ಮುದ್ದೇನಹಳ್ಳಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಸ್ಕಂದಗಿರಿ ಚಾರಣಕ್ಕೂ ನಿರ್ಬಂಧ

|

Updated on: Mar 24, 2023 | 5:15 PM

ಮಾರ್ಚ್ 25ರಂದು ಬೆಳಗ್ಗೆ ಮುದ್ದೇನಹಳ್ಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಕಾರಣ ಸ್ಕಂದಗಿರಿ ಚಾರಣಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

ಮುದ್ದೇನಹಳ್ಳಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಸ್ಕಂದಗಿರಿ ಚಾರಣಕ್ಕೂ ನಿರ್ಬಂಧ
ಸ್ಕಂದಗಿರಿ ಚಾರಣ
Image Credit source: indiahikes.com
Follow us on

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿ (Muddenahalli) ಗ್ರಾಮಕ್ಕೆ ನಾಳೆ (ಮಾ. 25) ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಸ್ಕಂದಗಿರಿ (Skandagiri) ಚಾರಣಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಈ ಕುರಿತಾಗಿ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಡಿ.ಎಲ್.ನಾಗೇಶ್, ನರೇಂದ್ರ ಮೋದಿಯವರು ಭೇಟಿ ನೀಡಲಿರುವ ಹಿನ್ನೆಲೆ ಮುದ್ದೇನಹಳ್ಳಿಗೆ ಹೊಂದಿಕೊಂಡಿರುವ ಪ್ರಸಿದ್ದ ಚಾರಣ ಸ್ಥಳವಾದ ಸ್ಕಂದಗಿರಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. ನಂದಿ, ತಿರ‍್ನಹಳ್ಳಿ, ಮುದ್ದೇನಹಳ್ಳಿ ಮೂಲಕ ಸ್ಕಂದಗಿರಿಗೆ ರಸ್ತೆ ಇರುವ ಕಾರಣ ನಿರ್ಬಂಧ ವಿಧಿಸಲಾಗಿದೆ. ಸುರಕ್ಷತೆ ದೃಷ್ಠಿಯಿಂದ 24-03-2023 ರಂದು ಬೆಳಿಗ್ಗೆ 10 ಗಂಟೆಯಿಂದ 25-03-2023ನೇ ಮಧ್ಯಾಹ್ನ 3 ಗಂಟೆಯವರೆಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು. ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ಸತ್ಯಸಾಯಿ ಲೋಕಸೇವಾ ಟ್ರಸ್ಟ್ನಿಂದ ಮಧುಸೂದನ್‌ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮೆಡಿಕಲ್ ಕಾಲೇಜು ತಲೆ ಎತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಮೆಡಿಕಲ್ ಕಾಲೇಜು ಉದ್ಘಾಟಿಸಲಿದ್ದಾರೆ. ಮತ್ತೊಂದಡೆ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳವೂ ಆಗಿರುವ ಮುದ್ದೇನಹಳ್ಳಿಯಲ್ಲಿ ಅವರ ಸಮಾಧಿ ಸ್ಮಾರಕ ಹಾಗೂ ಮ್ಯೂಸಿಯಂ ಇದ್ದು, ಅಲ್ಲಿಗೂ ಸಹ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: Nandi Hills: ಮುದ್ದೇನಹಳ್ಳಿಗೆ ಮೋದಿ ಭೇಟಿ ಹಿನ್ನೆಲೆ; ನಾಳೆಯಿಂದಲೇ ನಂದಿಗಿರಿಧಾಮಕ್ಕೆ ಪ್ರವೇಶ ನಿರ್ಬಂಧ

ಮೆಟ್ರೋ ರೈಲಿನಲ್ಲಿ ಮೋದಿ ಪ್ರಯಾಣ

ಬೆಳಗ್ಗೆ 10.40ಕ್ಕೆ ನೇರವಾಗಿ ಹೆಲಿಕಾಪ್ಟರ್ ಮೂಲಕ ಸತ್ಯಸಾಯಿ ಗ್ರಾಮ ಮುದ್ದೇನಹಳ್ಳಿಗೆ ಆಗಮಿಸಲಿರುವ ಮೋದಿ, ಕಾಲೇಜು ಉದ್ಘಾಟನೆ ನಂತರ 12 ಗಂಟೆಗೆ ಹೆಲಿಕಾಪ್ಟರ್ ಮೂಲಕ ವಾಪಸಾಗಲಿದ್ದಾರೆ. ಮಾರ್ಚ್​ 25ರಂದು ಮೋದಿ ಅವರು ರಾಜ್ಯದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಕೆಆರ್​ಪುರಂ, ವೈಟ್​ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಸಂಚಾರಕ್ಕೆ ಚಾಲನೆ ನೀಡಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ.

ಇದನ್ನೂ ಓದಿ: Narendra Modi: ನಾಳೆ ರಾಜ್ಯಕ್ಕೆ ಮೋದಿ; ಎಷ್ಟೊತ್ತಿಗೆ ಎಲ್ಲಿ ಕಾರ್ಯಕ್ರಮ? ಇಲ್ಲಿದೆ ಸಂಪೂರ್ಣ ವಿವರ

ಪ್ರವಾಸಿ ತಾಣ ನಂದಿಗಿರಿಧಾಮಕ್ಕೂ ಪ್ರವೇಶ ನಿರ್ಬಂಧ

ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಕಾರಣ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೂ ಪ್ರವೇಶ ನಿರ್ಬಂಧಿಸಲಾಗಿದೆ. ಮಾರ್ಚ್ 24 ರಂದು ಬೆಳಿಗ್ಗೆ 10 ಗಂಟೆಯಿಂದ ಮಾರ್ಚ್ 25 ಮಧ್ಯಾಹ್ನ 2 ಗಂಟೆಯ ವರೆಗೂ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್ಎಂ ನಾಗರಾಜ್ ಗುರುವಾರ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು, ಎಸ್ಪಿಜಿ ಅಧಿಕಾರಿಗಳು ಹಾಗೂ ಪ್ರಧಾನಿಯವರ ಭದ್ರತಾ ಸಿಬ್ಬಂದಿ ಈಗಾಗಲೇ ನಂದಿಗಿರಿಧಾಮದ ಅತಿಥಿ ಗೃಹದಲ್ಲಿ ತಂಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಧಿಕಾರಿಗಳ ತುರ್ತು ಸಂಚಾರಕ್ಕೆ ಅನುಕೂಲ ಕಲ್ಪಿಸಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಪಿಡಬ್ಲ್ಯೂಡಿ ಅಧಿಕಾರಿಗಳ ಕೊರಿಕೆ ಮೇರೆಗೆ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಭೇಟಿಗೆ ನಿರ್ಬಂಧ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಮತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.