ಚಿಕ್ಕಮಗಳೂರು, ಡಿ.09: ಬೆಂಗಳೂರಿನಿಂದ ಟ್ರಕ್ಕಿಂಗ್ (Trekking) ಬಂದಿದ್ದ ಯುವಕನೊಬ್ಬ ರಾಣಿಝರಿ ಪಾಯಿಂಟ್ (Rani Jhari Point) ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದಾನೆ(Missing). ಗುಡ್ಡದ ತುದಿಯಲ್ಲಿ ಯುವಕನ ಟೀ ಶರ್ಟ್, ಮೊಬೈಲ್, ಸ್ಲಿಪರ್ ಪತ್ತೆಯಾಗಿದೆ. ನಾಪತ್ತೆಯಾದ ಯುವಕನನ್ನು ಭರತ್ ಎಂದು ಗುರುತಿಸಲಾಗಿದೆ. ವೀಕೆಂಡ್ ಹಿನ್ನೆಲೆ ಭರತ್ ಬೆಂಗಳೂರಿನಿಂದ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿರೋ ರಾಣಿಝರಿ ಪಾಯಿಂಟ್ಗೆ ಟ್ರಕ್ಕಿಂಗ್ ಎಂದು ಬಂದಿದ್ದು ನಾಪತ್ತೆಯಾಗಿದ್ದಾನೆ. ಸದ್ಯ ಯುವಕನಿಗಾಗಿ ಅರಣ್ಯ ಇಲಾಖೆ ಶೋಧ ನಡೆಸುತ್ತಿದ್ದಾರೆ.
ಬಿ.ಇ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭರತ್ ಬೆಂಗಳೂರಿನಿಂದ ಹಾರ್ನೆಟ್ ಬೈಕ್ ನಲ್ಲಿ ಚಿಕ್ಕಮಂಗಳೂರಿಗೆ ಬಂದಿದ್ದರು. ಇತ್ತೀಚೆಗೆ ಕಂಪನಿ ಭರತ್ಗೆ 3 ತಿಂಗಳ ಸಂಬಳ ನೀಡಿ ಕೆಲಸದಿಂದ ತೆಗೆದು ಹಾಕಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಇದರಿಂದ ನೊಂದಿದ್ದ ಭರತ್ ತನ್ನ ಬೈಕ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ರಾಣಿಝರಿ ಪಾಯಿಂಟ್ ಬಂದಿದ್ದರು. ಮಗ ವಾಪಸ್ ಮನೆಗೆ ಬಾರದ ಕಾರಣ ಪೋಷಕರು, ಮಗನನ್ನು ಹುಡುಕಿಕೊಂಡು ಚಿಕ್ಕಮಗಳೂರಿಗೆ ಬಂದಿದ್ದಾರೆ. ಇತ್ತ ರಾಣಿಝರಿ ಪಾಯಿಂಟ್ ನಲ್ಲಿ ಭರತ್ ತನ್ನ ಬೈಕ್ ನಿಲ್ಲಿಸಿದ್ದು, ಗುಡ್ಡದ ತುದಿಯಲ್ಲಿ ಟೀ ಶರ್ಟ್, ಮೊಬೈಲ್, ಸ್ಲಿಪರ್ ಪತ್ತೆಯಾಗಿದೆ. ಅನುಮಾನಗೊಂಡಿರುವ ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭರತ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಐಸಿಸ್ ನಂಟು: ಬೆಂಗಳೂರಿನಲ್ಲಿ ಓರ್ವ ಶಂಕಿತ ಉಗ್ರರ ಬಂಧಿಸಿದ ಎನ್ಐಎ
ಇನ್ನು ಕೊಪ್ಪಳದಲ್ಲಿ ಕೋಚಿಂಗ್ ಶಾಲೆಯಲ್ಲಿದ್ದ ಬಾಲಕ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕೊಪ್ಪಳ ತಾಲೂಕಿನ ಟನಕಣಕಲ್ ಗ್ರಾಮದಲ್ಲಿರುವ ಮಾಮನಿ ನವೋದಯ ಕೋಚಿಂಗ್ ಸೆಂಟರ್ ನಲ್ಲಿದ್ದ ಬಾಲಕ ಸಮರ್ಥ ವೀರಣ್ಣ ಕಲಗುಡಿ (11) ನಾಪತ್ತೆಯಾಗಿದ್ದಾನೆ. ಸಮರ್ಥ್, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮನಾಳ ಗ್ರಾಮದ ನಿವಾಸಿ.
ನವೋದಯ ಕೋಚಿಂಗ್ ಪಡೆಯುತ್ತಿದ್ದ. ಕಳೆದ ಜೂನ್ ತಿಂಗಳಿಂದ ವಸತಿ ಸಹಿತವಿರೋ ಕೋಚಿಂಗ್ ಸೆಂಟರ್ ನಲ್ಲಿದ್ದ. ಡಿಸೆಂಬರ್ 7 ರಂದು ಕೋಚಿಂಗ್ ಸೆಂಟರ್ ನಿಂದ ಬಾಲಕ ನಾಪತ್ತೆಯಾಗಿದ್ದಾನೆ. ಡಿಸೆಂಬರ್ 6 ರಂದೆ ಕೊಪ್ಪಳ ನಗರದಿಂದ ಹೆತ್ತವರಿಗೆ ಕರೆ ಮಾಡಿದ್ದ ಸಮರ್ಥ್, ಪರೀಕ್ಷೆಯಿದೆ, ನಮ್ಮ ಗುರುಗಳು ಬೆಂಗಳೂರಿಗೆ ಕರೆದುಕೊಂಡು ಹೋಗ್ತಿದ್ದಾರೆ ಅಂತ ಹೇಳಿದ್ದನಂತೆ. ನಂತರ ಸಮರ್ಥ್ ನಾಪತ್ತೆಯಾಗಿದ್ದಾನೆ. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳೆದ ಎರಡು ದಿನಗಳಿಂದ ಬಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ