ಬೆಂಗಳೂರು: ‘ಲ್ಯಾಂಡ್ ಮಾಡಬೇಡಿ, ಈ ವಿಮಾನದಲ್ಲಿ ಬಾಂಬ್ ಇದೆ’ ಎಂಬ ಬೆದರಿಕೆಯ ಸಂದೇಶವನ್ನು ಬರೆದ ಟಿಶ್ಯೂ ಪೇಪರ್ ಜೈಪುರ-ಬೆಂಗಳೂರು ಇಂಡಿಗೋ ವಿಮಾನದ ಶೌಚಾಯಲಯದಲ್ಲಿ ಪತ್ತೆಯಾಗಿದೆ. ಮಾಹಿತಿ ಪಡೆದ ಬಾಂಬ್ ಸ್ಕ್ವಾಡ್ ಮತ್ತು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಸಿಬ್ಬಂದಿ ಇಂಡಿಗೋ ವಿಮಾನದಲ್ಲಿ ಶೋಧ ನಡೆಸಿದ್ದಲ್ಲದೆ ಪ್ರಯಾಣಿಕರನ್ನು ತಪಾಸಣೆ ನಡೆಸಿದರು. 174 ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಲಾಗಿದೆ. ಮಾತ್ರವಲ್ಲದೆ ಅಷ್ಟೂ ಪ್ರಯಾಣಿಕರ ಮತ್ತು 12 ಸಿಬ್ಬಂದಿಗಳ ಕೈಬರಹ ಪರೀಕ್ಷೆ ನಡೆಸಲಾಗಿಯಿತು. ಅದರಂತೆ ಇಬ್ಬರು ಪ್ರಯಾಣಿಕರನ್ನು ಶಂಕಿತರು ಎಂದು ಗುರುತಿಸಲಾಯಿತು. ಘಟನೆಯಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ವಿಮಾನದ ಸಿಬ್ಬಂದಿಯೊಬ್ಬರು ಹಿಂಭಾಗದ ಶೌಚಾಲಯದ ನೆಲದ ಮೇಲೆ ಹರಿದ ಟಿಶ್ಯೂ ಪೇಪರ್ ಅನ್ನು ನೋಡಿದರು. ಅದರಲ್ಲಿ ಬೆದರಿಕೆ ಸಂದೇಶವಿರುವುದನ್ನು ನೋಡಿದ ಸಿಬ್ಬಂದಿ ಕ್ಯಾಪ್ಟನ್‌ಗೆ ಮಾಹಿತಿ ನೀಡಿದರು. ಕೂಡಲೇ ಎಚ್ಚೆತ್ತ ಕ್ಯಾಪ್ಟನ್, ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಎಚ್ಚರಿಕೆ ನೀಡಿದರು. ಅದರಂತೆ ಸಿಐಎಸ್ಎಫ್ ತಂಡ ಕೆಲವೇ ನಿಮಿಷಗಳಲ್ಲಿ ಪರಿಶೀಲನೆಗೆ ಸಜ್ಜಾಯಿತು.
ಪ್ರಯಾಣಿಕರು ಭೀತಿಗೆ ಒಳಗಾಗಬಾರದು ಎಂದು ಯಾವುದೇ ಮಾಹಿತಿಯನ್ನು ನೀಡದೆ ವಿಮಾನವನ್ನು ಕಾರ್ಗೋ ಟರ್ಮಿನಲ್ ಬಳಿಯ ಪ್ರತ್ಯೇಕ ಕೊಲ್ಲಿಗೆ ಕೊಂಡೊಯ್ಯಲಾಯಿತು. ನಂತರ ಪ್ರಯಾಣಿಕರನ್ನು ಟರ್ಮಿನಲ್ಗೆ ಕರೆದೊಯ್ಯಲಾಯಿತು. ನಂತರ ಪ್ರಯಾಣಿಕರ ಬ್ಯಾಗ್‌ಗಳನ್ನು ವಿಮಾನದಿಂದ ಹೊರತೆಗೆದು ಲೋಹದ ಶೋಧಕಗಳೊಂದಿಗೆ ಪರಿಶೀಲಿಸಲಾಯಿತು. ಸುಮಾರು 1 ಗಂಟೆಗಳ ಕಾಲ ನಡೆದ ಶೋಧಕಾರ್ಯ ನಂತರ ಇದು ಸುಳ್ಳು ಬೆದರಿಕೆ ಎಂದು ಘೋಷಿಸಲಾಯಿತು.
ಶಂಕಿತರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸಿಐಎಸ್ಎಫ್ ತಂಡವು ಪ್ರಯಾಣಿಕರ ಕೈಬರಹವನ್ನು ಪರೀಕ್ಷೆ ನಡೆಸಿದ್ದು, ಹಿಂದಿಯಲ್ಲಿ ಬರೆಯಲು ಬರದವರನ್ನು ಪರೀಕ್ಷೆಯಿಂದ ಹೊರಗಿಡಲಾಯಿತು. ನಂತರ ಇಪ್ಪತ್ತು ಜನರನ್ನು ಶಾರ್ಟ್‌ಲಿಸ್ಟ್ ಮಾಡಿ ಪರೀಕ್ಷೆ ನಡೆಸಲಾಗಿದ್ದು, ಅಂತಿಮವಾಗಿ ಇಬ್ಬರು ಶಂಕಿತರನ್ನು ಪತ್ತೆಹಚ್ಚಿ ಬರವಣಿಗೆ ಬಗ್ಗೆ ಪ್ರಶ್ನಿಸಲಾಯಿತು. ಎರಡು ಗಂಟೆಗಳ ವಿಳಂಬದ ನಂತರ ಎಲ್ಲಾ ಪ್ರಯಾಣಿಕರನ್ನು ಮನೆಗೆ ಹೋಗಲು ಅನುಮತಿಸಲಾಯಿತು. ಇಬ್ಬರು ಶಂಕಿತರ ತನಿಖೆ ಮುಂದುವರಿದಿದೆ.
ಜೈಪುರದಿಂದ ಇಂಡಿಗೋ ವಿಮಾನ 6E-556 ಭಾನುವಾರ ರಾತ್ರಿ 9.26 ಕ್ಕೆ KIA ಗೆ ಆಗಮಿಸಿದ ವಿಮಾನದಲ್ಲಿ ಈ ಬೆದರಿಕೆ ಸಂದೇಶ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. “ನೀಲಿ ಶಾಯಿಯಲ್ಲಿ ‘ವಿಮಾನವನ್ನು ಲ್ಯಾಂಡ್ ಮಾಡಬೇಡಿ, ಈ ವಿಮಾನದಲ್ಲಿ ಬಾಂಬ್ ಇದೆ’ ಎಂದು ಬರೆದಿರುವ ಟಿಶ್ಯೂ ಪೇಪರ್ ಪತ್ತೆಯಾಗಿರುವುದಾಗಿ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಅನೂಪ್ ಎ ಶೆಟ್ಟಿ ಹೇಳಿದ್ದಾರೆ. ಬೆದರಿಕೆ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Tue, 9 August 22