ಚಾಮರಾಜನಗರ: ಇರೋಕೆ ಸರಿಯಾದ ಸೂರಿಲ್ಲ ಮನೆಗಳು ಕುಸಿದು ಬೀಳುತ್ತಿವೆ. ಬದುಕಿಗೆ ಆಸರೆಯೇ ಇಲ್ಲದಂತಾಗಿದೆ. ರಸ್ತೆಯಲ್ಲೇ ವಾಸ ದುಸ್ಥಿತಿ. ಮಳೆ ಬಂದ್ರಂತೂ ಕಥೆ ಮುಗಿದೇ ಹೋಯ್ತು. ನೀರಲ್ಲೇ ದಿನ ದೂಡ್ಬೇಕು. ಹೀಗೆ ಇವರ ಬದುಕು ಬೀದಿಗೆ ಬೀಳೋಕೆ ಕಾರಣವೇ ಸರ್ಕಾರ.
ಅಂದ್ಹಾಗೆ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಬೈಲೂರು ಗ್ರಾ.ಪಂ.ವ್ಯಾಪ್ತಿಯ ಅರೆಕಡುವಿನದೊಡ್ಡಿ ಮತ್ತು ಕಂಬಿಗದ್ದೆದೊಡ್ಡಿ ಗ್ರಾಮದ 40 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರದಿಂದ ಮನೆ ಮಂಜೂರಾಗಿದ್ವು. ವಸತಿ ರಹಿತರಿಗೆ ಮನೆ ಕೊಡುವುದಾಗಿ ಗ್ರಾಮಪಂಚಾಯ್ತಿ ಸದಸ್ಯರು ಮತ್ತು ಅಧಿಕಾರಿಗಳು ಮನೆ ನೀಡುವುದಾಗಿ ಹೇಳಿದ್ರು.
ಈ ಮಾತು ನಂಬಿದ ಸೋಲಿಗರು ತಮ್ಮ ಹಳೇ ಮನೆಯನ್ನ ಕೆಡವಿ ಹೊಸ ಮನೆ ನಿರ್ಮಾಣಕ್ಕೆ ರೆಡಿಯಾಗಿದ್ರು. ಹೀಗಾಗಿ, ಕೆಲವು ಮನೆಗಳು ತಳಪಾಯದಲ್ಲಿದ್ರೆ, ಕೆಲವು ಮನೆಗಳು ಅರ್ಧಂಬರ್ಧ ಗೋಡೆ ನಿರ್ಮಾಣವಾಗಿವೆ. ಆದ್ರೆ, ಕಳೆದ 10 ತಿಂಗಳಿಂದ ಈ ಮನೆಗಳಿಗೆ ಬಿಲ್ಲೇ ಆಗಿಲ್ಲ. ಇದ್ರಿಂದಾಗಿ ಇವರ ಬದುಕು ಅತಂತ್ರವಾಗಿದೆ. ಸಂಬಂಧಿಕರ ಮನೆ, ಅಥವಾ ಬಾಡಿಗೆ ಮನೆಯಲ್ಲೇ ವಾಸಿಸುವಂಥಾ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗ್ತಿರುವ ಸುಮಾರು 100ಕ್ಕೂ ಹೆಚ್ಚು ಮನೆಗಳದ್ದೂ ಇದೇ ಪರಿಸ್ಥಿತಿ. ಸೋಲಿಗರ ಕೈಗೆ ವರ್ಕ್ ಕಾರ್ಡ್ ನೀಡದ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ತಮಗೆ ಬೇಕಾದ ಗುತ್ತಿಗೆದಾರರಿಂದ ಮನೆ ಕಟ್ಟಿಸುತ್ತಿದ್ದಾರೆ. ಕೆಲವು ಮನೆಗಳಿಗೆ ಕಟ್ಟಡ ಬಿಲ್ ಆಗಿದ್ರೆ, ಕೆಲವು ಮನೆಗಳಿಗೆ ಗೋಡೆಯ ಬಿಲ್ ಆಗಿವೆ.
ಈ ಎಲ್ಲ ಬಿಲ್ಗಳು ಕಳೆದ 10 ತಿಂಗಳ ಹಿಂದೆ ಆಗಿವೆ. ಸರ್ಕಾರದಲ್ಲಿ ಅನುದಾನದ ಕೊರತೆಯೋ ಇಲ್ಲ ಅಧಿಕಾರಿಗಳ ಎಡವಟ್ಟೋ ಗೊತ್ತಿಲ್ಲ. ಸೋಲಿಗರು ಮನೆ ಇಲ್ಲದೇ ಪರಿತಪಿಸುತ್ತಿದ್ದಾರೆ. ಅನುದಾನ ಬಿಡುಗಡೆಯಾಗದೆ ಇರೋದ್ರಿಂದ ಸೋಲಿಗರ ಬದುಕೇ ಬೀದಿಗೆ ಬಿದ್ದಿದೆ.
ಒಂದ್ಕಡೆ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ವಿಳಂಬಯಾಗುತ್ತಿದ್ರೆ, ಮತ್ತೊಂದು ಕಡೆ ಮನೆಗಳ ನಿರ್ಮಾಣ ಕಳಪೆ ಗುಣಮಟ್ಟದಿಂದ ಕೂಡಿವೆ ಅನ್ನೋ ಆರೋಪ ಕೇಳಿ ಬಂದಿದೆ. ಇನ್ಮುಂದಾದ್ರೂ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಇವರ ಬದುಕಿಗೆ ಬೆಳಕಾಗ್ಬೇಕಿದೆ.
Published On - 10:35 am, Mon, 17 February 20