ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೈಮಹದೇಶ್ವರ ಬೆಟ್ಟವು ರಾಜ್ಯದ ಎರಡನೇ ಶ್ರೀಮಂತ ದೇವಾಲಯವಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯದ ಲಕ್ಷಾಂತರ ಜನ ಭಕ್ತರಿದ್ದಾರೆ. ದೇವಾಲಯದಲ್ಲಿ ಈಗಾಗಲೇ ಮಾದಪ್ಪನಿಗೆ ಚಿನ್ನದ ರಥದ ಸೇವೆ ಮಾಡಲಾಗುತ್ತಿತ್ತು. ಅದೇ ರೀತಿ ಬೆಳ್ಳಿ ರಥ ಸೇವೆಯನ್ನು ಮಾಡಬೇಕು ಎಂಬುದು ಹಲವು ವರ್ಷಗಳಿಂದ ಭಕ್ತರ ಬೇಡಿಕೆಯಾಗಿದ್ದು ಇದೀಗ ಅದು ನೆರವೇರಿದೆ. ಸುಮಾರು 530 ಕೆ.ಜಿ ತೂಕದ ಬೆಳ್ಳಿಯನ್ನ ಬಳಸಿ ಬೆಳ್ಳಿ ರಥ ನಿರ್ಮಾಣವಾಗಿದ್ದು ಎಲ್ಲವು ಅಂದುಕೊಂಡಂತೆ ಆದರೆ ಇದೇ ತಿಂಗಳ 15 ರಂದು ಬೆಳ್ಳಿ ರಥ ಮಾಡುತ್ತಿರುವ ಶಿಲ್ಪಿಗಳು ದೇವಾಲಯಕ್ಕೆ ರಥವನ್ನು ಹಸ್ತಾಂತರ ಮಾಡಲಿದ್ದಾರೆ.
ಇನ್ನು ಬೆಳ್ಳಿ ರಥ ನಿರ್ಮಾಣ ಮಾಡಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಪ್ರಾಧಿಕಾರದ ಸಭೆ ನಡೆಸಿ ಇದಕ್ಕೆ ಬೇಕಾದ ಬೆಳ್ಳಿಯನ್ನ ಇಟ್ಟುಕೊಳ್ಳಲು ಅಂದೇ ತೀರ್ಮಾನ ಮಾಡಲಾಗಿತ್ತು. ಅದಷ್ಟೇ ಅಲ್ಲದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂಧರ್ಭದಲ್ಲಿ ಅವರಿಗೆ ಬಂದ ಬೆಳ್ಳಿಯ ಗಿಫ್ಟ್ಗಳನ್ನು ರಥಕ್ಕೆ ಕೊಡುವುದಾಗಿಯು ತಿಳಿಸಿದ್ದರು. ಕಳೆದ ಒಂದು ವರ್ಷಗಳಿಂದ ಬೆಳ್ಳಿ ರಥ ನಿರ್ಮಾಣದ ಕೆಲಸವನ್ನ ಶಿಲ್ಪಿಗಳು ದೇವಾಲಯದ ಆವರಣದಲ್ಲೆ ಮಾಡುತ್ತಿದ್ದಾರೆ. ಸದ್ಯ ಈ ಬೆಳ್ಳಿ ರಥಕ್ಕೆ ಬೇಕಾದ ಬೆಳ್ಳಿಯನ್ನ ಭಕ್ತರೆ ನೀಡಿದ್ದಾರೆ. ಹುಂಡಿಗೆ ಕಾಣಿಕೆ ರೂಪದಲ್ಲಿ ಬರುವ ಬೆಳ್ಳಿಯನ್ನು ಬಳಸಿಕೊಂಡು ರಥ ನಿರ್ಮಾಣ ಮಾಡಲಾಗಿದೆಯಂತೆ. ಅಷ್ಟೆ ಅಲ್ಲದೆ ಶಿಲ್ಪಿಗಳಿಗೆ ಸುಮಾರು 20 ಲಕ್ಷ ಹಣ ಕೊಡಬೇಕಿದ್ದು, ಅದನ್ನು ಸಹ ದೇವಾಲಯದ ಭಕ್ತರೆ ಬರಿಸಿದ್ದಾರಂತೆ.
ಒಟ್ಟಾರೆ ಬೆಳ್ಳಿ ರಥದ ಕೆಲಸ ಶೇ.99 ರಷ್ಟು ಮುಕ್ತಾಯವಾಗಿದ್ದು, ಮಲೈ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಚಿನ್ನದ ರಥದ ಸೇವೆ ಮಾದರಿಯಲ್ಲಿ ಬೆಳಗ್ಗಿನ ವೇಳೆ ಬೆಳ್ಳಿ ರಥದ ಸೇವೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ