ಚಾಮರಾಜನಗರ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ(Male Mahadeshwara Betta) ಶಿವರಾತ್ರಿ ಜಾತ್ರೆ(Shivratri Jatre) ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ. ಹೀಗಾಗಿ ಫೆ.17ರ ಬೆಳಿಗ್ಗೆ 6 ಗಂಟೆಯಿಂದ ಇದೇ ತಿಂಗಳ 21ರ ಸಂಜೆ 7 ಗಂಟೆ ವರೆಗೆ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ದ್ವಿಚಕ್ರ ವಾಹನಗಳಿಗೆ ನಿರ್ಬಂಧ ವಿಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ.
ದ್ವಿಚಕ್ರ ನಿಲುಗಡೆಗೆ ಹನೂರು ತಾಲೂಕಿನ ಕೌದಳ್ಳಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ಕೌದಳ್ಳಿಯಿಂದ ಬೆಟ್ಟಕ್ಕೆ ಸಾರಿಗೆ ಬಸ್ ವ್ಯವಸ್ಥೆ ಮಾಡಿದೆ. ಜಾತ್ರೆ ಹಿನ್ನೆಲೆಯಲ್ಲಿ ಹೆಚ್ಚಿನ ವಾಹನಗಳು ಬರುವ ಹಿನ್ನೆಲೆ ಅಪಘಾತ ಹಾಗೂ ಟ್ರಾಫಿಕ್ ಸಮಸ್ಯೆ ಸರಿಪಡಿಸಲು ಜಿಲ್ಲಾಡಳಿತ ಈ ಆದೇಶವನ್ನು ಹೊರಡಿಸಿದೆ.
ಇದನ್ನೂ ಓದಿ: ಕೊರೊನಾ ಬಳಿಕ ಮಲೆ ಮಹದೇಶ್ವರನಿಗೆ ಉಘೇ ಉಘೇ: ಕರ್ನಾಟಕದ 2ನೇ ಶ್ರೀಮಂತ ಎನಿಸಿಕೊಂಡ ಮಾದಪ್ಪ
ಮಲೆ ಮಾದಪ್ಪನಿಗೆ ಹರಕೆ ಹೊತ್ತ ಸಾವಿರಾರು ಭಕ್ತರು ಶಿವರಾತ್ರಿ ಹಬ್ಬಕ್ಕೆ ನಾಲ್ಕು ದಿನಗಳ ಮುನ್ನ ಬೆಂಗಳೂರು, ಕನಕಪುರ, ನೆಲಮಂಗಲ, ಮಾಗಡಿ, ಸಾತನೂರು, ಹಾರೋಹಳ್ಳಿ, ರಾಮನಗರ ಕಡೆಯಿಂದ ಕಾಲ್ನಡಿಗೆಯಲ್ಲಿ ಬಸವನ ಕಡಲು ಮೂಲಕ ಕಾವೇರಿ ನದಿ ದಾಟಿಕೊಂಡು (ಸಂಗಮ ನದಿ) ದುರ್ಗಮ ಕಾವೇರಿ ವನ್ಯಧಾಮದಲ್ಲಿ ಬರಿಗಾಲಿನಲ್ಲಿ ಬರುತ್ತಾರೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಮೂಲಕ ಮಾದಪ್ಪನ ದರ್ಶನ ಮಾಡಲಿದ್ದಾರೆ. ನಿಖಿಲ್ ರಿಂದ ಸತತ ಎರಡನೇ ವರ್ಷ ಪಾದಯಾತ್ರೆ ಮಾಡಲಾಗುತ್ತಿದೆ. ಕಳೆದ ವರ್ಷವೂ ಕೂಡ ಪಾದಯತ್ರೆ ಮೂಲಕ ಮಾದಪ್ಪನ ದರ್ಶನ ಪಡೆದಿದ್ದರು. ಪಾದಯಾತ್ರಿಗಳು, ಅಭಿಮಾನಿಗಳ ಜೊತೆಗೆ ಮಹದೇಶ್ವರ ಬೆಟ್ಟಕ್ಕೆ ನಿಖಿಲ್ ಹೆಜ್ಜೆ ಹಾಕಲಿದ್ದಾರೆ. ಇಂದು ಸಂಜೆ 4 ಗಂಟೆಗೆ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳಿ ಮಾದಪ್ಪನ ದರ್ಶನ ಪಡೆಯಲಿದ್ದಾರೆ. ಸುಮಾರು 16 ಕಿ.ಮೀ ಪಾದಯಾತ್ರೆ ನಡೆಸಿ ಮಾದಪ್ಪನ ದರ್ಶನ ಮಾಡಲಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:32 am, Thu, 16 February 23