಗಳ ಬಾಗಿಲು ತಟ್ಟಲು ಮುಂದಾಗಿದ್ದಾರೆ. ನಮ್ಮ ಷರತ್ತುಗಳ ಅನ್ವಯ ಆಸಕ್ತ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್​ಗಳು ಟೆಂಡರ್​ನಲ್ಲಿ ಭಾಗವಹಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವಂತೆ BMTC ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ನಷ್ಟದ ಸುಳಿಯಲಿ ಬಿಎಂಟಿಸಿ
2012-13: 147 ಕೋಟಿ ನಷ್ಟ
2013-14: 147 ಕೋಟಿ ನಷ್ಟ
2014-15: 64 ಕೋಟಿ ನಷ್ಟ
2015-16: 13 ಕೋಟಿ ನಷ್ಟ
2016-17: 260 ಕೋಟಿ ನಷ್ಟ
2017-18: 216 ಕೋಟಿ ನಷ್ಟ
2018-19: 300 ಕೋಟಿ ನಷ್ಟ
2019-2020: 500 ಕೋಟಿ ನಷ್ಟ

ಇದನ್ನೂ ಓದಿ: ತುಂಬಿದ ಬಿಎಂಟಿಸಿ ಬಸ್​ಗಳಲ್ಲಿ ಟಿಕೆಟ್ ಪಡೆಯದಿದ್ದರೆ ಪ್ರಯಾಣಿಕರೇ ಹೊಣೆ: ಕಂಡಕ್ಟರ್​ಗೆ ಇಲ್ಲ ದಂಡ

Published On - 1:10 pm, Sun, 7 March 21