ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕಾರು ಅಡ್ಡಗಟ್ಟಿ ದರೋಡೆ ಮಾಡಿರುವ ಘಟನೆ ತಾಲೂಕಿನ ಹಾರೋಬಂಡೆ ಬಳಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ ಮಾಡಿ ನಗದು, ಮೊಬೈಲ್ ಕಸಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಬೆಂಗಳೂರು ಮೂಲದ ಸಾದಿಕ್, ಫಕ್ರುಬಾಬು, ಮುಷರಫ್, ಅರುಣ್ ಹಲ್ಲೆಗೊಳಗಾದವರು. ಈ ನಾಲ್ವರೂ ದನದ ವ್ಯಾಪಾರಿಗಳಾಗಿದ್ದು, ಬೆಂಗಳೂರಿನಿಂದ ಅನಂತಪುರಕ್ಕೆ ಬಾಡಿಗೆ ಕಾರಿನಲ್ಲಿ ಹೊರಟಿದ್ದರು. ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ವ್ಯಾಪಾರಿಗಳ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ವ್ಯಾಪಾರಿಗಳ ಬಳಿಯಿದ್ದ 3.10ಲಕ್ಷ ನಗದು, 3 ಮೊಬೈಲ್ ಕಸಿದುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.