ಕರ್ನಾಟಕ, ಉತ್ತರಪ್ರದೇಶದ 6 ಆರ್​​ಎಸ್ಎಸ್​​ ಕಚೇರಿಗಳಿಗೆ ಬಾಂಬ್ ಬೆದರಿಕೆ; ತಮಿಳುನಾಡಿನಲ್ಲಿ ವ್ಯಕ್ತಿ ಬಂಧನ

| Updated By: ರಶ್ಮಿ ಕಲ್ಲಕಟ್ಟ

Updated on: Jun 07, 2022 | 6:12 PM

ವಾಟ್ಸಾಪ್ ಗ್ರೂಪ್​​ಗೆ ಸೇರಲು ಲಖನೌದಲ್ಲಿರುವ ಆರ್‌ಎಸ್‌ಎಸ್ ಸದಸ್ಯರಿಗೆ ವಾಟ್ಸಾಪ್ ಲಿಂಕ್​​ನ್ನು ಆತ ಕಳುಹಿಸಿದ್ದ. ಆ ಗ್ರೂಪ್​​ನಲ್ಲಿ ಕರ್ನಾಟಕದಲ್ಲಿ ಸಂಘಟನೆಯ ನಾಲ್ಕು ಮತ್ತು ಉತ್ತರ ಪ್ರದೇಶದಲ್ಲಿ ಎರಡು ಕಚೇರಿಗಳನ್ನು ಸ್ಫೋಟಿಸುವ ಯೋಜನೆ ಬಗ್ಗೆ ಚರ್ಚೆ ನಡೆದಿದೆ.

ಕರ್ನಾಟಕ, ಉತ್ತರಪ್ರದೇಶದ 6 ಆರ್​​ಎಸ್ಎಸ್​​ ಕಚೇರಿಗಳಿಗೆ ಬಾಂಬ್ ಬೆದರಿಕೆ; ತಮಿಳುನಾಡಿನಲ್ಲಿ ವ್ಯಕ್ತಿ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ (Karnataka) ಮತ್ತು ಉತ್ತರ ಪ್ರದೇಶದಲ್ಲಿರುವ (Uttar Pradesh) 6  ಆರ್​​ಎಸ್ಎಸ್ (RSS) ಕಚೇರಿಗಳಿಗೆ ಬಾಂಬ್ ಬೆದರಿಕೆ ನೀಡಿದ್ದ ಪ್ರಕರಣದಲ್ಲಿ ರಾಜ್ ಮೊಹಮ್ಮದ್ ಎಂಬಾತನನ್ನು ಮಂಗಳವಾರ ತಮಿಳುನಾಡಿನ ಪುದುಕ್ಕುಡಿ ಎಂಬಲ್ಲಿಂದ ಬಂಧಿಸಲಾಗಿದೆ. ಮೊಹಮ್ಮದ್‌ನಿಂದ ವಾಟ್ಸಾಪ್‌ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ವಾಟ್ಸಾಪ್ ಗ್ರೂಪ್​​ಗೆ ಸೇರಲು ಲಖನೌದಲ್ಲಿರುವ ಆರ್‌ಎಸ್‌ಎಸ್ ಸದಸ್ಯರಿಗೆ ವಾಟ್ಸಾಪ್ ಲಿಂಕ್​​ನ್ನು ಆತ ಕಳುಹಿಸಿದ್ದ. ಆ ಗ್ರೂಪ್​​ನಲ್ಲಿ ಕರ್ನಾಟಕದಲ್ಲಿ ಸಂಘಟನೆಯ ನಾಲ್ಕು ಮತ್ತು ಉತ್ತರ ಪ್ರದೇಶದಲ್ಲಿ ಎರಡು ಕಚೇರಿಗಳನ್ನು ಸ್ಫೋಟಿಸುವ ಯೋಜನೆ ಬಗ್ಗೆ ಚರ್ಚೆ ನಡೆದಿದೆ. ಮಂಗಳವಾರ ಆರ್‌ಎಸ್‌ಎಸ್‌ ಕಾರ್ಯಕರ್ತ ಪೊಲೀಸರನ್ನು ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಐಪಿಸಿ ಸೆಕ್ಷನ್ 507 (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. “ತನಿಖೆ ನಡೆಸಲಾಗಿದೆ ಮತ್ತು ಪೊಲೀಸ್ ತಂಡವನ್ನು ರಚಿಸಲಾಗಿದೆ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು” ಎಂದು ಉತ್ತರ ಲಖನೌ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಎಸ್ ಚನ್ನಪ್ಪ ಇಂದು ಬೆಳಿಗ್ಗೆ ತಿಳಿಸಿದ್ದಾರೆ.

ನ್ಯೂಸ್ 18 ವರದಿಯ ಪ್ರಕಾರ, ಅಂತರರಾಷ್ಟ್ರೀಯ ಸಂಖ್ಯೆಯಿಂದ ಸಂದೇಶಗಳನ್ನು ಸಂಘದ ಸದಸ್ಯ ನೀಲಕಂಠ ತಿವಾರಿಗೆ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಳುಹಿಸಲಾಗಿದೆ. ಲಖನೌ ಮತ್ತು ಉನ್ನಾವ್​​ನಲ್ಲಿರುವ ಆರ್​​ ಎಸ್ಎಸ್ ಕಚೇರಿ ಮೇಲೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಿಯೋನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸೋಮವಾರ ಸಂಜೆ 8ಗಂಟೆಗೆ ಆರ್​​ಎಸ್ಎಸ್ ಕಚೇರಿಯನ್ನು ಸ್ಫೋಟಿಸಲಾಗುವುದು ಎಂದು ವಾಟ್ಸಾಪ್​​ನಲ್ಲಿ ಸಂದೇಶ ಕಳುಹಿಸಲಾಗಿತ್ತು. ಸೈಬರ್ ಸೆಲ್ ಸಹಾಯದಿಂದ ವಾಟ್ಸಾಪ್ ಸಂದೇಶ ಬಂದಿರುವ ಸಂಖ್ಯೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಲಖನೌ ಪೊಲೀಸರು ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.

ಆರ್​​ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಜ್ಞಾನವಾಪಿ ಮಸೀದಿ ಪ್ರಕರಣದಿಂದ ಆರ್‌ಎಸ್‌ಎಸ್ ಅಂತರ ಕಾಯ್ದುಕೊಂಡ ನಂತರ ಈ ಬಾಂಬ್ ಬೆದರಿಕೆ ಬಂದಿದೆ. ತೃತೀಯಾ ವರ್ಷ ಸಂಘ ಶಿಕ್ಷಾ ವರ್ಗದಲ್ಲಿ ಮಾತನಾಡಿದ ಭಾಗವತ್, “ಇಸ್ಲಾಂ ಹೊರಗಿನಿಂದ ಬಂದಿದ್ದರೆ ಏನಂತೆ, ಇಲ್ಲಿನ ನಂಬಿಕೆಯನ್ನು ಅನುಸರಿಸುವ ಮುಸ್ಲಿಮರಿಗೆ ಹೊರಗಿನೊಂದಿಗೆ ಯಾವುದೇ ಸಂಬಂಧವಿಲ್ಲ, ಜನರು ಅದನ್ನು ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸಾಮಾನ್ಯ ಪೂರ್ವಜರನ್ನು ಹೊಂದಿದ್ದಾರೆ ಎಂದು ಹೇಳಿದ್ದರು.

“ಪ್ರತಿಯೊಬ್ಬರೂ ಪರಸ್ಪರ ಭಾವನೆಗಳ ಬಗ್ಗೆ ಕಾಳಜಿ ವಹಿಸಬೇಕು. ಎರಡೂ ಕಡೆಯವರು ಬೆದರಿಕೆಯ ಹೇಳಿಕೆ ನೀಡುವುದನ್ನು ತಡೆಯಬೇಕು. ಹಿಂದೂಗಳ ಕಡೆಯಿಂದ ಇದು ತುಂಬಾ ಕಡಿಮೆಯಾಗಿದೆ. ಹಿಂದೂಗಳು ತುಂಬಾ ತಾಳ್ಮೆಯಿಂದಿದ್ದಾರೆ ಮತ್ತು ಒಗ್ಗಟ್ಟಿಗೆ ಹೆಚ್ಚಿನ ಬೆಲೆ ನೀಡಿದ್ದಾರೆ” ಎಂದು ಭಾಗವತ್ ಹೇಳಿದರು. ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವವರನ್ನು ತಡೆಯುವ ಕೆಲವರು ಹಿಂದೂಗಳಲ್ಲಿದ್ದರೆ, “ಮತ್ತೊಂದು ಕಡೆ” ಅದರ ಕೊರತೆಯಿದೆ ಎಂದು ಅವರು ಹೇಳಿದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:28 pm, Tue, 7 June 22