ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(S.N. Subbareddy) ಪ್ರತಿವರ್ಷದಂತೆ ಈ ವರ್ಷವೂ 501 ಉಚಿತ ಸಾಮೂಹಿಕ ಮದುವೆ ಸಮಾರಂಭವನ್ನು ಬಾಗೇಪಲ್ಲಿಯ ಗಡಿದಂ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಇಂದು (ಮಾ.10) ಆಯೋಜನೆ ಮಾಡಿದ್ದಾರೆ. ಜೊತೆಗೆ ಸಾಮೂಹಿಕ ಮದುವೆ ಸಮಾರಂಭದಲ್ಲಿ ಈ ಭಾರಿ ತಮ್ಮ ಏಕೈಕ ಪುತ್ರ ಅಭಿಷೇಕ್ ರೆಡ್ಡಿಯ ಮದುವೆಯನ್ನು ಹಮ್ಮಿಕೊಂಡಿದ್ದಾರೆ. ಸಾಮೂಹಿಕ ಮದುವೆಯಲ್ಲಿ ಹೆಚ್ಚಿನ ಜೋಡಿಗಳನ್ನು ಸೆಳೆಯಲು ಮುಂದಾಗಿರುವ ಶಾಸಕರು, ತಮ್ಮ ಕಾರ್ಯಕ್ರಮದಲ್ಲಿ ಮದುವೆಯಾದರೆ, ತಲಾ ವಧುವರರಿಗೆ 50 ಸಾವಿರ ರೂಪಾಯಿ ಮೌಲ್ಯದ ಒಂದು ಸೀಮೆ ಹಸು, 50 ಸಾವಿರ ರೂಪಾಯಿ ಹಣ, ಗುಣಮಟ್ಟದ ತಾಳಿ, ಬಟ್ಟೆ, ಕಾಲುಂಗುರ ಸೇರಿದಂತೆ ಹುಡುಗಿ ಕೈಹಿಡಿಯುವ ವರನಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರ್ ವೇಲ್, ಜಮೀನು ಮಂಜೂರು ಆಫರ್ ನೀಡಿದ್ದಾರೆ. ಇದರಿಂದ ಹಿಂದೆ ಮುಂದೆ ನೋಡದ ಕೆಲವು ಅಪ್ರಾಪ್ತರು ಹಾಗೂ ಮದುವೆಯಾದವರು ಕೂಡ ಮದುವೆ ನೊಂದಣಿಗೆ ಬಂದು ಸಿಕ್ಕಿ ಹಾಕಿಕೊಂಡಿದ್ದಾರೆ.
ಶಾಸಕರ ಆಫರ್ಗಳನ್ನು ಪಡೆಯಲು ಬರೋಬ್ಬರಿ 350ಕ್ಕೂ ಹೆಚ್ಚು ಜೋಡಿಗಳು ಮದುವೆಗೆ ಅರ್ಜಿ ಹಾಕಿದ್ರು. ಆದರೆ ಬಾಲ್ಯ ವಿವಾಹ, ಪೋಷಕರ ಒಪ್ಪಿಗೆ ಇಲ್ಲದಿರುವ ಹಾಗೂ ಎರಡನೆ ಮದುವೆಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಪ್ರತಿಯೊಂದು ಅರ್ಜಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಾಸಕರ ಸಿಬ್ಬಂದಿಗಳು ಪರಿಶೀಲನೆ ನಡೆಸಿ, ಕೊನೆಗೆ 212 ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಲಿದ್ದಾರೆ. ಮತ್ತೊಂದೆಡೆ ಕಳೆದ ಮೂರು ವರ್ಷಗಳಿಂದ ಕೊರೊನಾ ಕಾಟ ಹೆಚ್ಚಾಗಿ ಕೆಲವರು ಮದುವೆ ಮಾಡಿಕೊಳ್ಳುವುದನ್ನೆ ಮುಂದೂಡಿದ್ರು. ಇದೀಗ ಕೊರೊನಾ ಇಲ್ಲದಿರುವುದರಿಂದ ಆರ್ಥಿಕವಾಗಿ ಹೊರೆಯಾಗಲ್ಲ ಎಂದು ಜೋಡಿಗಳು ಮದುವೆಗೆ ಮುಂದಾಗಿದ್ದಾರೆ. ಆದ್ರೆ ಕೆಲವರು ದುರಾಸೆಗೆ ಬಿದ್ದು ಅಪ್ರಾಪ್ತರ ಮದುವೆ, ಎರಡನೆ ಮದುವೆಗೆ ಮುಂದಾಗಿ ಅರ್ಜಿ ಹಾಕಿದ್ದು ವಿಪರ್ಯಾಸ.
ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:22 am, Fri, 10 March 23