ಒಂದೇ ಅಂಗಡಿಯಲ್ಲಿ 20ಕ್ಕೂ ಹೆಚ್ಚು ಬಾರಿ ತಾಮ್ರ ಕಳವು: ಚಿಕ್ಕಬಳ್ಳಾಪುರದಲ್ಲಿ ಖದೀಮ ಪೊಲೀಸರ ವಶಕ್ಕೆ!

ಚಿಕ್ಕಬಳ್ಳಾಪುರದ ಸ್ಕ್ರ್ಯಾಪ್ ಅಂಗಡಿಯೊಂದರಲ್ಲಿ ಕಳೆದ ಒಂದು ವರ್ಷದಿಂದ 20ಕ್ಕೂ ಹೆಚ್ಚು ಬಾರಿ ತಾಮ್ರದ ವಸ್ತುಗಳನ್ನು ಕಳವು ಮಾಡುತ್ತಿದ್ದ 25 ವರ್ಷದ ಯುವಕ ಸಲೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 9 ಲಕ್ಷ ರೂ. ಮೌಲ್ಯದ ತಾಮ್ರ ಕದ್ದು ಮಾರಾಟ ಮಾಡುತ್ತಿದ್ದ ಈತನನ್ನು ಅಂಗಡಿ ಮಾಲೀಕ ಹಾಗೂ ಪೊಲೀಸರು ಜಂಟಿಯಾಗಿ ಸಿಸಿಟಿವಿ ಸಹಾಯದಿಂದ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಒಂದೇ ಅಂಗಡಿಯಲ್ಲಿ 20ಕ್ಕೂ ಹೆಚ್ಚು ಬಾರಿ ತಾಮ್ರ ಕಳವು: ಚಿಕ್ಕಬಳ್ಳಾಪುರದಲ್ಲಿ ಖದೀಮ ಪೊಲೀಸರ ವಶಕ್ಕೆ!
ಸಾಂದರ್ಭಿಕ ಚಿತ್ರ
Image Credit source: gettyimages.com

Updated on: Oct 06, 2026 | 9:29 AM

ಮುಖ್ಯಾಂಶಗಳು

  • ಚಿಕ್ಕಬಳ್ಳಾಪುರದಲ್ಲಿ ಒಂದೇ ಅಂಗಡಿಯಲ್ಲಿ 20 ಬಾರಿ ತಾಮ್ರ ಕದ್ದ ಯುವಕ ಬಂಧನ.
  • ಒಂಬತ್ತು ಲಕ್ಷ ಮೌಲ್ಯದ ತಾಮ್ರ ಕದ್ದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಖದೀಮ.
  • ಸಿಸಿಟಿವಿ ಸಹಾಯದಿಂದ ಕಾವಲು ಕಾಯ್ದು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು.

ಚಿಕ್ಕಬಳ್ಳಾಪುರ, ಅಕ್ಟೋಬರ್ 06: ಒಂದೇ ಆಕ್ರಿ ಅಥವಾ ಸ್ಕ್ರ್ಯಾಪ್ ಅಂಗಡಿಗೆ ಕನ್ನಹಾಕಿ, 20ಕ್ಕೂ ಹೆಚ್ಚು ಬಾರಿ ತಾಮ್ರದ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ 25 ವರ್ಷದ ಯುವಕನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಲೀಂ ಎಂದು ಗುರುತಿಸಲಾಗಿದೆ. ಈತ ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ತಾಮ್ರದ ಸ್ಕ್ರ್ಯಾಪ್ ಕಳವು ಮಾಡಿದ್ದಾಗಿ ತಿಳಿದುಬಂದಿದೆ. ಆತನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ನಡೆದಿದ್ದೇನು?

ಚಿಕ್ಕಬಳ್ಳಾಪುರದ ‘ಸಿಂಡಿಕೇಟ್ ಸ್ಕ್ರ್ಯಾಪ್’ ಅಂಗಡಿಯ ಮಾಲೀಕ ಮುಷೀರ್ ಅಹಮದ್ ಎಂಬುವವರು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಅಂಗಡಿಯಲ್ಲಿದ್ದ ತಾಮ್ರ ಹಾಗೂ ಇತರ ಬೆಲೆಬಾಳುವ ಸಾಮಗ್ರಿಗಳು ಪದೇಪದೇ ನಾಪತ್ತೆಯಾಗುತ್ತಿರುವುದನ್ನು ಗಮನಿಸಿದ್ದರು. ಗೌರಿಬಿದನೂರು ಮತ್ತು ಶಿಡ್ಲಘಟ್ಟ ಪ್ರದೇಶಗಳಲ್ಲಿ ರಸ್ತೆ ವಿಸ್ತರಣೆ ವೇಳೆ ತೆರವುಗೊಳಿಸಲಾದ ಹಳೆಯ ಕಟ್ಟಡಗಳ ವಿದ್ಯುತ್ ವೈರಿಂಗ್ ಸಾಮಗ್ರಿಗಳನ್ನು ಮುಷೀರ್ ಖರೀದಿಸಿ, ತಾಮ್ರವನ್ನು ಪ್ರತ್ಯೇಕವಾಗಿ ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದರು.

ಸಾಮಗ್ರಿಗಳು ಕಣ್ಮರೆಯಾಗುತ್ತಿದ್ದಂತೆ ಅನುಮಾನಗೊಂಡು ಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಮಧ್ಯರಾತ್ರಿ ವೇಳೆ ಯುವಕನೊಬ್ಬ ಅಂಗಡಿಗೆ ನುಗ್ಗಿ ತಾಮ್ರ ಕದಿಯುವುದು ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕ ಹಾಗೂ ಸಿಬ್ಬಂದಿ ಕಾವಲು ಕಾಯ್ದು ಹಿಡಿಯಲು ಯತ್ನಿಸಿದಾಗ, ಭಾರಿ ಮಳೆಯಿದ್ದ ಕಾರಣ ಆರೋಪಿ ತಪ್ಪಿಸಿಕೊಂಡಿದ್ದ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

ಬೆಸತ್ತ ಮಾಲೀಕ ಮುಷೀರ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಮಾರ್ಗದರ್ಶನದಂತೆ ಕಾವಲು ಕುಳಿತಾಗ, ತಾಮ್ರ ಕದಿಯುತ್ತಿದ್ದ ಸಲೀಂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಆರೋಪಿ ಡ್ರಗ್ಸ್ ಚಟಕ್ಕೆ ದಾಸನಾಗಿದ್ದು, ಕದ್ದ ತಾಮ್ರವನ್ನು ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಕಳವಿಗೆ ಸಹಕರಿಸುತ್ತಿದ್ದ ಇಬ್ಬರು ಸಹಚರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us