ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 13: ಆಂಧ್ರ ಪ್ರದೇಶದ ಚಿತ್ತೂರು ತಾಲೂಕಿನ ಚಂದ್ರಗಿರಿ ಬಳಿ ಲಾರಿ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕಬಳ್ಳಾಪುರ (Chikkaballapur) ಮೂಲದ ಮೂವರು ಮೃತಪಟ್ಟಿದ್ದಾರೆ. ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ತಿರುಪತಿ-ಅನಂತಪುರ ರಾಷ್ಟ್ರೀಯ ಹೆದ್ದಾರಿಯ ಭಾಕರಪೇಟ ಘಾಟ್‌ನಲ್ಲಿ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಹರಿಸ್ಥಳ ನಿವಾಸಿಗಳಾದ ಮುನಿವೆಂಕಟ ರೆಡ್ಡಿ (55) , ಚಾಲಕ ರಮೇಶ (34), ಮಂಜುನಾಥ್ (38) ಮೃತ ದುರ್ದೈವಿಗಳು. ತೇಜಸ್ ಎಂಬುವರಿಗೆ ಗಂಭೀರ ಗಾಯವಾಗಿದೆ. ತಿರುಪತಿಗೆ ಹೋಗಿ, ಗುರುವಾರ ಸಂಜೆ ಚಿಕ್ಕಬಳ್ಳಾಪುರಕ್ಕೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಒಂದೇ ಕುಟುಂಬವದರು ಎರಡು ಕಾರಿನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದರು. ತಿಮ್ಮಪ್ಪನ ದರ್ಶನ ಪಡೆದು ಗುರವಾರ ಸಂಜೆ ಕುಟುಂಬಸ್ಥರು ಚಿಕ್ಕಬಳ್ಳಾಪುರಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ಒಂದು ಕಾರಿನ ಮೇಲೆ ಟೊಮ್ಯಾಟೊ ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕಾರು ಜಖಂಗೊಂಡಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎಲ್.ಸುಬ್ಬರಾಯುಡು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಕಾರು ಹಾಗೂ ಟಿಟಿ ವಾಹನದ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮೊಗ್ಲಿಯಲ್ಲಿ ಡಿವೈಡರ್ಗೆ ಕಾರು ಡಿಕ್ಕಿಯಾಗಿ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಒಂದು ಮಗು ಸೇರಿದಂತೆ ಐವರಿಗೆ ಗಂಭೀರ ಗಾಯವಾಗಿದೆ. ಮೃತರನ್ನು ಬೆಂಗಳೂರು ಮೂಲದವರೆಂದು ಗುರುತಿಸಲಾಗಿದೆ. ಕೆಎ50ಪಿ 1154 ನಂಬರ್ನ ಇನ್ನೋವಾ ಕಾರು ತಿರುಮಲದಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಟೈರ್ ಒಡೆದು ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ವಾಹನದಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಬಂಗಾರ್ ಪಾಳಯಂ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಂಗಾರ್ ಪಾಳಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:09 am, Fri, 13 September 24