ಬ್ಯಾಂಕ್ ಮ್ಯಾನೇಜರ್ ಹೇಳಿದ ಮಾತುಕೇಳಿ ಹಣ ದುರುಪಯೋಗ, ಮ್ಯಾನೇಜರ್ ಎಸ್ಕೇಪ್-ಕ್ಯಾಷಿಯರ್ ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Oct 05, 2022 | 6:09 PM

ಬ್ಯಾಂಕ್ ಮ್ಯಾನೇಜರ್ ಮಣೀಂದ್ರ ರೆಡ್ಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾನೆ... ದೌರ್ಭಾಗ್ಯವೆಂದರೆ ಇತ್ತ ಆತನ ಸಹೋದ್ಯೋಗಿ ಸುನಿಲ್ ಸಹ ಅಷ್ಟೇ ಫಾಸ್ಟ್​​ ಆಗಿ ಸಾವಿನ ಮನೆ ಸೇರಿದ್ದಾನೆ. ಇದೀಗ ಆತನ ಸಾವಿನ ಹಿಂದೆ ಅನುಮಾನಗಳು ಮೂಡಿವೆ.

ಬ್ಯಾಂಕ್ ಮ್ಯಾನೇಜರ್ ಹೇಳಿದ ಮಾತುಕೇಳಿ ಹಣ ದುರುಪಯೋಗ, ಮ್ಯಾನೇಜರ್ ಎಸ್ಕೇಪ್-ಕ್ಯಾಷಿಯರ್ ಆತ್ಮಹತ್ಯೆ
ಬ್ಯಾಂಕ್ ಮ್ಯಾನೇಜರ್ ಹೇಳಿದ ಮಾತುಕೇಳಿ ಹಣ ದುರುಪಯೋಗ, ಮ್ಯಾನೇಜರ್ ಎಸ್ಕೇಪ್-ಕ್ಯಾಷಿಯರ್ ಆತ್ಮಹತ್ಯೆ
Follow us on

Gauribidanur: ಅವರಿಬ್ಬರೂ ಸ್ನೇಹಿತರು! ಇಬ್ಬರೂ ಒಂದೆ ತಾಲೂಕಿನವರೂ ಸಹ. ಇನ್ನು ಇಬ್ಬರೂ ಒಂದೇ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದವರು. ಒಬ್ಬ ಬ್ಯಾಂಕ್ ಮ್ಯಾನೇಜರ್ ಆಗಿದ್ರೆ, ಮತ್ತೊಬ್ಬ ಕ್ಯಾಷಿಯರ್ ಆಗಿ ಕೆಲಸ ಮಾಡ್ತಿದ್ದ. ಆದ್ರೆ ಸ್ವತಃ ಬ್ಯಾಂಕ್ ಮ್ಯಾನೇಜರ್… ಬ್ಯಾಂಕ್ ಗೆ ಸೇರಿದ ಲಕ್ಷ ಲಕ್ಷ ಹಣವನ್ನು ಅಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಎಸ್ಕೇಪ್ ಆಗಿಬಿಟ್ಟ. ಸರಿಯಾಗಿ ಅದೇ ವೇಳೆ ಮತ್ತೊಬ್ಬ ವಿಚಾರಣೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ!!

ಇವ ಮಣೀಂದ್ರ ರೆಡ್ಡಿ -ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ಕಲ್ಲೋಡಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಹಾಲಿ ಬ್ಯಾಂಕ್ ಮ್ಯಾನೇಜರ್. ಮತ್ತೊಬ್ಬ ಇದೇ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಕುಂಟಚಿಕ್ಕನಹಳ್ಳಿ ಬ್ರಾಂಚ್ ನ ಕ್ಯಾಶಿಯರ್ -ಸುನಿಲ್. ಇಬ್ಬರೂ ಇದಕ್ಕೂ ಮೊದಲು ಎಲ್ಲೋಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದರು.

ಆಗಿನಿಂದಲೂ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಮಣೀಂದ್ರ ರೆಡ್ಡಿ ಎಸ್ ಎನ್ನುವಾತ ಬ್ಯಾಂಕ್ ಗೆ ಸೇರಿದ 84 ಲಕ್ಷದ 78 ಸಾವಿರ ರೂಪಾಯಿ ಹಣವನ್ನು ಬೇನಾಮಿ ಹಾಗೂ ಅಪರಿಚಿತರ ಖಾತೆಗಳಿಗೆ ವರ್ಗಾವಣೆ ಮಾಡಿ, ಬ್ಯಾಂಕ್ ಗೆ ಮೋಸ ಮಾಡಿದ್ದಾನೆ. ಇದರ ಬಗ್ಗೆ ಮಾಹಿತಿ ಇದ್ದ ಬ್ಯಾಂಕ್ ನ ಉದ್ಯೋಗಿ ಸುನಿಲ್ ಎನ್ನುವಾತ ಪ್ರಸ್ತುತ ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗೌರಿಬಿದನೂರಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಕಲ್ಲೋಡಿ ಶಾಖೆಯ ಹಾಲಿ ಬ್ಯಾಂಕ್ ಮ್ಯಾನೇಜರ್ ಮಣೀಂದ್ರ ರೆಡ್ಡಿ, ಬ್ಯಾಂಕ್ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆ ಮಣೀಂದ್ರ ರೆಡ್ಡಿ ವಿರುದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಟಿ. ದೇವದಾಸ್ ಅವರು ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 409, 420 ಅನುಸಾರ ಪ್ರಕರಣ ದಾಖಲು ಮಾಡಿದ್ದಾರೆ.

ಅದು ತಿಳಿದುಬರುತ್ತಿದ್ದಂತೆ ಮಣೀಂದ್ರ ರೆಡ್ಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿಬಿಟ್ಟ… ದೌರ್ಭಾಗ್ಯವೆಂದರೆ ಇತ್ತ ಆತನ ಸಹೋದ್ಯೋಗಿ ಸುನಿಲ್ ಸಹ ಅಷ್ಟೇ ಫಾಸ್ಟ್​​ ಆಗಿ ಸಾವಿನ ಮನೆ ಸೇರಿದ್ದಾನೆ. ಇದೀಗ ಆತನ ಸಾವಿನ ಹಿಂದೆ ಅನುಮಾನಗಳು ಮೂಡಿವೆ. ಸ್ವತಃ ಮೃತ ಸುನಿಲನ ತಾಯಿ ಸೌಭಾಗ್ಯ ಅವರು ಆರೋಪಿ 1 ಮಣೀಂದ್ರ ರೆಡ್ಡಿಯೇ ಏನೊ ಮಾಡಿದ್ದಾನೆ ಅಂತಾ ಆತನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಲ್ಲೋಡಿ ಶಾಖೆ ಹಾಗೂ ಎಲ್ಲೋಡು ಶಾಖೆಯಲ್ಲಿ ಅದೇನು ವಂಚನೆ ನಡೆಸಿದೆಯೋ ಈ ಜೋಡಿ… ಬ್ಯಾಂಕ್ ಹಣ ದುರುಪಯೋಗ ಆರೋಪದ ಮೇಲೆ ಒಬ್ಬ ಎಸ್ಕೇಪ್ ಆದ್ರೆ… ಮತ್ತೊಬ್ಬ ಸಾವಿನ ಮನೆ ಸೇರಿದ್ದು ವಿಪರ್ಯಾಸವೇ ಸರಿ. ಇತ್ತ ಗೌರಿಬಿದನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ -ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ