Illegal Mining Case: ಚುನಾವಣೆ ಹೊತ್ತಲ್ಲೇ ಜನಾರ್ದನ ರೆಡ್ಡಿಗೆ ಸಿಬಿಐ ಸಂಕಷ್ಟ; ನಾಲ್ಕು ದೇಶಗಳಿಂದ ಹಣದ ವಿವರ ಪಡೆಯಲು ಅನುಮತಿ

|

Updated on: Mar 09, 2023 | 11:18 PM

ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಕ ಜನಾರ್ದನ ರೆಡ್ಡಿ ಅವರು ವಿದೇಶಗಳಲ್ಲಿ ಹೂಡಿಕೆ ಮಾಡಿರುವ, ಠೇವಣಿ ಇಟ್ಟಿರುವ ಹಣದ ಬಗ್ಗೆ ಮಾಹಿತಿ ಸಂಗ್ರಹಿಸಲು ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ ಸಿಬಿಐಗೆ ಅನುಮತಿ ನೀಡಿದೆ.

Illegal Mining Case: ಚುನಾವಣೆ ಹೊತ್ತಲ್ಲೇ ಜನಾರ್ದನ ರೆಡ್ಡಿಗೆ ಸಿಬಿಐ ಸಂಕಷ್ಟ; ನಾಲ್ಕು ದೇಶಗಳಿಂದ ಹಣದ ವಿವರ ಪಡೆಯಲು ಅನುಮತಿ
ಜನಾರ್ದನ ರೆಡ್ಡಿ
Follow us on

ಬೆಂಗಳೂರು: ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಸ್ಥಾಪಕ ಜನಾರ್ದನ ರೆಡ್ಡಿ (Janardhana Reddy) ಅವರು ವಿದೇಶಗಳಲ್ಲಿ ಹೂಡಿಕೆ ಮಾಡಿರುವ ಅಥವಾ ಠೇವಣಿ ಇಟ್ಟಿರುವ ಹಣದ ಬಗ್ಗೆ ಮಾಹಿತಿ ಸಂಗ್ರಹಿಸಲು ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ ಸಿಬಿಐಗೆ (CBI) ಅನುಮತಿ ನೀಡಿದೆ. ಜನಾರ್ದನ ರೆಡ್ಡಿ ಅವರ ಹಣದ ವಿವರಗಳನ್ನು ನೀಡುವಂತೆ ಸ್ವಿಜರ್ಲೆಂಡ್, ಸಿಂಗಾಪುರ, ಐಲ್ ಆಫ್ ಮ್ಯಾನ್ ಮತ್ತು ಯುಎಇ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡುವಂತೆ ನ್ಯಾಯಾಲಯವು ಸಿಬಿಐಗೆ ನಿರ್ದೇಶನ ನೀಡಿದೆ. ಬಹುಕೋಟಿ ರೂಪಾಯಿ ಮೊತ್ತದ ಅಕ್ರಮ ಗಣಿಗಾರಿಕೆ (Illegal Mining Case) ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ. ಇದರೊಂದಿಗೆ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ರೆಡ್ಡಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸಿಬಿಐ ವಿಶೇಷ ನ್ಯಾಯಾಲಯದ ಸ್ಪೆಷಲ್ ಜಡ್ಜ್ ಚಂದ್ರಕಲಾ ಅವರು ಮಾರ್ಚ್​ 4ರಂದು ಆದೇಶ ನೀಡಿದ್ದು, ಸ್ವಿಜರ್ಲೆಂಡ್​​ನಲ್ಲಿ ಸಂಬಂಧಪಟ್ಟ ಆಡಳಿತದ ನ್ಯಾಯಾಂಗದ ನೆರವಿಗೆ ಕೋರಿ ಅಪರಾಧ ಸಂಹಿತೆಯ ಸೆಕ್ಷನ್ 166-ಎ ಅಡಿ ಸಲ್ಲಿಸಲಾಗಿರುವ ಅರ್ಜಿಯನ್ನು ಪುರಸ್ಕರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಆದೇಶದ ವಿಸ್ತೃತ ಪ್ರತಿಯನ್ನು ಸ್ವಿಜರ್ಲೆಂಡ್​ನ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಳುಹಿಸುವಂತೆ ಸಿಬಿಐಗೆ ಸೂಚಿಸಲಾಗಿದೆ. ಇದೇ ರೀತಿಯ ಆದೇಶವನ್ನು ಯುಎಇ, ಸಿಂಗಾಪುರ ಹಾಗೂ ಐಲ್ ಆಫ್ ಮ್ಯಾನ್​ನಲ್ಲಿರುವ ಜಿಎಲ್​ಎ ಟ್ರೇಡಿಂಗ್ ಇಂಟರ್​ನ್ಯಾಷನಲ್ ಪ್ರೈವೇಟ್ ಲಿಮಿಟೆಡ್​ಗೆ ಸಂಬಂಧಿಸಿ ನೀಡಲಾಗಿದೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ಜನಾರ್ದನ ರೆಡ್ಡಿ ಚುನಾವಣಾ ಪ್ರಚಾರ ಚುರುಕುಗೊಳಿಸಿರುವ ಸಂದರ್ಭದಲ್ಲೇ ಅವರ ವಿರುದ್ಧ ಸಿಬಿಐ ನ್ಯಾಯಾಲಯದ ಆದೇಶ ಬಂದಿದೆ.

ಗಾಲಿ ಜನಾರ್ದನ ರೆಡ್ಡಿ, ಜಿ ಲಕ್ಷ್ಮೀ ಅರುಣಾ, ಐಎಎಸ್​ ಅಧಿಕಾರಿ ಎಂಇ ಶಿವಲಿಂಗ ಮೂರ್ತಿ, ಐಎಫ್​ಎಸ್ ಅಧಿಕಾರಿ ಎಸ್​​ ಮುತ್ತಯ್ಯ, ಕೆ ಮೆಹ್​ಫುಜ್ ಅಲಿ ಖಾನ್, ಎಸ್​​ಪಿ ರಾಜು, ಮಹಶ್ ಎ ಪಾಟೀಲ್ ಹಾಗೂ ಮಾಜಿ ರೇಂಜರ್ ಅರಣ್ಯಾಧಿಕಾರಿ ಎಚ್​​ ರಾಮಮೂರ್ತಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಇದನ್ನೂ ಓದಿ: Janardhana Reddy: ಕಾಂಗ್ರೆಸ್​ಗೆ ಜನಾರ್ದನ ರೆಡ್ಡಿ ಟಕ್ಕರ್; ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬಕ್ಕೆ 2,500 ರೂ. ನೆರವು ಘೋಷಣೆ

ಸ್ವಿಟ್ಜರ್ಲೆಂಡ್‌ನಲ್ಲಿ ಜಿಎಲ್​ಎ ಟ್ರೇಡಿಂಗ್ ಇಂಟರ್​ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿವರಗಳು, ಸ್ವಿಸ್ ಬ್ಯಾಂಕ್‌ಗಳಲ್ಲಿನ ಕಂಪನಿಯ ಖಾತೆಯ ವಿವರಗಳು, ಮಾಲೀಕರ ವಿವರಗಳು, ಬ್ಯಾಂಕ್ ಖಾತೆಗಳು ಮತ್ತು ಕಂಪನಿಯೊಂದಿಗೆ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ಸಂಪರ್ಕದ ವಿವರಗಳನ್ನು ಕಲೆಹಾಕಲು ಸಿಬಿಐ ಮುಂದಾಗಿದೆ. ಕೋರ್ಟ್ ಆದೇಶದಲ್ಲಿಯೂ ಸಿಬಿಐ ಮನವಿಯನ್ನು ಉಲ್ಲೇಖಿಸಲಾಗಿದೆ ಎಂದು ‘ನ್ಯೂಸ್9’ ವರದಿ ಮಾಡಿದೆ.

ರೆಡ್ಡಿ ಅವರು 2009-10ರ ಅವಧಿಯಲ್ಲಿ ಅಕ್ರಮವಾಗಿ 7 ರಿಂದ 8 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಕಬ್ಬಿಣದ ಅದಿರು ವಹಿವಾಟು ನಡೆಸಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದ ಸಿಬಿಐ, ಈ ವಹಿವಾಟಿನಲ್ಲಿ ದೊರೆತ ಮೊತ್ತದ ಬಹುಭಾಗವನ್ನು ಆರೋಪಿಯೊಬ್ಬ ವಿವಿಧ ದೇಶಗಳಲ್ಲಿ ಹೂಡಿಕೆ ಮಾಡಿರುವ ಅಥವಾ ಠೇವಣಿ ಇಟ್ಟಿರುವ ಶಂಕೆ ಇದೆ ಎಂದು ಉಲ್ಲೇಖಿಸಿತ್ತು.

ಸಿಬಿಐಗೆಲ್ಲ ಹೆದರಲ್ಲ ಎಂದ ರೆಡ್ಡಿ

ವಿದೇಶದಲ್ಲಿ ಆಸ್ತಿ ಮುಟ್ಟುಗೋಲು ಸಂಬಂಧ ನೋಟಿಸ್ ಬಂದಿಲ್ಲ. ವಿದೇಶದಲ್ಲಿ ನನ್ನದು ಹಣ ಇದ್ದರೆ ‌ತರಲಿ, ನಾನೇ ಹಂಚುತ್ತೇನೆ. ಸಾರಿಗೆ ಸಚಿವ ಬಿ.ಶ್ರೀರಾಮುಲು ಈಗಲೂ ನನ್ನ ಆಪ್ತ ಸ್ನೇಹಿತ. ನಮ್ಮ ಸ್ನೇಹದಲ್ಲಿ ಎಳ್ಳಷ್ಟೂ ಬದಲಾವಣೆ ಇಲ್ಲ. ಸಿಬಿಐ ಶಾಕ್‌ಗಳಿಗೆ ನಾನು ಹೆದರುವುದಿಲ್ಲ. ನನ್ನಿಂದಲೇ ಬೇರೆಯವರಿಗೆ ಶಾಕ್ ಹೊಡೆಯಲಿದೆ ಎಂದು ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಹನ್ನೆರಡು ವರ್ಷಗಳಿಂದ ಸಿಬಿಐ ಶಾಕ್ ನೋಡಿದ್ದೇನೆ. ನನಗೆ ಜನ ಬೆಂಬಲ ಸಿಗುತ್ತಿರುವುದನ್ನು ನೋಡಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಸಿಬಿಐ ಸೇರಿದಂತೆ ಯಾವುದಕ್ಕೂ ನಾನು ಹೆದರುವುದಿಲ್ಲ, ತಲೆಬಾಗುವುದಿಲ್ಲ. ಹುಲಿ‌ ಕಾಡಲ್ಲಿದ್ದರೂ ಒಂದೇ, ಜೈಲಲ್ಲಿದ್ದರೂ ಒಂದೇ ಎಂದು ಹೇಳಿದ್ದಾರೆ.

ಬುಧವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ರೆಡ್ಡಿ

ಬುಧವಾರವಷ್ಟೇ ಕೊಪ್ಪಳದ ಕನಕಗಿರಿಯಲ್ಲಿ ‘ಚೆನ್ನಮ್ಮ ಅಭಯಹಸ್ತ’ ಎಂಬ ಹೆಸರಿನಲ್ಲಿ ವಿಧಾನಸಭಾ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ರೆಡ್ಡಿ, ಪ್ರತಿ ಕುಟುಂಬಕ್ಕೆ 2,500 ರೂ. ಆರ್ಥಿಕ ನೆರವು ಹಾಗೂ ಸ್ತ್ರೀ ಶಕ್ತಿ ಗುಂಪಿಗೆ ಬಡ್ಡಿ ರಹಿತ 10 ಲಕ್ಷ ರೂ. ಸಾಲ ಸೇರಿದಂತೆ ಅನೇಕ ಘೋಷಣೆಗಳನ್ನು ಮಾಡಿದ್ದರು. ಆ ಮೂಲಕ ಚುನಾವಣಾ ಪ್ರಚಾರ ತೀವ್ರಗೊಳಿಸಿದ್ದರು.

ಜನಾರ್ದನ ರೆಡ್ಡಿ ಟೆಂಪಲ್ ರನ್

ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿರುವ ಜನಾರ್ದನ ರೆಡ್ಡಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡಕ್ಕೆ ಗುರುವಾರ ಭೇಟಿ ನೀಡಿ, ಉತ್ತರಾದಿ ಮಠದ ಜಯತೀರ್ಥರ ಬೃಂದಾವನಕ್ಕೆ ಪೂಜೆ ಸಲ್ಲಿಸಿದರು. ಸೇಡಂ ಪಟ್ಟಣದ ಸಮಾವೇಶಕ್ಕೂ ಮುನ್ನ ಉತ್ತರಾಧಿ ಮಠಕ್ಕೆ ಭೇಟಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Thu, 9 March 23