2020 ಬಜೆಟ್ ಮಂಡಿಸಲು ಬಿಎಸ್​ವೈಗೆ ಎದುರಾಗಿವೆ ಸವಾಲುಗಳು!

|

Updated on: Mar 05, 2020 | 9:29 AM

ಬೆಂಗಳೂರು: ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಬಜೆಟ್ ಮಂಡಿಸುತ್ತಿರುವ ಯಡಿಯೂರಪ್ಪ ಅವರ ಬಜೆಟ್ ಹಾದಿ ಅಷ್ಟು ಸಲೀಸಾಗಿಲ್ಲ. ಯಾಕೆಂದರೆ ಈ ಬಾರಿ ಬಜೆಟ್ ಮಂಡನೆ ಸಮಯದಲ್ಲಿ ಸಿಎಂ ಎದುರಿಸುತ್ತಿರುವ ಸವಾಲೇ ಬೇರೆ. ಸಿಎಂ ಬಿಎಸ್​ವೈ ಹಲವು ಅಗ್ನಿ ಪರೀಕ್ಷೆಗಳನ್ನ ಗೆದ್ದು ಸರ್ಕಾರ ಸುಭದ್ರ ಮಾಡಿಕೊಂಡಿದ್ದಾರೆ. ಆದ್ರೀಗ, ಅವ್ರಿಗೆ ಮತ್ತೊಂದು ಸವಾಲು ಎದುರಾಗಿದೆ. ಆದೇ, ಬಜೆಟ್ 2020-21.. ಈ ಹಿಂದೆ ಹಲವು ಬಾರಿ ಬಜೆಟ್ ಮಂಡಿಸಿದ್ದರೂ ಸಹ, ಈ ಬಾರಿಯ ಬಜೆಟ್ ಮತ್ತಷ್ಟು ಕಂಗ್ಗಂಟಾಗಿದೆ. […]

2020 ಬಜೆಟ್ ಮಂಡಿಸಲು ಬಿಎಸ್​ವೈಗೆ ಎದುರಾಗಿವೆ ಸವಾಲುಗಳು!
Follow us on

ಬೆಂಗಳೂರು: ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಬಜೆಟ್ ಮಂಡಿಸುತ್ತಿರುವ ಯಡಿಯೂರಪ್ಪ ಅವರ ಬಜೆಟ್ ಹಾದಿ ಅಷ್ಟು ಸಲೀಸಾಗಿಲ್ಲ. ಯಾಕೆಂದರೆ ಈ ಬಾರಿ ಬಜೆಟ್ ಮಂಡನೆ ಸಮಯದಲ್ಲಿ ಸಿಎಂ ಎದುರಿಸುತ್ತಿರುವ ಸವಾಲೇ ಬೇರೆ.

ಸಿಎಂ ಬಿಎಸ್​ವೈ ಹಲವು ಅಗ್ನಿ ಪರೀಕ್ಷೆಗಳನ್ನ ಗೆದ್ದು ಸರ್ಕಾರ ಸುಭದ್ರ ಮಾಡಿಕೊಂಡಿದ್ದಾರೆ. ಆದ್ರೀಗ, ಅವ್ರಿಗೆ ಮತ್ತೊಂದು ಸವಾಲು ಎದುರಾಗಿದೆ. ಆದೇ, ಬಜೆಟ್ 2020-21.. ಈ ಹಿಂದೆ ಹಲವು ಬಾರಿ ಬಜೆಟ್ ಮಂಡಿಸಿದ್ದರೂ ಸಹ, ಈ ಬಾರಿಯ ಬಜೆಟ್ ಮತ್ತಷ್ಟು ಕಂಗ್ಗಂಟಾಗಿದೆ.

ಸುಗಮವಾಗಿಲ್ಲ ಸಿಎಂ ಬಿಎಸ್​ವೈ ಬಜೆಟ್ ಹಾದಿ!
ಸಿಎಂ ಬಿಎಸ್​ವೈ ಸಿಎಂ ಆದ ಬಳಿಕ ಇಂದು ಮೊದಲ ಮುಂಗಡ ಪತ್ರವನ್ನ ಮಂಡಿಸಲಿದ್ದಾರೆ. ಆದ್ರೆ, ಈ ಹಿಂದೆ ಮಂಡಿಸಿದಷ್ಟು ಸುಲಭವಾದ ವಾತಾವರಣ ಈಗಿಲ್ಲ. ಎಷ್ಟರ ಮಟ್ಟಿಗೆ ಅಂದ್ರೆ, ಬಜೆಟ್ ಗಾತ್ರವನ್ನೇ ಹೆಚ್ಚಳ ಮಾಡದಂತೆ ತೀವ್ರವಾದ ಒತ್ತಡ ಸಿಎಂ ಅವ್ರ ಇನ್ನಿಲ್ಲದಂತೆ ಕಾಡ್ತಿದೆ.

ಯಾಕಂದ್ರೆ, ಬಜೆಟ್ ಗಾತ್ರ ಹೆಚ್ಚಿಸದಂತೆ ಸಿಎಂ ಬಿಎಸ್​ವೈ ಮೇಲೆ ಒತ್ತಡ ಇದೆ. ಸಂಪನ್ಮೂಲ ಕ್ರೋಡೀಕರಣವೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹಾಗಾದ್ರೆ, ಬಜೆಟ್ ಮಂಡನೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಎದುರಿಸುತ್ತಿರೋ ಚಾಲೆಂಜ್​ಗಳೇನು ಅಂತಾ ನೋಡೋದಾದ್ರೆ.

ಆರ್ಥಿಕ ಸಂಪನ್ಮೂಲ ಸರಿದೂಗಿಸಬೇಕಾದ ಸವಾಲು!
ಸರ್ಕಾರದ ಪ್ರಮುಖ ಆದಾಯವಾಗಿರೋ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಪ್ರಗರಿ ಕಾಣದಿರೋದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಸಂಪನ್ಮೂಲ ಇಲ್ಲದೇ ಹೊಸ ಯೋಜನೆ ಘೋಷಣೆ ಮಾಡೋದು ಕಷ್ಟ ಸಾಧ್ಯ. ಅಲ್ಲದೇ ಒಂದು ವೇಳೆ ಘೋಷಿಸಿದರೂ ಆದಾಯದ ಮೂಲವನ್ನ ತೋರಿಸುವುದು ಮತ್ತೊಂದು ತಲೆನೋವಾಗುತ್ತೆ. ಹೀಗಾಗಿ, ಆರ್ಥಿಕ ಸಂಪನ್ಮೂಲ ಸರಿದೂಗಿಸಬೇಕಾದ ಆತಂಕ ಮತ್ತು ಒತ್ತಡ ಸಿಎಂ ಮುಂದಿದೆ.

ಜನರಿಗಿರುವ ನಿರೀಕ್ಷೆ ಪೂರೈಸುವ ಆತಂಕ:
ಅಭಿವೃದ್ಧಿ ಮಂತ್ರ ಜಪಿಸುತ್ತಲೇ, ಸರ್ಕಾರದ ಕೊಡುಗೆಗಳ‌ ಬಗ್ಗೆ ಜನರಿಗಿರುವ ನಿರೀಕ್ಷೆ ಪೂರೈಸೋ ಸವಾಲೂ ಕೂಡ ಇದೆ. ಯಾಕಂದ್ರೆ, ಆರ್ಥಿಕ ಪರಿಸ್ಥಿತಿ ಸವಾಲಾಗಿದ್ದ ವೇಳೆಯಲ್ಲಿ ಅಧಿಕಾರಕ್ಕೆ ಬಂದ ಬಿಎಸ್​ವೈ, ಚುನಾವಣಾ ಸಮಯದಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನ ಎಷ್ಟರ ಮಟ್ಟಿಗೆ ಪೂರೈಸ್ತಾರೆ ಅನ್ನೋ ಪ್ರಶ್ನೆಯೂ ಎದ್ದಿದೆ.

ಶಾಸಕರನ್ನ ಸಮಾಧಾನ ಪಡಿಸುವುದೇ ಸವಾಲು!
ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಶಾಸಕರು ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಪಡೆದಿಲ್ಲ. ಬಿಎಸ್​ವೈ ಭೇಟಿ ಮಾಡಿದ ವೇಳೆಯಲ್ಲೂ ಈ ಶಾಸಕರಿಗೆ ಸಮಾಧಾನವಾಗುವಷ್ಟು ಅನುದಾನ ಸಿಕ್ಕಿಲ್ಲ.‌ ಹೀಗಾಗಿ, ಬಜೆಟ್​ನಲ್ಲಿ ಒಂದಷ್ಟು ಘೋಷಣೆಗಳನ್ನ ಆಡಳಿತ ಪಕ್ಷದ ಶಾಸಕರು ನಿರೀಕ್ಷಿಸುತ್ತಿದ್ದಾರೆ‌. ಹೀಗಾಗಿ, ಕಳೆದ ಒಂದು ವರ್ಷದಿಂದ ಅನುದಾನದ ಕೊರತೆ ಎದುರಿಸಿದ ಶಾಸಕರನ್ನ ಸಮಾಧಾನ ಪಡಿಸುವುದೇ ಚಾಲೆಂಜ್ ಆಗಿದೆ.

ನೆರೆ ಸಂತ್ರಸ್ತರ ಆಕ್ರೋಶಕ್ಕೆ ಗುರಿಯಾಗುವ ಭಯ:
ಉತ್ತರ ಕರ್ನಾಟಕ ಭಾಗದ ನೆರೆ ಸಮಸ್ಯೆಯನ್ನ ತಕ್ಕಮಟ್ಟಿಗೆ ನಿಭಾಯಿಸಿರುವ ಸರ್ಕಾರಕ್ಕೆ, ಪೂರ್ಣ ಪ್ರಮಾಣದಲ್ಲಿ ಸಂತೈಸಲು ಸಾಧ್ಯವಾಗಿಲ್ಲ.‌ ಸಾಲದ್ದಕ್ಕೆ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ನಿರೀಕ್ಷಿತ ನೆರವು ಸಿಕ್ಕಿಲ್ಲ ಎಂಬ ಅಸಮಾಧಾನವಿದೆ. ಈ ಬಜೆಟ್​ನಲ್ಲಿ ನೆರೆ ಸಮಸ್ಯೆಗೆ ಅನುದಾನ ಘೋಷಣೆಯಾಗದಿದ್ದಲ್ಲಿ, ಅತಿ ಹೆಚ್ಚು ಸ್ಥಾನ ಗೆಲ್ಲಿಸಿಕೊಟ್ಟ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ‌ ಆಕ್ರೋಶಕ್ಕೆ ಗುರಿಯಾಗುವ ಭಯ ಸರ್ಕಾರವನ್ನ ಕಾಡ್ತಿದೆ.

ಹೊರೆಯಾಗಿರುವ ಯೋಜನೆ ಮುಂದುವರಿಸುವ ಸಂಕಷ್ಟ:
ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಕೆಲ ಯೋಜನೆಗಳ ವಿಚಾರದಲ್ಲಿ ಮರು ಚಿಂತನೆಯ ಹಂತಕ್ಕೆ ಹೋಗಿದೆ. ತಕ್ಷಣಕ್ಕೆ ಅವುಗಳನ್ನು ಕೈಬಿಟ್ಟಲ್ಲಿ ವಿರೋಧ ಎದುರಿಸಬೇಕಾದ ಸನ್ನಿವೇಶವೂ ಸೃಷ್ಟಿಯಾಗಿಬಿಡುತ್ತದೆ. ಸಾಲಮನ್ನಾ, ಮಠ ಮಾನ್ಯಗಳಿಗೆ ಸಹಾಯ ಮುಂತಾದ ವಿಚಾರದಲ್ಲಿ ಸಂದಿಗ್ಧತೆಗೆ ಸಿಎಂ ಬಿದ್ದಿದ್ದಾರೆ‌‌.

ಕೇಂದ್ರದ ಅನುದಾನ ನಂಬಿಕೊಳ್ಳುವಂತಿಲ್ಲ:
ಇನ್ನು ಈ ಬಾರಿ ಕೇಂದ್ರ ಸರ್ಕಾರದ ಅನುದಾನವನ್ನ ನಂಬಿಕೊಂಡು ಹೊಸ ಘೋಷಣೆ ಮಾಡುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿಲ್ಲ.‌ ಹಾಗಾಗಿ, ಕೇಂದ್ರದ ಅನುದಾನವನ್ನ ನಂಬಿ ಯೋಜನೆ ಪ್ರಕಟಿಸುವ ಸಾಧ್ಯತೆ ಕಡಿಮೆ ಇದೆ.‌

ಪಕ್ಷದಿಂದ ಬಂದಿರುವ ಸಲಹೆಗೆ ಮನ್ನಣೆ ಸಾಧ್ಯವೇ?
ಬಜೆಟ್ ಪೂರ್ವಭಾವಿಯಾಗಿ ಸಿಎಂ ಯಡಿಯೂರಪ್ಪ ಹಲವು ಸಂಘ ಸಂಸ್ಥೆಗಳೊಡನೆ ಚರ್ಚೆ ನಡೆಸಿದ್ದಾರೆ. ಅದನ್ನ ಹೊರತಾಗಿ ಆಡಳಿತ ಪಕ್ಷವಾಗಿರುವ ಬಿಜೆಪಿಯಿಂದಲೂ ಸಿಎಂಗೆ ಒಂದಷ್ಟು ಸಲಹೆಗಳು ವ್ಯಕ್ತವಾಗಿವೆ. ಎಲ್ಲವನ್ನೂ ಸರಿದೂಗಿಸಬೇಕಿರುವ ಕಾರಣ ಪಕ್ಷ, ಸಂಘ ಸಂಸ್ಥೆಗಳು ಕೊಟ್ಟ ‌ಸಲಹೆ ಮಾನ್ಯ ಮಾಡಲು ಸಾಧ್ಯವೇ ಅನ್ನೋದೂ ಚಾಲೆಂಜಿಂಗ್.

ಹಣಕಾಸು ಪ್ರಗತಿಯ ಮುನ್ಸೂಚನೆ ಇಲ್ಲ!
ಮುಂದಿನ ಆರ್ಥಿಕ‌ ವರ್ಷದಲ್ಲಿ ಹಣಕಾಸಿನ‌ ಪ್ರಗತಿಯ ಮುನ್ಸೂಚನೆ ಸಿಗದೇ ಇರೋದು, ಬಜೆಟ್ ಮಂಡನೆಯ ಸಮಯದಲ್ಲಿ ಸಿಎಂ ಆತಂಕಕ್ಕೆ ಕಾರಣವಾಗಿದೆ.‌ ಯಾಕಂದ್ರೆ, ಹಣಕಾಸು ಪ್ರಗತಿ ಮುನ್ಸೂಚನೆ ಇದ್ದಲ್ಲಿ ಹೊಸ ಘೋಷಣೆ ಮಾಡುವ ಧೈರ್ಯ ತೋರಬಹುದು.‌ ಆದ್ರೆ, ಆರ್ಥಿಕ ಇಲಾಖೆ ಅಂಥಾ ಯಾವುದೇ ಭರವಸೆ ವ್ಯಕ್ತಪಡಿಸಿಲ್ಲ.

ಆದಾಯದ ಮೂಲಗಳಲ್ಲಿ ಖೋತಾ:
ವಾಸ್ತವವಾಗಿ ಸರ್ಕಾರದ ಆದಾಯದ ಪ್ರಮುಖ‌ ಮೂಲವಾಗಿದ್ದ ಸಾರಿಗೆ, ನೋಂದಣಿ, ವಾಣಿಜ್ಯ ತೆರಿಗೆ ಮತ್ತು‌ ಮುದ್ರಾಂಕದಲ್ಲಿನ‌ ತೆರಿಗೆಯಲ್ಲಿ‌ ನಿರೀಕ್ಷಿತ ಜಿಗಿತ ಆಗಿಲ್ಲ.‌ ಹಾಗಾಗಿ, ನಿರೀಕ್ಷಿತ ಮಟ್ಟ ತಲುಪದ ಕಾರಣ, ಹೊಸ ಘೋಷಣೆಗಳಿಗೆ ಬ್ರೇಕ್ ಹಾಕಿದಂತಾಗಿದೆ.

ಚುನಾವಣಾ ಪ್ರಣಾಳಿಕೆ ಈಡೇರಿಸಬೇಕಾದ ಅನಿವಾರ್ಯತೆ:
ಚುನಾವಣೆ ನಡೆದು ಒಂದೂವರೆ ವರ್ಷದ ಬಳಿಕ ಅಧಿಕಾರ ಹಿಡಿದಿರುವ ಕಾರಣ ಹಿಂದಿನ ಸರ್ಕಾರದಂತೆ ಚುನಾವಣಾ ಪ್ರಣಾಳಿಕೆ ಜಾರಿ ಮಾಡಲು ಆಗಿಲ್ಲ. ಹೀಗಾಗಿ, ಪ್ರಣಾಳಿಕೆಯನ್ನೂ ಈಡೇರಿಸಬೇಕಾದ ಅನಿವಾರ್ಯತೆ ಮುಖ್ಯಮಂತ್ರಿಗಳ ಮುಂದಿದೆ.

ಒಟ್ಟಾರೆ, ಇಂದು ಬಜೆಟ್ ಮಂಡಿಸುತ್ತಿರುವ ಸಿಎಂ ಆರ್ಥಿಕ ಶಿಸ್ತು ಕಾಪಾಡಬೇಕಾದ ಮಹತ್ತರ ಸವಾಲು ಎದುರಿಸುತ್ತಿದ್ದಾರೆ. ಒಂದೆಡೆ ಬಜೆಟ್ ಗಾತ್ರ ಎತ್ತರಿಸದಂತೆ, ಇರುವ ಸಂಪನ್ಮೂಲದಲ್ಲೇ ಎಲ್ಲವನ್ನೂ ಬ್ಯಾಲೆನ್ಸ್ ಮಾಡಬೇಕಾದ ಅನಿವಾರ್ಯತೆಯನ್ನು ಸಿಎಂ ನಿಭಾಯಿಸಬೇಕಿದೆ. ಈ ಸವಾಲುಗಳನ್ನೆಲ್ಲಾ ಸಿಎಂ ಬಿಎಸ್​ವೈ ಹೇಗೆ ನಿಭಾಯಿಸಲಿದ್ದಾರೆ ನೋಡಬೇಕಿದೆ.

Published On - 9:28 am, Thu, 5 March 20