ಚಿಕ್ಕಬಳ್ಳಾಪುರ: ಬೈಕ್ ವೀಲ್ಹಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ

ಬೈಕ್ ಚಾಲನೆ ಮಾಡುತ್ತಿದ್ದ ತಾಜ್ ಉಲ್ಲಾ ಷರೀಪ್ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ. ಹಿಂಬದಿ ಸವಾರ ಕೈಯಲ್ಲಿ ಲಾಂಗ್ ಹಿಡಿದು ಅದನ್ನು ರಸ್ತೆಗೆ ಸವರುತ್ತಾ ಕೇಕೆ ಹಾಕುತ್ತಾ ಸಂಚರಿಸುತ್ತಿದ್ದರು. ಆದರೆ ವಿಧಿಯಾಟ ಬದಲಾಗಿ ನಡೆದ ಅಪಘಾತದಲ್ಲಿ ಹಿಂಬದಿ ಸವಾರ ಸಾವನ್ನಪ್ಪಿದ್ದಾನೆ. ಈ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಬೈಕ್ ವೀಲ್ಹಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ
ಬೈಕ್ ವೀಲ್ಹಿಂಗ್​ ವೇಳೆ ಅಪಘಾತಗೊಂಡು ಗಾಯಗೊಂಡಿದ್ದ ವಿದ್ಯಾರ್ಥಿ ಸಾವು
Updated By: Rakesh Nayak Manchi

Updated on: Aug 08, 2023 | 10:49 PM

ಚಿಕ್ಕಬಳ್ಳಾಪುರ, ಆಗಸ್ಟ್ 8: ಸಿನಿಮೀಯ ಶೈಲಿಯಲ್ಲಿ ಬೈಕ್ ವೀಲ್ಹಿಂಗ್ (Bike Wheeling) ಮಾಡುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತಕ್ಕೀಡಾಗಿ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಇದೀಗ ಆತ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಅಪ್ರೋಜ್ ಪಾಷಾ (16) ಮೃತ ವಿದ್ಯಾರ್ಥಿ.

ಮೈಲಾಂಡಹಳ್ಳಿ ಗ್ರಾಮದ 18 ವರ್ಷದ ತಾಜ್ ಉಲ್ಲಾ ಷರೀಪ್ ಹಾಗೂ ಅಪ್ರೋಜ್ ಪಾಷಾ ಇತ್ತೀಚೆಗೆ ಕುರುಟಹಳ್ಳಿ ಗ್ರಾಮದ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಮಾಡಿದ್ದರು. ಬೈಕ್ ಚಾಲನೆ ಮಾಡುತ್ತಿದ್ದ ತಾಜ್ ಉಲ್ಲಾ ಷರೀಪ್ ಪ್ರಾಣದ ಹಂಗು ದೊರೆದು ಬೇಕಾ ಬಿಟ್ಟಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದರೆ, ಹಿಂಬದಿ ಸವಾರನಾಗಿದ್ದ ಅಪ್ರೋಜ್ ಪಾಷಾ ಕೈಯಲ್ಲಿ ಮಾರುದ್ದ ಲಾಂಗ್ ಹಿಡಿದು ಅದನ್ನು ರಸ್ತೆಗೆ ಸವರುತ್ತಾ ಕೇಕೆ ಹಾಕುತ್ತಾ ಸಂಚರಿಸಿದ್ದರು.

ಇದನ್ನೂ ಓದಿ: ವಿಡಿಯೋ ನೋಡಿ; ಮೂಡಿಗೆರೆ ಬಳಿ ಭೀಕರ ಅಪಘಾತ, ಸಿಸಿಟಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ತಾಜ್ ಉಲ್ಲಾ ಷರೀಪ್ ಅತಿವೇಗವಾಗಿ ಅಡ್ಡಾದಿಡ್ಡಿಯಾಗಿ ಅಜಾಗುರುಕತೆಯಿಂದ ಬೈಕ್ ವೀಲ್ಹಿಂಗ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಕೆ.ಎಸ್.ತಮ್ಮರೆಡ್ಡಿಯವರ ಜಮೀನನ ಬಳಿ ರಸ್ತೆಯ ಮೋರಿಗೆ ಡಿಕ್ಕಿ ಹೊಡೆದಿದ್ದನು. ಡಿಕ್ಕಿ ರಭಸಕ್ಕೆ ಬೈಕ್ ಸವಾರ ತಾಜ್ ಉಲ್ಲಾ ಷರೀಪ್ ಪ್ರಾಣಾಪಾಯದಿಂದ ಪಾರಾಗಿದ್ದನು. ಆದರೆ ಗಂಭೀರ ಗಾಯಗೊಂಡಿದ್ದ ಅಪ್ರೋಜ್ ಪಾಷಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕೀತ್ಸೆ ಫಲಕಾರಿಯಾಗದೆ ನಿನ್ನೆ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಇತ್ತ, ಮಗನನ್ನು ಕಳೆದುಕೊಂಡ ಆತನ ತಂದೆ ತಾಯಿ ದುಃಖತಪ್ತರಾಗಿದ್ದಾರೆ. ಇನ್ನೊಂದೆಡೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 279, 337 ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ