ಚಿಕ್ಕಬಳ್ಳಾಪುರ, ಆಗಸ್ಟ್ 10: ಇದು ನಿನ್ನೆ ವರದಿ ಮಾಡಲಾಗಿದ್ದ – ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಕಳ್ಳ ಪೊಲೀಸ್ ಆಟವಂತೆ: ಹಣ ಬದಲಾವಣೆ-ಅಕ್ರಮ ಬಂಧನ-ಸಿಬ್ಬಂದಿಗೆ ಕಿರುಕುಳ ಆರೋಪ -TV9 Digitalನಲ್ಲಿ ಪ್ರಕರಣ ಬಟಾಬಯಲು ಸುದ್ದಿಯ ಫಲಶೃತಿ. ಇಬ್ಬರು ಪೊಲೀಸರು ಸೇರಿ ಪಿಂಕ್ ಟು ಗ್ರೀನ್ ನೋಟ್ ಜಾಲದ ಪ್ರಕರಣ (FIR) ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಬಾಗೇಪಲ್ಲಿ ಠಾಣೆಯ (Bagepalli police) ಗುಪ್ತವಾರ್ತೆ ಕಾನ್ ಸ್ಟೇಬಲ್ ನರಸಿಂಹಮೂರ್ತಿ, ಕಾನ್ ಸ್ಟೇಬಲ್ ಅಶೋಕ್ ಸೇರಿ ಶ್ರೀಕಾಂತ್‌ರೆಡ್ಡಿ ಉರುಫ್ ಸುರೇಶ್, ರವಿ ಉರುಫ್ ಚಲಪತಿ, ಸೋಮಶೇಖರ್ ಹಾಗೂ ಇತರೆ 10 ಜನರ ಮೇಲೆ IPC section 120B, 418, 420 ಅನುಸಾರ ಪ್ರಕರಣ ದಾಖಲಾಗಿದೆ (Chikkaballapur police).
ಮೈಸೂರು ಮೂಲದ ತ್ರಿವೇಣಿ, ಮಂಡ್ಯ ಮೂಲದ ಹರೀಶ್, ಬೆಂಗಳೂರು ಮೂಲದ ಅನಿತಾರಿಂದ ದೂರು ನೀಡಲಾಗಿದೆ. ಪ್ರಕರಣದಲ್ಲಿ ದೂರುದಾರರು 50 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಆಗಸ್ಟ್ 4 ರಂದು ಸಂಜೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಗಡಿದಂ ಬಳಿ ಘಟನೆ ನಡೆದಿತ್ತು. ಎರಡೂ ಕಡೆಯ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದರು.
ಕೊನೆಗೂ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ ಪೊಲೀಸರು:
ಬಾಗೇಪಲ್ಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಜಾಲದ ಮೇಲೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಗುಪ್ತವಾರ್ತೆ ಕಾನ್ಸ್ಟೇಬಲ್ ನರಸಿಂಹಮೂರ್ತಿ ಹಾಗೂ ಕಾನ್ಸ್ಟೇಬಲ್ ಅಶೋಕ ದಾಳಿ ನಡೆಸಿದರು. ಆಗ ಬಾಗೇಪಲ್ಲಿಯ ಪ್ರಭಾರಿ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಸಿಕ್ಕ ಮಾಲಿನ ಸಮೇತ ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು.
ಆದರೆ ಠಾಣೆಯಲ್ಲಿ ಎ1 ಆರೋಪಿ ಶ್ರೀಕಾಂತ್‌ರೆಡ್ಡಿ ಉರುಫ್ ಸುರೇಶ್‌ನನ್ನು 2 ದಿನಗಳ ಕಾಲ ಲಾಕಪ್‌ನಲ್ಲಿ ಇಟ್ಟಿದ್ದರು. ಇನ್ನು ಹಣ ಬದಲಾವಣೆಗೆಂದು ಬಂದಿದ್ದ ಮೈಸೂರು ಮೂಲದ ತ್ರಿವೇಣಿ, ಮಂಡ್ಯ ಮೂಲದ ಹರೀಶ್, ಬೆಂಗಳೂರು ಮೂಲದ ಅನಿತಾ ಸೇರಿದಂತೆ ಕೆಲವರನ್ನು ಠಾಣೆಯಲ್ಲಿ ಇಟ್ಟುಕೊಂಡು ಪ್ರಕರಣವನ್ನು ದಾಖಲಿಸದೇ ಬಿಟ್ಟು ಕಳುಹಿಸಿದ್ದರು. ಪೊಲೀಸರ ಕರ್ತವ್ಯಲೋಪದ ಬಗ್ಗೆ ಮಾಹಿತಿ ಹಾಗೂ ದಾಖಲೆ ಸಂಗ್ರಹಿಸಿದ್ದ ಟಿವಿ 9 ವಿಸ್ತ್ರೃತವಾಗಿ ವರದಿ ಪ್ರಕಟ ಮಾಡಿತ್ತು. ಏನೂ ಆಗೇ ಇಲ್ಲ ಎನ್ನುತ್ತಿದ್ದ ಪೊಲೀಸರು ಈಗ ದೂರುದಾರರಿಂದ 5 ಪುಟಗಳ ದೂರನ್ನು ಪಡೆದು ಐಪಿಸಿ ಸೆಕ್ಷನ್ 120ಬಿ, 418, 420 ಅನುಸಾರ ಪ್ರಕರಣ ದಾಖಲಿಸಿದ್ದಾರೆ.
ಇನ್ಸ್ಪೆಕ್ಟರ್ ರವಿಕುಮಾರ್ ಕರ್ತವ್ಯಲೋಪ ತನಿಖೆಯಾಗುತ್ತಾ?
ಇನ್ನು ಪಿಂಕ್ ಟು ಗ್ರೀನ್ ನೋಟು ಬದಲಾವಣೆಯ ಜಾಲದ ಮೇಲೆ ಬಾಗೇಪಲ್ಲಿ ಠಾಣೆಯ ಪೊಲೀಸರು ದಾಳಿ ಮಾಡಿದಾಗ ಸ್ಥಳಕ್ಕೆ ಭೇಟಿ ನೀಡಿ, ಆರೋಪಿಗಳನ್ನು ಮಾಲು ಸಮೇತ ಠಾಣೆಗೆ ತಂದಿದ್ದ ಬಾಗೇಪಲ್ಲಿ ಪ್ರಭಾರಿ ಇನ್ಸ್ಪೆಕ್ಟರ್ ರವಿಕುಮಾರ್ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿದ್ದರು. ರಾಜಕೀಯ ಒತ್ತಡವೋ, ಹಣದ ಆಮೀಷವೋ ನೊಂದವರಿಂದ ದೂರು ಪಡೆಯದೇ ಆರೋಪಿ ಶ್ರೀಕಾಂತ್‌ರೆಡ್ಡಿ ಉರುಫ್ ಸುರೇಶ್ ವಿರುದ್ದ ದೂರು ದಾಖಲಿಸದೇ 2 ದಿನ ಠಾಣೆಯ ಲಾಕಪ್‌ನಲ್ಲಿಟ್ಟುಕೊಂಡು ಏನೂ ಆಗಿಲ್ಲ ಎನ್ನುವಂತೆ ಬಿಟ್ಟುಕಳುಹಿಸಿದ್ದರು. ಆದರೆ ಕೆಳಹಂತದ ಸಿಬ್ಬಂದಿಯ ಮೇಲೆ ದೂರು ದಾಖಲು ಮಅಡಿಕೊಂಡಿದ್ದು, ಸದರಿ ಇನ್ಸ್ಪೆಕ್ಟರ್‌ರವರನ್ನು ಎಫ್.ಐ.ಆರ್. ನಲ್ಲಿ ಕೈಬಿಡಲಾಗಿದೆ. ಈ ಬಗ್ಗೆ ತನಿಖೆಯಾಗಲಿದೆಯೇ?
ಪ್ರಕರಣದಲ್ಲಿ 50 ಲಕ್ಷ ರೂಪಾಯಿ ಹಣ ವಂಚನೆ :
ಚಿಂತಾಮಣಿ ಮೂಲದ ಶ್ರೀಕಾಂತ್‌ರೆಡ್ಡಿ ಉರುಫ್ ಸುರೇಶ್, ರವಿ ಉರುಫ್ ಚಲಪತಿ ಹಾಗೂ ಮಂಡ್ಯ ಮೂಲದ ಸೋಮಶೇಖರ್ ಸೇರಿಕೊಂಡು ತಮ್ಮ ಬಳಿ 2 ಸಾವಿರ ರೂಪಾಯಿ ಮುಖಬೆಲೆಯ 2500 ಕೋಟಿ ರೂಪಾಯಿ ಹಣವಿದೆ. ಅದನ್ನು 500 ರೂಪಾಯಿ ಮುಖಬೆಲೆಯ ನೋಟುಗಳನ್ನಾಗಿ ಬದಲಾಯಿಸಿಕೊಳ್ಳಬೇಕು, 10 ಲಕ್ಷ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡಿದರೆ ಅದಕ್ಕೆ ಪರ್ಯಾಯವಾಗಿ 12.50 ಲಕ್ಷ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದಾಗಿ ಮೈಸೂರು ಮೂಲದ ತ್ರಿವೇಣಿ, ಮಂಡ್ಯ ಮೂಲದ ಹರೀಶ್, ಬೆಂಗಳೂರು ಮೂಲದ ಅನಿತಾರವರನ್ನು ನಂಬಿಸಿ, ಜುಲೈ-21 ರಿಂದ ಆಗಸ್ಟ್-4 ರವರೆಗೂ 50 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಸತ್ಯ ಅರಿಯದೇ ಸಿಡಿಮಿಡಿಗೊಂಡ ಎಸ್ಪಿ ಡಿ.ಎಲ್.ನಾಗೇಶ್ :
ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪಿಂಕ್ ಟು ಗ್ರೀನ್ ನೋಟು ಚಲಾವಣೆ ದಂಧೆ ಹಾಗೂ ಆ ಪ್ರಕರಣದಲ್ಲಿ ಬಾಗೇಪಲ್ಲಿ ಪೊಲೀಸರ ಕರ್ತವ್ಯಲೋಪದ ಕುರಿತು ಟಿವಿ 9ನಲ್ಲಿ ವಿಸ್ತೃತ ವರದಿ ಪ್ರಸಾರವಾಗಿದ್ದನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದರ ಬದಲು ವಿಳಂಬ ನೀತಿ ಅನುಸರಿಸಿದ್ದ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್ ಆಗಸ್ಟ್ 9 ರಂದು ಸಂಜೆ ಟಿವಿ 9 ಹಿರಿಯ ಪ್ರತಿನಿಧಿ ಭೀಮಪ್ಪ ಪಾಟೀಲ್ ಸೇರಿದಂತೆ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಮಾಹಿತಿ ಪಡೆಯಲು ಕಛೇರಿಗೆ ಹೋಗಿದ್ದರು. ಆ ವೇಳೆ ವರದಿಗಾರರನ್ನು ನೋಡಿ ಸಿಡಿಮಿಡಿಗೊಂಡ ಐ.ಪಿ.ಎಸ್. ಅಧಿಕಾರಿ ಡಿ.ಎಲ್. ನಾಗೇಶ್ ಎಲ್ಲಾ ನೀವೇ ಬರೆದುಕೊಂಡಿದ್ದೀರಿ.. ನಾನೇನು ಹೇಳುವುದು.. ನಾನು ಯಾವುದೇ ಮಾಹಿತಿ ನೀಡಲ್ಲ.. ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದೆಯೆಂದು ಕ್ಯಾಮರಾ ಆಫ್ ಮಾಡಿಸಿದರು. ಅವರು ತಾವು ಎಸ್ಪಿ ಎನ್ನುವುದನ್ನು ಕೆಲಕಾಲ ಮರೆತಂತೆ ಕಂಡುಬಂದಿತ್ತು.
ಟಿವಿ-9 ವರದಿಗೆ ಅಭಿನಂದನೆ :
ಇನ್ನು. ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪಿಂಕ್ ಟು ಗ್ರೀನ್ ನೋಟು ಚಲಾವಣೆ ದಂಧೆ ಹಾಗೂ ಆ ಪ್ರಕರಣದಲ್ಲಿ ಬಾಗೇಪಲ್ಲಿ ಪೊಲೀಸರ ಕರ್ತವ್ಯಲೋಪದ ಕುರಿತು ಟಿವಿ 9ನಲ್ಲಿ ವಿಸ್ತೃತ ವರದಿ ಪ್ರಕಟವಾಗಿದ್ದನ್ನು ಗಮನಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ನಮ್ಮ ಪ್ರತಿನಿಧಿ ಭೀಮಪ್ಪ ಪಾಟೀಲ್‌ಗೆ ಕರೆ ಮಾಡಿ, ಅಭಿನಂದನೆ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Thu, 10 August 23