ಬೆಂಗಳೂರು: ಗಣಿಗಾರಿಕೆ, ಕೈಗಾರಿಕೆ, ನಿರ್ಮಾಣ ಕ್ಷೇತ್ರ ಹಾಗೂ ಔಷಧಿ ಉತ್ಪಾದನಾ ಕಂಪನಿಗಳು ಸೇರಿದಂತೆ ವಿವಿಧ ರೀತಿಯ ಕೈಗಾರಿಕೆಗಳಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ರಾಜ್ಯ ಮಟ್ಟದ ಪರಿಸರ ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರ ಮತ್ತು ರಾಜ್ಯ ಮಟ್ಟದ ತಜ್ಞರ ಸಮಿತಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪರಿಸರ ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರ ಮತ್ತು ರಾಜ್ಯ ಮಟ್ಟದ ತಜ್ಞರ ಸಮಿತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಚಿವರು ‘ಎ’ ವರ್ಗದ ಯೋಜನೆಗಳು ಹಾಗೂ ಚಟುವಟಿಕೆಗಳು ಕೇಂದ್ರ ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಬರುತ್ತವೆ. ‘ಬಿ’ ವರ್ಗದ ಯೋಜನೆಗಳು ಹಾಗೂ ಚಟುವಟಿಕೆಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ನಾವು ಹೊಸದಾಗಿ ಸ್ಥಾಪಿಸುವ ಉದ್ಯಮಿಗಳಿಗೆ ಕೇವಲ ಪರಿಸರ ವಿಮೋಚನಾ ಪತ್ರ (Environment Clearance) ನೀಡಿ ಅನುಮತಿ ನೀಡುತ್ತೇವೆ. ನಾವು ಅನುಮತಿ ನೀಡಿದ ನಂತರ ಕೈಗಾರಿಕೆಗಳು ಪರಿಸರ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸುವ ಬಗ್ಗೆ ಪರಿಶೀಲನೆ ಮಾಡುತ್ತಿಲ್ಲ. ನಮಗೆ ಅದರ ಮೇಲೆ ನಿಯಂತ್ರಣ ಸಹ ಇಲ್ಲ. ಹೀಗಾಗಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮಧ್ಯೆ ಪ್ರವೇಶಿಸಿ ಹಲವಾರು ಚಟುವಟಿಕೆಗಳನ್ನು ನಿಲ್ಲಿಸಿದೆ. ಇನ್ನು ಮುಂದೆ ‘ಬಿ’ ವರ್ಗದ ಚಟುವಟಿಕೆಗಳ ಮೇಲೆ ನಿಯಂತ್ರಣವಿಡಲು ಹಾಗೂ ಪರಿಶೀಲನೆ ಮಾಡಲು ಪ್ರಸ್ತಾವನೆ ಕಳುಹಿಸಿ ಎಂದು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಕುಮಾರ್ ಹಾಗೂ ಪರಿಸರ ಮಾಲಿನ್ಯ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷರಾದ ಸಾಸ್ವತಿ ಮಿಶ್ರಾ ಅವರಿಗೆ ಸೂಚಿಸಿದರು.
ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆ.ಐ.ಡಿ.ಬಿ.) ಪ್ರದೇಶದಲ್ಲಿ ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲಿಸುತ್ತಿಲ್ಲ. ಅಪಾರವಾದ ವಾಯು ಹಾಗೂ ಜಲಮಾಲಿನ್ಯವಾಗುತ್ತಿದ್ದು, ಪರಿಸರಕ್ಕೆ ತುಂಬಾ ಧಕ್ಕೆ ಉಂಟಾಗುತ್ತಿದೆ. ಕೆರೆ, ನದಿ ಹಾಗೂ ಸಮುದ್ರದಲ್ಲೂ ವಿಷಕಾರಕ ಅಂಶಗಳು ಸೇರುತ್ತಿವೆ. ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಕೆ.ಐ.ಡಿ.ಬಿ. ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾಗಿದ್ದರೂ ಸಹ ಪರಿಸರ ಸಂರಕ್ಷಣಾ ನಿಯಮಗಳನ್ನು ಪಾಲಿಸಲೇಬೇಕು. ಇಲ್ಲದಿದ್ದರೆ ಪರಿಸರ ಮಾಲಿನ್ಯಕ್ಕೆ ಸರ್ಕಾರಿ ಸಂಸ್ಥೆ ಹೊಣೆಯಾದರೆ ಇತರೆ ಕೈಗಾರಿಕೆಗಳನ್ನು ನಾವು ನಿಯಂತ್ರಿಸುವುದು ಹೇಗೆ? ಎಂದು ಸಮಿತಿ ಹಾಗೂ ಪ್ರಾಧಿಕಾರದ ಸದಸ್ಯರುಗಳನ್ನು ಪ್ರಶ್ನಿಸಿದರು. ಬಿ-1 ಮತ್ತು ಬಿ-2 ವರ್ಗದ ಕೈಗಾರಿಕೆಗಳು ಯಾವುದೇ ರೀತಿಯಲ್ಲೂ ಪರಿಸರ ಮಾಲಿನ್ಯ ಮಾಡದಂತೆ ಅವುಗಳ ಮೇಲೆ ನಮ್ಮ ಹತೋಟಿ ಇರಬೇಕು ಹಾಗೂ ಅವರು ನಮ್ಮ ನಿಯಂತ್ರಣದಲ್ಲಿರುವಂತೆ ಸಮರ್ಪಕವಾದ ಆದೇಶ ಹೊರಡಿಸಲು ಪ್ರಸ್ತಾವನೆ ಕಳುಹಿಸಿ ಎಂದು ಸಚಿವರು ಸೂಚಿಸಿದರು.
ಪರಿಸರ ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರ ಹಾಗೂ ತಜ್ಞರ ಸಮಿತಿ ಮುಂದೆ ಗಣಿಗಾರಿಕೆಗೆ ಸಂಬಂಧಿಸಿದ 78 ಕಡತಗಳು ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ 34 ಹಾಗೂ ಕೈಗಾರಿಕೆಗಳಿಗೆ ಸಂಬಂಧಿಸಿದ 2 ಕಡತಗಳು ಬಾಕಿ ಇದ್ದು, ಈ ತಿಂಗಳು 23 ಹಾಗೂ 24ರಂದು ಸಭೆ ಏರ್ಪಡಿಸಿದೆ. ಕಡತಗಳನ್ನು ಇತ್ಯರ್ಥ ಪಡಿಸುವುದಾಗಿ ಸದಸ್ಯರುಗಳು ತಿಳಿಸಿದರು.
ಹಲವಾರು ಶಾಸಕರು ಹಾಗೂ ಸಚಿವರುಗಳು ತಮ್ಮ ಕಡತಗಳು ವಿಲೇವಾರಿ ಆಗುತ್ತಿಲ್ಲವೆಂದು ನನ್ನ ಮೇಲೆ ಒತ್ತಡವೇರುತ್ತಿದ್ದಾರೆ. ರಾಜ್ಯದಲ್ಲಿ ಕೊವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಆದಷ್ಟು ಬೇಗ ಕಡತಗಳನ್ನು ವಿಲೇವಾರಿ ಮಾಡಿ ಎಂದು ಸದಸ್ಯರುಗಳಿಗೆ ಸಚಿವರು ತಾಕೀತು ಮಾಡಿದರು.
ಗಣಿಗಾರಿಕೆ, ನಿರ್ಮಾಣ ಕ್ಷೇತ್ರ ಹಾಗೂ ಉದ್ಯಮಿಗಳು ಸಮಾಲೋಚಕರ ಮೂಲಕ ಪರಿಸರ ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರ ಹಾಗೂ ರಾಜ್ಯ ಮಟ್ಟದ ತಜ್ಞರ ಸಮಿತಿಗೆ ಅರ್ಜಿಗಳನ್ನು ಸಲ್ಲಿಸುತ್ತಾರೆ. ಪ್ರಾಧಿಕಾರ ಹಾಗೂ ಸಮಿತಿಯ ಕೆಲವು ಸದಸ್ಯರು ಸಮಾಲೋಚಕರಾಗಿದ್ದಾರೆ ಎಂಬ ದೂರುಗಳು ಸಹ ಬಂದಿವೆ. ನಮ್ಮ ಸದಸ್ಯರುಗಳು ಸಮಾಲೋಚಕರಾಗಿ ಕಾರ್ಯನಿರ್ವಹಿಸುವಂತೆ ಇಲ್ಲವೆಂದು ಇದೇ ವೇಳೆ ಸಚಿವರು ಎಚ್ಚರಿಕೆ ನೀಡಿದರು.
ಔಷಧಿ ಉತ್ಪಾದನಾ ಕಾರ್ಖಾನೆಗಳಲ್ಲಿ ಅತೀ ಹೆಚ್ಚಿನ ರಾಸಾಯನಿಕಗಳನ್ನು ಬಳಸುತ್ತಾರೆ. ಅದರಿಂದ, ಪರಿಸರದ ಮೇಲೆ ಭಾರಿ ದುಷ್ಪರಿಣಾಮವಾಗುತ್ತಿದೆ. ಇದನ್ನು ನಿಯಂತ್ರಿಸಬೇಕೆಂದು ಕೆಲವು ಸದಸ್ಯರು ಸಚಿವರಿಗೆ ಸಲಹೆ ನೀಡಿದರು.
ಇನ್ನು ಮುಂದೆ ತಾವೇ ಖುದ್ದಾಗಿ ಕೈಗಾರಿಕೆ ಪ್ರದೇಶಗಳಿಗೆ, ಗಣಿಗಾರಿಕೆ ಪ್ರದೇಶಗಳಿಗೆ, ಔಷಧಿ ಉತ್ಪಾದನೆ ಹಾಗೂ ಇತರ ಉತ್ಪಾದನಾ ಕ್ಷೇತ್ರದ ವಲಯಗಳಿಗೆ ಭೇಟಿ ನೀಡಿ ಪರಿಸರ ಮಾಲಿನ್ಯದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಚಿವರ ಯೋಗೇಶ್ವರ ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ
ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕ | Thawarchand Gehlot | TV9Kannada
DCM Savadi Son Car accident ಮೃತನ ಕುಟುಂಬಸ್ಥರ ಆಕ್ರಂದನ, ಕಣ್ಣೀರಶಾಪ
(C P Yogeshwara says Greater authority for the Environmental Pollution Authority Experts to Prevent Environmental Pollution)