ಚಾಮರಾಜನಗರದ ಆಕ್ಸಿಜನ್​ ದುರಂತದ ಬಗ್ಗೆ ಮರುತನಿಖೆ: ದಿನೇಶ್​ ಗುಂಡೂರಾವ್

|

Updated on: Jun 09, 2023 | 4:05 PM

ಚಾಮರಾಜನಗರದ ಆಕ್ಸಿಜನ್​ ದುರಂತದ ಬಗ್ಗೆ ಮರು ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಹಿಂದೆ ಇದ್ದ ಸರ್ಕಾರ ನಡೆಸಿದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಮರು ತನಿಖೆಗೆ ನಿರ್ಧರಿಸಿದ್ದೇವೆ ಎಂದು ಹೇಳಿದರು.

ಚಾಮರಾಜನಗರದ ಆಕ್ಸಿಜನ್​ ದುರಂತದ ಬಗ್ಗೆ ಮರುತನಿಖೆ: ದಿನೇಶ್​ ಗುಂಡೂರಾವ್
ಚಾಮರಾಜನಗರದ ಆಕ್ಸಿಜನ್​ ದುರಂತದ ಮರುತನಿಖೆಗೆ ನಿರ್ಧಾರ ಮಾಡಲಾಗಿದೆ ಎಂದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್
Image Credit source: EPS
Follow us on

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿನ ವಿವಿಧ ಹಗರಣಗಳ ಆರೋಪಗಳ ಬಗ್ಗೆ ಹೊಸದಾಗಿ ತನಿಖೆ ಪ್ರಾರಂಭಿಸಲು ಮುಂದಾದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಇದೀಗ ಚಾಮರಾಜನಗರದ ಆಕ್ಸಿಜನ್​ ದುರಂತದ (Chamarajanagar Oxygen Tragedy) ಬಗ್ಗೆ ಮರು ತನಿಖೆ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚಾಮರಾಜನಗರದ ಆಕ್ಸಿಜನ್​ ದುರಂತದ ಬಗ್ಗೆ ಮರು ತನಿಖೆ ನಡೆಸಲಾಗುವುದು. ಈ ಹಿಂದೆ ಇದ್ದ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ ಆಕ್ಸಿಜನ್​ ದುರಂತದ ಬಗ್ಗೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹೊಸ ಸರ್ಕಾರ ಬಂದಿದ್ದರಿಂದ ಮರು ತನಿಖೆಗೆ ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ಡಿಪಿಆರ್ ಕೂಡ ರೆಡಿಯಾಗುತ್ತಿದೆ ಎಂದರು.

ಆಕ್ಸಿಜನ್ ದುರ್ಘಟನೆ ಸಂಬಂಧ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕೋವಿಡ್ ನಿರ್ವಹಣಾ ಸಮಿತಿಯು ಹೈಕೋರ್ಟ್‌ಗೆ ಈಗಾಗಲೇ ವರದಿ ಸಲ್ಲಿಸಿದ್ದು, 2021ರ ಮೇ 2-3 ರ ರಾತ್ರಿ 36 ಒಳರೋಗಿಗಳ ಸಾವಿಗೆ ಆಮ್ಲಜನಕದ ಲಭ್ಯತೆ ಕೊರತೆಯೇ ಕಾರಣ ಎಂದು ಉಲ್ಲೇಖಿಸಿದೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 36 ರೋಗಿಗಳು ಮೃತಪಟ್ಟಿದ್ದಕ್ಕೆ ಸಂಬಂಧಿಸಿದ ಆರೋಪ ಮತ್ತು ಇತರ ಹಗರಣಗಳ ಬಗ್ಗೆ ತನಿಖೆ ನಡೆಸುವಂತೆ ಇಲಾಖೆಯ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗಷ್ಟೇ ಸೂಚಿಸಿದ್ದರು. ಸಾವಿಗೆ ಯಾರು ಹೊಣೆ ಮತ್ತು ತಪ್ಪಿತಸ್ಥರು ಯಾರು ಎಂಬುದರ ಪತ್ತೆಗೆ ಯಾವುದೇ ತನಿಖೆ ನಡೆದಿಲ್ಲ. ಹೀಗಾಗಿ ತಕ್ಷಣ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದರು.

ಇದನ್ನೂ ಓದಿ: ಪಿಎಸ್​ಐ ಹಗರಣದಲ್ಲಿ ಸುಮ್ಮನೇ ನನ್ನ ಹೆಸರು ತೇಲಿಬಿಟ್ಟಿದ್ದಾರೆ, ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲಿ; ಬಿವೈ ವಿಜಯೇಂದ್ರ ಸವಾಲು

ಘಟನೆಯಲ್ಲಿ ಮೃತಪಟ್ಟ ರೋಗಿಗಳ ಕುಟುಂಬಸ್ಥರು ಜೂನ್ 5 ರಂದು ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಸಮಾಲೋಚನೆ ಸಭೆ ನಡೆಸಿದ್ದು, ಬಿಜೆಪಿ ಸರ್ಕಾರ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲಿಲ್ಲ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ, ಪ್ರಕರಣದ ಸೂಕ್ತ ತನಿಖೆ ನಡೆಸಲು ಕಾಂಗ್ರೆಸ್ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೇ ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡುವ ಭರವಸೆ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಹೀಗಾಗಿ ಸದ್ಯ ಪರಿಹಾರ ಹಣಕ್ಕಿಂತ ನೌಕರಿ ಕೊಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಏನಿದು ಆಕ್ಸಿಜನ್ ದುರಂತ?

ಮೇ 2ರಂದು 2021ರಂದು ಚಾಮರಾಜನಗರ ಜಿಲ್ಲೆಯ ಕೊರೊನಾ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಾಗಬೇಕಿತ್ತು. ಆದರೆ ಮೈಸೂರಿನಿಂದ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೇ ರಾತ್ರಿ 10:30ರಿಂದ ಬೆಳಗಿನ ಜಾವ 2:30ರ ವರೆಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಉಂಟಾಗಿ ವೆಂಟಿಲೇಟರ್‌, ಐಸಿಯು ಹಾಗೂ ಉಸಿರಾಟ ತೊಂದರೆಯಿಂದ ಆಮ್ಲಜನಕದ ನೆರವಿನಲ್ಲಿದ್ದ ರೋಗಿಗಳು ಸಾವನ್ನಪ್ಪಿದ್ದರು.

ದುರ್ಘಟನೆಯಲ್ಲಿ ಸರಕಾರದ ಅಂಕಿಅಂಶಗಳ ಪ್ರಕಾರ 24 ಮಂದಿ ಮೃತಪಟ್ಟಿದ್ದಾರೆ ಎಂದಿತ್ತು. ಆದರೆ ಪ್ರಕರಣದ ತನಿಖೆಗಾಗಿ ಹೈಕೋರ್ಟ್‌ ನೇಮಿಸಿದ್ದ ತನಿಖಾ ಸಮಿತಿ 36 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ನೀಡಿತ್ತು. ಹೈಕೋರ್ಟ್‌ನ ಸೂಚನೆಯಂತೆ, ಮೃತಪಟ್ಟ 24 ಮಂದಿಯ ಕುಟುಂಬಗಳಿಗೆ ಕಳೆದ ವರ್ಷ 2021ರಲ್ಲಿ ಜೂನ್‌ ತಿಂಗಳ ಆರಂಭದಲ್ಲಿ ತಲಾ 2 ಲಕ್ಷ ರೂ. ಹಾಗೂ ಆಗಸ್ಟ್‌ ಎರಡನೇ ವಾರದಲ್ಲಿ 13 ಮಂದಿಗೆ ಹೆಚ್ಚುವರಿಯಾಗಿ ತಲಾ 3 ಲಕ್ಷ ಹಣವನ್ನು ತಾತ್ಕಾಲಿಕ ಪರಿಹಾರವಾಗಿ ಜಿಲ್ಲಾಡಳಿತ ವಿತರಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ