ಇನ್ನೇನು ಜನವರಿ 22 ಕ್ಕೆ ಕೇವಲ ಬೆರಳೆಣಿಕೆ ದಿನ ಮಾತ್ರ ಬಾಕಿಯಿದೆ. ದೇಶದೆಲ್ಲೆಡೆ ರಾಮನ ಜಪ ಉಚ್ಛ್ರಾಯ ಸ್ಥಿತಿ ತಲುಪಿದೆ. ಐತಿಹಾಸಿಕ ದಿನವನ್ನ ಕಣ್ತುಂಬಿಕೊಳ್ಳಲು ದೇಶದ ಜನ ಕಾತುರದಿಂದ ಕಾಯುತ್ತಿದ್ರೆ ಇತ್ತ ಗಡಿ ನಾಡಲ್ಲಿ ಬಂಧಿಖಾನೆಯಲ್ಲಿ ಅಯೋಧ್ಯೆ ಮಂತ್ರಾಕ್ಷತೆ, ರಾಮನ ಹೊತ್ತಿಗೆ ಹಾಗೂ ತುಳಸಿ ಮಾಲೆ ನೀಡಿ ಕೈದಿಗಳಿಗೆ ರಾಮ ಜಪ ಮಾಡಿಸಲಾಯ್ತು. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕೈಯಲ್ಲಿ ತುಳಸಿ ಮಾಲೆ, ರಾಮನ ಪುಸ್ತಕ ಹಾಗೂ ಮಂತ್ರಾಕ್ಷತೆ ಹಿಡಿದು ಪದ್ಮಾಸನ ಕುಳಿತ ಕೈದಿಗಳು.. ಮತ್ತೊಂದೆಡೆ ರಾಮನ ಜಪ ಮಾಡುತ್ತ ತನ್ಮಯವಾಗಿರುವ ಅಧಿಕಾರಿಗಳು.. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರದ ಬಂಧಿಖಾನೆಯಲ್ಲಿ.
ಹೌದು ನ್ಯಾಯಾಧೀಶರಾದ ಶ್ರೀಧರ್ ನೇತೃತ್ವದಲ್ಲಿ ಜನಾರ್ದನ ದೇವಾಲಯದ ಮುಖ್ಯ ಅರ್ಚಕರಾದ ಅನಂತ್ ಪ್ರಸಾದ್ ಹಾಗೂ ಕಾನೂನು ಪ್ರಾಧಿಕಾರದ ಕಾರ್ಯದರ್ಶಿ ಇಂದು ವಿಚಾರಣಧೀನ ಕೈದಿಗಳಿಗೆ ಅಯೋಧ್ಯೆ ಮಂತ್ರಾಕ್ಷತೆ, ರಾಮನ ಪುಸ್ತಕ ಹಾಗೂ ತುಳಸಿ ಮಾಲೆ ನೀಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದ್ರು.
ಹೊರಗಿನವರಿಗೆ ರಾಮನ ಪ್ರಾಣ ಪ್ರತಿಷ್ಠಾಪನೆ ನೋಡುವ ಭಾಗ್ಯ ದೊರೆಯಲಿದೆ. ಜೊತೆಗೆ ಮಂತ್ರಾಕ್ಷತೆ ಸಹ ಸಿಗಲಿದೆ, ಆದ್ರೆ ಒಂದಲ್ಲಾ ಒಂದು ಕಾರಣಕ್ಕೆ ತಪ್ಪು ಮಾಡಿ ಜೈಲು ಸೇರಿರುವ ಇವರಿಗೆ ಈ ತರಹದ ಅವಕಾಶಗಳು ಇರುವುದಿಲ್ಲ. ಹಾಗಾಗಿ ಇಂತಹವರಿಗೂ ಈ ಭಾಗ್ಯ ತಪ್ಪದೆ ಸಿಗಲಿ ಹಾಗೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಪಡೆದು ಜೈಲಿನಿಂದ ಆಚೆ ಬಂದ ಬಳಿಕ ಸನ್ಮಾರ್ಗದಲ್ಲಿ ನಡೆಯಲಿ, ರಾಮನ ಗುಣಗಳನ್ನ ಅನುಸರಿಸಲಿ ಎಂದು ಈ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಯ್ತು. ಇನ್ನು ತುಳಸಿ ಮಾಲೆ, ಮಂತ್ರಾಕ್ಷತೆ ಪಡೆದ ಕೆಲ ಕೈದಿಗಳು ಕೆಲ ಕಾಲ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗವು ಸಹ ನಡೆಯಿತು ಎಂದು ಮುಖ್ಯ ಅರ್ಚಕರಾದ ಅನಂತ ಪ್ರಸಾದ್ ಮಾಹಿತಿ ನೀಡಿದ್ದಾರೆ.
Also Read: ಶ್ರೀರಾಮ ಪ್ರಾಣ ಪ್ರತಿಷ್ಠೆಗೆ ಮೈಸೂರು ಒಡೆಯರಿಗೆ ಅಧಿಕೃತ ಆಹ್ವಾನ, ಜ.21 ರಂದು ಅಯೋಧ್ಯೆ ಪ್ರವಾಸ
ಅದೇನೆ ಹೇಳಿ ದಿನ ಕಳೆದಂತೆ ರಾಮನ ಜಪ ದೇಶದಲ್ಲಿ ಹೆಚ್ಚುತ್ತಲೇ ಇದೆ. ಇತ್ತ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನ ಕಣ್ತುಂಬಿಕೊಳ್ಳಲು ಇಡೀ ದೇಶವೆ ಎದುರು ನೋಡುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಯಾರು ವಂಚಿತರಾಗಬಾರದೆಂದು ಹಿಂದೂ ಮುಖಂಡರು ಮುಂದಾಗಿದ್ದು ವಿಶೇಷವಾಗಿತ್ತು ಎಂದು ಇದರಲ್ಲಿ ಭಾಗಿಯಾಗಿದ್ದವರು ಅಭಿಪ್ರಾಯಪಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Fri, 19 January 24