ಚಿಕ್ಕಬಳ್ಳಾಪುರ, ಜ.29:ಗರ್ಭಿಣಿ ಮಹಿಳೆಯರ ಮಡಿಲು ತುಂಬಿ ಸೀರೆ ಕುಪ್ಪಸ ಅರಿಸಿನ ಕುಂಕುಮ ಬಳೆ ಹಣ್ಣು ಸೇರಿದಂತೆ ಭರ್ಜರಿ ಗಿಫ್ಟ್ನ್ನು ಚಿಕ್ಕಬಳ್ಳಾಪುರ(Chikkaballapur)ದ ಕಾಂಗ್ರೆಸ್ ಮುಖಂಡನೊರ್ವ ನೀಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ನಗರದ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಬಡ ಹಾಗೂ ಮದ್ಯಮ ವರ್ಗದ ಗರ್ಭಿಣಿಯರಿಗೆ ಉಚಿತ ಸೀಮಂತ ಮಾಡುವುದಾಗಿ ಕರೆ ನೀಡಿದ್ದರು. ಇದರಿಂದ ಸಾವಿರಾರು ಜನ ಗರ್ಭಿಣಿಯರು ಸಾಮೂಹಿಕ ಉಚಿತ ಸೀಮಂತದಲ್ಲಿ ಭಾಗಿಯಾಗಿ ಸಂತಸ ಹಂಚಿಕೊಂಡರು.
ಇನ್ನು ಗರ್ಭಿಣಿಯರಿಗೆ ಖ್ಯಾತ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರ ಹಾಗೂ ಆರೋಗ್ಯ ಜಾಗೃತಿ ಮೇಳ ಸಹ ಆಯೋಜನೆ ಮಾಡಲಾಗಿತ್ತು. ಗರ್ಭೀಣಿಯರು ಸಾಲುಗಟ್ಟಿ ವೈದ್ಯರುಗಳಿಂದ ಮಾಹಿತಿ ಪಡೆದು ಆತಂಕ ನಿವಾರಣೆ ಮಾಡಿಕೊಂಡರು. ಇನ್ನು ಸೀಮಂತದಲ್ಲಿ ಭರ್ಜರಿ ಹೋಳಿಗೆ ಊಟ ಏರ್ಪಡಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಗರ್ಭಿಣಿ ಮಹಿಳೆ ಮಲಗುವ ಕೋಣೆಯಲ್ಲಿ ಬಾಲ ಗೋಪಾಲನ ಚಿತ್ರವನ್ನು ಎಲ್ಲಿ ಮತ್ತು ಹೇಗೆ ಹಾಕಬೇಕು?
ಅದೇಷ್ಟೊ ಜನ ಗರ್ಭಿಣಿಯರಿಗೆ ಸೀಮಂತ ಮಾಡಲು ತಂದೆ-ತಾಯಿ ಇರಲ್ಲ, ಇದ್ದರೂ ಕೂಡ ಕೆಲ ಕುಟುಂಬಗಳಲ್ಲಿ ಬಾಂದವ್ಯ ಇರಲ್ಲ. ಇನ್ನು ಕೆಲವು ಪ್ರೇಮ ವಿವಾಹವಾದವರು ಸೀಮಂತದಿಂದ ಮಿಸ್ ಮಾಡಿಕೊಂಡ ಉದಾಹರಣೆಗಳಿವೆ. ಇಂಥಹದರಲ್ಲಿ ಸಮಾಜ ಸೇವಕನೊರ್ವ ಸಾಮೂಹಿಕ ಸೀಮಂತ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು.
ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಮಹಿಳೆಯ ದೇಹದಲ್ಲೂ ಹಾರ್ಮೋನು ಬದಲಾವಣೆಯಾಗುತ್ತದೆ. ಇದರಿಂದ ಆಕೆಯ ಸುತ್ತಾ ನಕರಾತ್ಮಕತೆ ಸುಳಿದಾಡುತ್ತಿರುತ್ತದೆ. ಇದರಿಂದ ಕೆಲವೊಮ್ಮೆ ಗರ್ಭಿಣಿ ಮಹಿಳೆ ಖಿನ್ನತೆಗೆ ಜಾರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಆಕೆಯನ್ನು ಖುಷಿಪಡಿಸುವ ಸಲುವಾಗಿ ಸೀಮಂತವನ್ನು ಮಾಡಲಾಗುತ್ತದೆ. ಮತ್ತು ಈ ಶಾಸ್ತ್ರದಲ್ಲಿ ಗರ್ಭಿಣಿ ಮಹಿಳೆಗೆ ಆರತಿ ಬೆಳಗುತ್ತಾರೆ, ಬಳೆ ತೊಡಿಸುವ ಶಾಸ್ತ್ರ ಮಾಡುತ್ತಾರೆ. ಮತ್ತು ಕೆಲವು ಸಂಪ್ರದಾಯದಲ್ಲಿ ಮಂತ್ರಗಳ ಪಠಣೆ ಮಾಡಲಾಗುತ್ತದೆ. ಇವೆಲ್ಲವೂ ಗರ್ಭಿಣಿ ಮಹಿಳೆ ಮತ್ತು ಆಕೆಯ ಹೊಟ್ಟೆಯೊಳಗಿನ ಮಗುವಿಗೆ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಹಾಗೂ ಬಳೆಯ ಸದ್ದು, ಆಕೆಯ ಖಿನ್ನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿಯೇ ಸೀಮಂತದಲ್ಲಿ ಗರ್ಭಿಣಿ ಮಹಿಳೆಗೆ ಹಸಿರು ಗಾಜಿನ ಬಳೆಗಳನ್ನು ತೊಡಿಸಲಾಗುತ್ತದೆ. ಅಲ್ಲದೆ ಸೀಮಂತದಲ್ಲಿ ತೊಡುವ ಹಸಿರು ಸೀರೆ, ಬಳೆ ಸಮೃದ್ಧಿ ಮತ್ತು ಸಂತೋಷದ ಸಂಕೇತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Mon, 29 January 24