ಗ್ಯಾರಂಟಿ ಯೋಜನೆಗಳ ಎಫೆಕ್ಟ್: ಹಾಲು ಉತ್ಪಾದಕ ರೈತರ ಕೈಸೇರದ ಸಬ್ಸಿಡಿ ಹಣ!

Chikkaballapur News: ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಬರಬೇಕಾದ ಪ್ರೋತ್ಸಾಹಧನ ಕಳೆದ ನಾಲ್ಕು ತಿಂಗಳುಗಳಿಂದ ಬರೋಬ್ಬರಿ 31.20 ಕೋಟಿ ರೂ ಬಿಡುಗಡೆಯಾಗದೆ ಬಾಕಿ ಉಳಿದಿದೆ. ಸಕಾಲಕ್ಕೆ ಸಬ್ಸಿಡಿ ಹಣ ಕೈಸೇರದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಎಫೆಕ್ಟ್: ಹಾಲು ಉತ್ಪಾದಕ ರೈತರ ಕೈಸೇರದ ಸಬ್ಸಿಡಿ ಹಣ!
ಹಾಲು ಉತ್ಪಾದಕ ರೈತರು
Image Credit source: tv9 kannada
Edited By:

Updated on: Aug 19, 2026 | 10:02 PM

ಚಿಕ್ಕಬಳ್ಳಾಪುರ, ಆಗಸ್ಟ್​​ 19: ಚಿಕ್ಕಬಳ್ಳಾಪುರ (chikkaballapur) ಜಿಲ್ಲೆಯ ರೈತರು ಗುಣಮಟ್ಟದ ಹಾಲನ್ನು ಡೈರಿಗೆ ಪೂರೈಸಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹಧನ ನೀಡುತ್ತಿದೆ. ಆದರೆ ಗ್ಯಾರಂಟಿ ಯೋಜನೆಗಳ ಪರಿಣಾಮವೋ ಅಥವಾ ಸರ್ಕಾರದ ಆರ್ಥಿಕ ಸಂಕಷ್ಟವೋ ಗೊತ್ತಿಲ್ಲ, ರೈತರಿಗೆ ಕಳೆದ ನಾಲ್ಕು ತಿಂಗಳುಗಳಿಂದ ಬರಬೇಕಾದ ಕೋಟ್ಯಂತರ ರೂ ಪ್ರೋತ್ಸಾಹಧನ ಇನ್ನು ಬಿಡುಗಡೆಯಾಗಿಲ್ಲ. ಇದರಿಂದ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

31 ಕೋಟಿ 20 ಲಕ್ಷ ರೂ ಪ್ರೋತ್ಸಾಹಧನ ಬಾಕಿ

ಹಸುಗಳಿಗೆ ಗುಣಮಟ್ಟದ ಮೇವು, ನೀರು ಹಾಗೂ ಪೌಷ್ಟಿಕ ಆಹಾರ ಒದಗಿಸಿ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಕಳೆದ ನಾಲ್ಕು ತಿಂಗಳುಗಳಿಂದ ಒಂದು ರೂ ಪ್ರೋತ್ಸಾಹಧನ ಬಿಡುಗಡೆ ಆಗಿಲ್ಲ.

ಇದನ್ನೂ ಓದಿ: ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ದಾಳಿಂಬೆ ಕದ್ದ ಕಳ್ಳರು: ಬರದ ನಡುವೆಯೂ ಬೆಳೆ ಬೆಳೆದ ರೈತ ಕಂಗಾಲು

ಜಿಲ್ಲೆಯ ರೈತರಿಗೆ ಪ್ರತಿ ತಿಂಗಳು 7 ಕೋಟಿ 80 ಲಕ್ಷ ರೂ ಪ್ರೋತ್ಸಾಹಧನ ನೀಡಬೇಕಿದ್ದು, ಕಳೆದ ನಾಲ್ಕು ತಿಂಗಳುಗಳಿಂದ ಒಟ್ಟು 31 ಕೋಟಿ 20 ಲಕ್ಷ ರೂ ಬಾಕಿ ಉಳಿದಿದೆ. ಇದರಿಂದ ರೈತರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಿಮೂಲ್) ಅಧ್ಯಕ್ಷ ಮಂಜುನಾಥ್ ರೆಡ್ಡಿ ಅವರನ್ನು ಕೇಳಿದಾಗ, ‘ಸರ್ಕಾರದ ಮೇಲೆ ಒತ್ತಡ ಹೇರಿ ಶೀಘ್ರದಲ್ಲೇ ಪ್ರೋತ್ಸಾಹಧನ ಬಿಡುಗಡೆ ಮಾಡಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು.’

ಕೂಡಲೇ ಪ್ರೋತ್ಸಾಹಧನ ಬಿಡುಗಡೆ ಚಿಮೂಲ್ ನಿರ್ದೇಶಕ ಒತ್ತಾಯ

ಜಿಲ್ಲೆಯಲ್ಲಿ 1,009 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಸದ್ಯ ಪ್ರತಿದಿನ ಸುಮಾರು 5 ಲಕ್ಷ 10 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಜಿಲ್ಲೆಯ ಸುಮಾರು 40 ಸಾವಿರ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನದಿಂದ ರೈತರು ಹೆಚ್ಚಿನ ಕಾಳಜಿಯಿಂದ ಹಸುಗಳನ್ನು ಸಾಕುತ್ತಿದ್ದು, ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ತೀವ್ರ ಬರಗಾಲ ಇರುವ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಚಿಮೂಲ್ ನಿರ್ದೇಶಕ ಕಾಂತರಾಜ್ ಸರ್ಕಾರವನ್ನು ಒತ್ತಾಯಿಸಿದರು.

ಶಾಸಕ ಪ್ರದೀಪ್ ಈಶ್ವರ್ ಭರವಸೆ 

ಇನ್ನೊಂದೆಡೆ ಚಿಮೂಲ್ ಆಡಳಿತ ಕಚೇರಿಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿದರು. ಈ ವೇಳೆ ಹಾಲು ಉತ್ಪಾದಕರಿಗೆ ಬಾಕಿ ಉಳಿದಿರುವ ಪ್ರೋತ್ಸಾಹಧನದ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಶಾಸಕ ಪ್ರದೀಪ್ ಈಶ್ವರ್, ‘ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಶೀಘ್ರದಲ್ಲಿ ಬಾಕಿ ಹಣ ಬಿಡುಗಡೆ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.’

ಇದನ್ನೂ ಓದಿ: ಟೊಮ್ಯಾಟೋ ಬೆಳೆಗಾರರಿಗೆ ಗಾಯದ ಮೇಲೆ ಬರೆ: ಕೆಜಿಗೆ 5ರೂ; ಕಟಾವು ಖರ್ಚಿಗೂ ಕಾಸಿಲ್ಲದೆ ಕಂಗಾಲಾದ ಅನ್ನದಾತ!

ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳಿಗೆ ರಾಜ್ಯಾದ್ಯಂತ ಉತ್ತಮ ಬೇಡಿಕೆ ಇದೆ. ಹೀಗಾಗಿ ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ನೀಡುವುದು ಅತ್ಯಗತ್ಯವಾಗಿದೆ. ಬಾಕಿ ಉಳಿದಿರುವ ಪ್ರೋತ್ಸಾಹಧನವನ್ನು ಸರ್ಕಾರ ತ್ವರಿತವಾಗಿ ಬಿಡುಗಡೆ ಮಾಡಿದರೆ, ರೈತರಿಗೆ ಆರ್ಥಿಕ ನೆರವಾಗುವುದರ ಜೊತೆಗೆ ಹಾಲು ಉತ್ಪಾದನೆಯೂ ಮತ್ತಷ್ಟು ಹೆಚ್ಚಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us