ಕೆಲವೇ ತಿಂಗಳ ಹಿಂದೆ ಟೊಮೆಟೊ ಬೆಳೆದವನೇ ಮಹಾಶೂರ. ಟೊಮೆಟೊ ಬೆಳೆದ ಕೆಲವು ರೈತರು ಚಿನ್ನದ ಅಂಗಡಿಯನ್ನೇ ಪ್ರಾರಂಭ ಮಾಡಿದ್ದರು. ಆದರೆ ಈಗ ಹಗಲು-ರಾತ್ರಿ ಕಷ್ಟಪಟ್ಟು ಬೆಳೆದ ಟೊಮೆಟೊಗೆ 3 ಕಾಸಿನ ಬೆಲೆ ಇಲ್ಲದ ಕಾರಣ ಟೊಮೆಟೊ ತೋಟವನ್ನು ಕುರಿ, ಮೇಕೆ, ಹಸುಗಳು ತಿಂದು ಹಸಿವನ್ನು ನೀಗಿಸಿಕೊಳ್ಳುತ್ತಿವೆ. ಅಷ್ಟಕ್ಕೂ ಅದು ಎಲ್ಲಿ ಅಂತೀರಾ ಈ ವರದಿ ನೋಡಿ… ಹುಲುಸಾಗಿ ಬೆಳೆದು ನಿಂತಿರುವ ಟೊಮೆಟೊ ತೋಟ, ಟೊಮೆಟೊ ಕೀಳದೇ ಗಿಡದಲ್ಲೇ ನಳನಳಿಸುತ್ತಿರುವ ಹಣ್ಣುಗಳು, ಗ್ರಾಹಕರ ಹೊಟ್ಟೆ ಸೇರಬೇಕಿದ್ದ ಟೊಮೆಟೊ ಕುರಿಗಳ ಹಸಿವು ನೀಗಿಸುತ್ತಿರುವುದು ಚಿಕ್ಕಬಳ್ಳಾಪುರ (chikkaballapur) ಜಿಲ್ಲೆಯ ಚಿಂತಾಮಣಿ (Chintamani) ತಾಲ್ಲೂಕಿನ ಸ್ವರಪಲ್ಲಿ ಗ್ರಾಮದ ಬಳಿ. ಗ್ರಾಮದ ರೈತ ನರಸಿಂಹಮೂರ್ತಿ ಹಗಲು ರಾತ್ರಿ ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಟೊಮೆಟೊ ಬೆಳೆದಿದ್ದಾನೆ. ಆದರೆ ಈಗ 15 ಕೆಜಿಯ ಟೊಮೆಟೊ ಬಾಕ್ಸ್ 50 ರೂಪಾಯಿಗಳಿಗೆ ಬಿಕರಿಯಾಗುತ್ತಿದೆ. ಇದರಿಂದ ಟೊಮೆಟೊ ಕೀಳುವ ಕೂಲಿಯೂ ಬರಲ್ಲವೆಂದು ಮನನೊಂದು ತೋಟಕ್ಕೆ ಕುರಿಗಳನ್ನು ಬಿಟ್ಟು ಮೇಯಿಸುತ್ತಿದ್ದಾನೆ ನೊಂದ ರೈತ ನರಸಿಂಹಮೂರ್ತಿ.
ಕೆಲವು ತಿಂಗಳ ಹಿಂದೆ ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ ಭಾಗದ ಟೊಮೆಟೊ ಮಾರುಕಟ್ಟೆಗಳಲ್ಲಿ 15 ಕೆಜಿಯ ಒಂದು ಕ್ರೇಟ್ ಟೊಮೆಟೊ ಬಾಕ್ಸ್ 2,500 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಆಗ ಚಿಂತಾಮಣಿ ರೈತನೋರ್ವ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿ, ಟೊಮೆಟೊ ಹಣದಲ್ಲಿ ಚಿನ್ನದ ಅಂಗಡಿಯನ್ನೇ ತೆರೆದಿದ್ದ. ಆದರೆ ಈಗ ಬೆಳೆದಿರುವ ಟೊಮೆಟೊ ಕೇಳೋರಿಲ್ಲದೇ ಕಾಲಕಸವಾಗಿದೆ. ಇನ್ನು ಚಿಕ್ಕಬಳ್ಳಾಪುರದ ಎಪಿಎಂಸಿ ಟೊಮೆಟೊ ಮಾರುಕಟ್ಟೆಯಲ್ಲಿ 15 ಕೆಜಿಯ ಟೊಮೆಟೊ ಬಾಕ್ಸ್ ಇಂದು 30-40 ರೂಪಾಯಿಗಳಿಗೆ ಬಿಕಾರಿಯಾಗಿದೆ.
ನಮ್ಮ ರೈತರೇ ಹಾಗೆ ಬೆಲೆ ಬಂತು ಎಂದು ದಿಢೀರನೇ ಎಲ್ಲರೂ ಒಂದೇ ಬೆಳೆಯನ್ನೇ ಬೆಳೆಯುತ್ತಾರೆ. ಇದರಿಂದ ಈಗ ಕಣ್ಣು ಹಾಯಿಸಿದ ಕಡೆ ಟೊಮೆಟೊ ಬೆಳೆದು ನಿಂತಿದೆ. ಈ ಮಧ್ಯೆ ಈಗ ಟೊಮೆಟೊ ಸೀಜನ್ ಆಗಿರುವ ಕಾರಣ ಎಲ್ಲೆಡೆ ಸ್ಥಳೀಯವಾಗಿ ಟೊಮೆಟೊ ಬೆಳೆದಿದ್ದಾರೆ. ಇದರಿಂದ ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಟೊಮೆಟೊಗೆ ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Published On - 2:56 pm, Sat, 21 October 23